ಬೆಂಗಳೂರು : ಕಾಂಗ್ರೆಸ್ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಹೊರ ರಾಜ್ಯದ ರಾಜಕಾರಣಿಗಳ ಸ್ವಾಗತಕ್ಕೆ ರಾಜ್ಯದ ಐಎಎಸ್ ಅಧಿಕಾರಿಗಳ ನಿಯುಕ್ತಿ ಮಾಡಿದ್ದು ಹಾಗು ಬಿಜೆಪಿಯ 10 ಶಾಸಕರನ್ನು ಪ್ರಸಕ್ತ ಅಧಿವೇಶನದಿಂದ ಅಮಾನತು ಮಾಡಿದ ಸ್ಪೀಕರ್ ಕ್ರಮ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಗೈರಿನ ನಡುವೆ ವಿಧಾನ ಪರಿಷತ್ ಕಲಾಪವನ್ನು ನಡೆಸಲಾಯಿತು.
ಈ ವೇಳೆ 5 ಪ್ರಮುಖ ವಿಧೇಯಕಗಳನ್ನು ಪ್ರತಿಪಕ್ಷ ಸದಸ್ಯರ ಗೈರಿನಲ್ಲಿ ಅಂಗೀಕರಿಸಲಾಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಬಿಜೆಪಿ ಸದಸ್ಯರ ಜೊತೆ ಮಾತನಾಡಿ ಕಲಾಪದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದೆ. ಅವರು ಸಮಯ ಕೋರಿದರು ನಂತರ ಬರಲ್ಲ ಸದನ ನಡೆಸಿ ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ನಂತರ ಜೆಡಿಎಸ್ ಸದಸ್ಯರನ್ನೂ ಸಂಪರ್ಕಿಸಿದೆ. ಅವರೂ ಕೂಡ ಸದನ ನಡೆಸಿ ನಾವು ಸಭೆ ಮಾಡುತ್ತಿದ್ದೇವೆ ನಂತರ ನಾವು ನಮ್ಮ ನಿರ್ಧಾರ ತಿಳಿಸುತ್ತೇವೆ. ಎರಡೂ ಪಕ್ಷದ ಸದಸ್ಯರಿಗಾಗಿ ಸಮಯ ನೀಡಿದರೂ ಅವರು ಬರಲಿಲ್ಲ, ಹಾಗಾಗಿ ಅವರ ಗೈರಿನಲ್ಲೇ ಸದನ ನಡೆಸುತ್ತೇನೆ ಎಂದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಅಧಿವೇಶನ ನಡೆಯುವಾಗ ಅಧಿವೇಶನ ಬಹಿಷ್ಕಾರ ಮಾಡುವುದು ಸರಿಯಲ್ಲ. 5 ವಿದೇಯಕ ಮಂಡನೆಯಾಗಿದೆ. ಬಿಲ್ ಮೇಲೆ ಚರ್ಚೆ ನಡೆಯಬೇಕು. ಬಜೆಟ್ ಮೇಲೂ ಚರ್ಚೆ ಮಾಡಬೇಕಾಗಿದೆ. ಒಂದೆರಡು ದಿನ ಸದನ ನಡೆಸಲಿಲ್ಲ ಎಂದರೆ ಸಾರ್ವಜನಿಕರ ಹಣ ನಷ್ಟವಾಗಲಿದೆ. ನಾಡಿನ ಜ್ವಲಂತ ಸಮಸ್ಯೆಗಳ ಚರ್ಚೆ ಮಾಡಿ ನಾಡಿನ ಅಭಿವೃದ್ಧಿಗೆ ನಿರ್ಣಯ ಕೈಗೊಳ್ಳಲು ಸರ್ಕಾರದ ಕಣ್ಣು ತೆರೆಸಲು ಕಲಾಪ ನಡೆಸಬೇಕು. ಹಾಗಾಗಿ ಪ್ರತಿಪಕ್ಷ ಸದಸ್ಯರು ಪಾಲ್ಗೊಳ್ಳಿ ಎಂದು ಮನವಿ ಮಾಡಿ, ಕಲಾಪ ಮುಂದುವರೆಸಲು ಮನವಿ ನೀಡಿದರು.
ಸಿವಿಲ್ ಪ್ರಕ್ರಿಯಾ ತಿದ್ದುಪಡಿ ವಿಧೇಯಕ : ನಂತರ ಶಾಸಕ ರಚನೆ ಕಲಾಪವನ್ನು ಸಭಾಪತಿಗಳು ಕೈಗೆತ್ತಿಕೊಂಡರು. ಕಾನೂನು ಸಚಿವ ಹೆಚ್ ಕೆ ಪಾಟೀಲ್ ಸಿವಿಲ್ ಪ್ರಕ್ರಿಯಾ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ವಿಧೇಯಕದ ಮೇಲೆ ಮಾತನಾಡಿದ ಹೆಚ್.ವಿಶ್ವನಾಥ್, ಎಷ್ಟೋ ಜನರಿಗೆ ನ್ಯಾಯವಾದಿಗಳಿಗೆ ಹಣ ಕೊಡಲು ಸಾದಸ್ಯವಾಗದೆ ಕೇಸ್ ಬಿಟ್ಟ ಉದಾಹರಣೆಗಳು ಇವೆ. ಇಂತಹದ್ದರಲ್ಲಿ ಬಡವರಿಗೆ ನ್ಯಾಯ ಕೊಡುವ ತಿದ್ದುಪಡಿ ವಿಧೇಯಕವನ್ನು ಸ್ವಾಗತ ಮಾಡುತ್ತೇನೆ ಎಂದರು.
ಮತ್ತೆ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ತಾತ ಆರಂಭಿಸಿದ ಕೇಸ್ ಅನ್ನು ಮೊಮ್ಮಕ್ಕಳು ಮುಂದುವರೆಸಿಕೊಂಡು ಹೋಗುವ ಉದಾಹರಣೆ ಇವೆ. ಕೇಸ್ ಇತ್ಯರ್ಥ ಬಹಳ ವಿಳಂಬವಾಗುತ್ತಿದ್ದು, ಹಣ ವ್ಯಯವಾಗುತ್ತಿದೆ. ಮನಗಂಡು ಬಡವರಿಗೆ ತ್ವರಿತ ನ್ಯಾಯ ಕೊಡುವ ಸರ್ಕಾರದ ಚಿಂತನೆ ಉತ್ತಮವಾಗಿದೆ. ಸರ್ಕಾರಿ ವಕೀಲರಿದ್ದರೂ ಸರ್ಕಾರದ ಪರ ತೀರ್ಪು ಬರುತ್ತಿಲ್ಲ. ಇನ್ನು ಬಡವರ ಪರ ವಾದ ಮಾಡುವ ವಕೀಲರು ಎಷ್ಟು ಪ್ರಾಮಾಣಿಕವಾಗಿ ವಾದ ಮಾಡಲಿದ್ದೇರೆ ಎನ್ನುವುದು ಮುಖ್ಯವಾಗಲಿದೆ ಎಂಬುದನ್ನು ಗಮನಿಸಬೇಕು ಎಂದು ತಿಳಿಸಿ ವಿಧೇಯಕವನ್ನು ಬೆಂಬಲಿಸಿದರು. ಕಾಂಗ್ರೆಸ್ ಸದಸ್ಯರಾದ ಯುಬಿ ವೆಂಕಟೇಶ್, ನಜೀರ್ ಅಹಮದ್, ಜಗದೀಶ್ ಶೆಟ್ಟರ್ ವಿಧೇಯಕ ಸ್ವಾಗತಿಸಿ ಮಾತನಾಡಿ ಕೆಲ ಸಲಹೆ ನೀಡಿದರು