ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ಮತದಾನದ ಮೂಲಕ ಸೆಲೆಕ್ಟ್ ಕಮಿಟಿಗೆ ವಹಿಸುವ ಪ್ರಸ್ತಾವವನ್ನು ವಿಧಾನ ಪರಿಷತ್ ಅಂಗೀಕರಿಸಿದ್ದು, ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ವಿಧಾನ ಪರಿಷತ್ ಕಲಾಪದಲ್ಲಿ ವಿಧೇಯಕ ಮಂಡಿಸಿ ಮಾತನಾಡಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ”ಎಪಿಎಂಸಿ ಕಾಯ್ದೆ ಕೇಂದ್ರ ವಾಪಸ್ ಪಡೆದರೂ ಕರ್ನಾಟಕ ವಾಪಸ್ ಪಡೆದಿಲ್ಲ. ಹಿಂದೆ ಕಾಯ್ದೆ ತಿದ್ದುಪಡಿ ಮಾಡುವ ವೇಳೆಯಲ್ಲಿ ಇರಿಸಿಕೊಂಡಿದ್ದ ಕಾನೂನಿನ ಉದ್ದೇಶ ಈಡೇರಿಲ್ಲ. ಗುಜರಾತ್, ಉತ್ತರ ಪ್ರದೇಶ, ಕರ್ನಾಟಕ ಮಾತ್ರ ಉಳಿಸಿಕೊಂಡಿವೆ. ಮೊದಲೆಲ್ಲಾ ಆವರ್ತನಿಧಿಗೆ ಸೆಸ್ ಸಂಗ್ರಹ ಮಾಡುತ್ತಿದ್ದೆವು. ಇದರಿಂದ 160 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಆದರೆ, ಹೊಸ ಕಾಯ್ದೆ ತಂದ ನಂತರ 60 ಕೋಟಿಯೂ ಆಗಲ್ಲ. ಹಾಗಾಗಿ ಬೆಲೆ ಕುಸಿದಾಗ ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡದ ಸ್ಥಿತಿ ಇದೆ. ಇದ್ದ ಆವರ್ತನಿಧಿ ಕರಗಿ ಹೋಗಿದೆ. ಹಾಗಾಗಿ ಕೊಬ್ಬರಿ ಬೆಂಬಲ ಬೆಲೆಗೆ ಕೇಂದ್ರದ ಕಡೆ ನೋಡಬೇಕಾದ ಸ್ಥಿತಿ ಇದೆ. ಬೆಳೆಗೆ ಎಪಿಎಂಸಿ ಹೊರಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಎರಡೂ ಕಡೆ ಒಂದೇ ಬೆಲೆ ಇದೆ. ರೈತ ಸಂಘಟನೆಗಳೂ ಹಳೆ ಕಾಯ್ದೆಗೆ ಬೇಡಿಕೆ ಇಡುತ್ತಲೇ ಬರುತ್ತಿದ್ದಾರೆ, ಹೋರಾಟವನ್ನೂ ಮಾಡಿದ್ದಾರೆ. ಹಾಗಾಗಿ ತಿದ್ದುಪಡಿ ಕಾಯ್ದೆಗೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು.
ಮತ್ತೊಮ್ಮೆ ಮರು ಪರಿಶೀಲನೆ ಮಾಡಿ: ವಿಧೇಯಕದ ಮೇಲೆ ಮಾತನಾಡಿದ ಬಿಜೆಪಿಯ ಸದಸ್ಯ ತಳವಾರ್ ಸಾಬಣ್ಣ, ”ಈ ಕಾಯ್ದೆ ವರ್ತಕರಿಗೆ ಅನುಕೂಲ ಆಗುವ ರೀತಿ ಇದೆ. ಎರಡು ಲಕ್ಷ ವರ್ತಕರು, ದಲ್ಲಾಳಿಗಳಿಗಾಗಿ 75 ಲಕ್ಷ ರೈತರ ಜೀವನದ ಜೊತೆ ಆಟವಾಡಬಾರದು. ಇದು ಕೇವಲ ಮಧ್ಯವರ್ತಿಗಳ ಪರ ಇರುವ ಕಾಯ್ದೆಯಾಗಿದೆ. ಸಣ್ಣ, ಅತಿಸಣ್ಣ ರೈತರಿಗೆ ಪೂರಕವಾಗಿಲ್ಲ. ಹಾಗಾಗಿ ಕಾಯ್ದೆಯನ್ನು ವಿರೋಧಿಸುತ್ತೇನೆ. ಮತ್ತೊಮ್ಮೆ ಮರು ಪರಿಶೀಲನೆ ಮಾಡಿ” ಎಂದರು.
ಬಿಜೆಪಿ ಸದಸ್ಯ ನವೀನ್ ಮಾತನಾಡಿ, ”ಬಿಜೆಪಿ ತಂದಿರುವ ಕಾಯ್ದೆಯಲ್ಲಿ ಎಪಿಎಂಸಿ ಮುಚ್ಚುತ್ತೇವೆ ಎಂದು ಎಲ್ಲೂ ಹೇಳಿಲ್ಲ. ರೈತ ತನಗೆ ಬೇಕಾದ ಕಡೆ ಮಾರಾಟ ಮಾಡುವ ಅವಕಾಶ ಇದೆ. ಹಾಗಾಗಿ ಆತ ತನಗೆ ಉತ್ತಮ ಬೆಲೆ ಎಲ್ಲಿ ಸಿಗುತ್ತೋ ಅಲ್ಲಿ ಹೋಗಿ ಮಾರಾಟ ಮಾಡುವ ವ್ಯವಸ್ಥೆ ಹಾಗೆಯೇ ಇರಬೇಕು. ಹಾಗಾಗಿ ಈ ಬಿಲ್ಗೆ ವಿರೋಧ ವ್ಯಕ್ತಪಡಿಸುತ್ತೇನೆ” ಎಂದರು.