ಬೆಳಗಾವಿ: ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಬೆಳಗಾವಿ ರೈತರು ಕಂಗಾಲಾಗಿದ್ದರು. ಕಳೆದೊಂದು ವಾರದಿಂದ ಸುರಿಯಿತ್ತಿರುವ ಮಳೆಯಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಬಿಟ್ಟು ಬಿಡದೇ ಮಳೆಯಾಗುತ್ತಿರುವುದರಿಂದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ. ನೀರಿಲ್ಲದೇ ಕಮರುತ್ತಿದ್ದ ಭತ್ತದ ಸಸಿಗಳಿಗೆ ಸದ್ಯ ಜೀವ ಕಳೆ ಬಂದಂತಾಗಿದೆ.
ನೀರಿಲ್ಲದೇ ಖಾಲಿ ಖಾಲಿಯಾಗಿದ್ದ ಬೆಳಗಾವಿ ಸುತ್ತಮುತ್ತಲಿನ ರೈತರ ಗದ್ದೆಗಳಲ್ಲಿ ಈಗ ಕಣ್ಣು ಹಾಯಿಸಿದಲ್ಲೆಲ್ಲ ನೀರು ಕಾಣಿಸುತ್ತಿದೆ. ರೈತರ ಪ್ರಾರ್ಥನೆಗೆ ವರುಣ ದೇವ ಕೃಪೆ ತೋರಿದ್ದಾನೆ. ಜಿಲ್ಲೆಯಾದ್ಯಂತ ವಾರದಿಂದ ಬಿಟ್ಟು ಬಿಡದೇ ಮಳೆಯಾಗುತ್ತಿದೆ. ಇದರಿಂದ ಬೆಳಗಾವಿಯ ಜಿಲ್ಲೆಯ ವಡಗಾವಿ, ಶಾಹಪುರ, ಯಳ್ಳೂರ, ಖಾಸಬಾಗ, ಬಸವನಕುಡಚಿ, ನಿಲಜಿ, ಮುತಗಾ, ಉಚಗಾಂವ, ಕಡೋಲಿ, ಜಾಫರವಾಡಿ ಸೇರಿ ಬಹುತೇಕ ಗ್ರಾಮಗಳ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಚುರುಕು ಪಡೆದಿವೆ. ರೈತರು ಮಳೆಯಲ್ಲೇ ಉತ್ಸಾಹದಿಂದ ಕೃಷಿ ಕಾಯಕದಲ್ಲಿ ತೊಡಗಿರುವುದು ಕಂಡುಬರುತ್ತದೆ.
ಮಳೆಯಾದರೆ ಮಾತ್ರ ರೈತರಿಗೆ ಲಾಭ: ಭತ್ತದ ನಾಟಿ ಮಾಡಲು ಶಹಾಪುರದಲ್ಲಿ ಗದ್ದೆ ಹದಗೊಳಿಸುತ್ತಿದ್ದ ರೈತ ರಾಜು ಮರ್ವೆ ‘ಈಟಿವಿ ಭಾರತ’ ಮಾತನಾಡಿ, ”ಒಳ್ಳೆಯ ಮಳೆ ಆಗುತ್ತಿರುವುದು ಎಲ್ಲ ರೈತರಿಗೆ ಸಮಾಧಾನ ತಂದಿದೆ. ಹೋದ ವರ್ಷ ಈ ದಿನಕ್ಕೆ ಒಂದೂವರೆ ಅಡಿಯಷ್ಟು ಭತ್ತದ ಬೆಳೆದಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದ ಒಂದು ಅಡಿಯಷ್ಟು ಬೆಳೆ ಬಂದಿಲ್ಲ. ಮಳೆ ಬಂದರೆ ಮಾತ್ರ ರೈತರಿಗೆ ಲಾಭ ಆಗುತ್ತದೆ” ಎನ್ನುತ್ತಾರೆ ಅವರು.