ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಾಖಲೆಯ 14ನೇ ಬಜೆಟ್ ಮಂಡಿಸಿದ್ದು ಮುಖ್ಯಾಂಶಗಳು ಹೀಗಿವೆ…
- 20% ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ. ಬಿಯರ್ ಮೇಲಿನ ಅಬಕಾರಿ ಸುಂಕವನ್ನು 175% ರಿಂದ 185%ಗೆ ಹೆಚ್ಚಳ ಮಾಡಲಾಗಿದೆ.
- ರಾಜ್ಯದ ಎಲ್ಲ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಿಸಲು ತೀರ್ಮಾನಿಸಲಾಗಿದೆ. ಆಯ್ದ ವಾಹನಗಳ ವರ್ಗಗಳಿಗೆ ವಿಧಿಸುವ ತೆರಿಗೆ ಪರಿಷ್ಕರಣೆ ಬಗ್ಗೆ ಸಿಎಂ ಪ್ರಸ್ತಾಪ ಮಾಡಿದ್ದಾರೆ.
- 2023-24ನೇ ಸಾಲಿನ ರಾಜ್ಯ ಬಜೆಟ್ ಗಾತ್ರ 3,27,747 ಲಕ್ಷ ಕೋಟಿ ರೂಪಾಯಿ. ಈ ಬಾರಿ 85,819 ಕೋಟಿ ರೂ. ಸಾಲ ಮಾಡಲು ನಿರ್ಧಾರ ಮಾಡಲಾಗಿದೆ.
- 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ 52 ಸಾವಿರ ಕೋಟಿ ರೂಪಾಯಿಗಳ ಅವಶ್ಯಕತೆ ಇದೆ. ಗ್ಯಾರಂಟಿ ಯೋಜನೆಗಳಿಂದ 1 ಕೋಟಿ 30 ಲಕ್ಷ ಕುಟುಂಬಗಳಿಗೆ ಸಹಾಯ. ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ ಪ್ರತಿ ತಿಂಗಳು 4 ರಿಂದ 5 ಸಾವಿರ ರೂಪಾಯಿ ಅನುಕೂಲ ಸಿಗಲಿದೆ. ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ ವಾರ್ಷಿಕವಾಗಿ 48 ಸಾವಿರದಿಂದ 60 ಸಾವಿರ ರೂಪಾಯಿಗಳ ಅನುಕೂಲವಾಗಲಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ವಾಣಿಜ್ಯ ತೆರಿಗೆಯ ಪ್ರಮುಖಾಂಶಗಳು
- : ಪರಿಣಾಮಕಾರಿ ತೆರಿಗೆ ಆಡಳಿತಕ್ಕಾಗಿ ಹಾಗೂ ವಾಣಿಜ್ಯೋದ್ಯಮಗಳಿಗೆ ಉತ್ತಮ ಸಂಪರ್ಕವನ್ನು ನೀಡಲು, ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನಾಲ್ಕು ಹೊಸ ವಿಭಾಗಗಳನ್ನು ಶೀಘ್ರದಲ್ಲಿ ಕಾರ್ಯೋನ್ಮುಖ. ಅತ್ಯಧಿಕ ತೆರಿಗೆ ಪಾವತಿದಾರರಿಗಾಗಿ ಒಂದು ಪ್ರತ್ಯೇಕ ವಿಭಾಗವನ್ನು ಬೆಂಗಳೂರು ನಗರದಲ್ಲಿ ಸ್ಥಾಪನೆ ಮಾಡುವ ಬಗ್ಗೆ ಸಿಎಂ ಇಂದಿನ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ.
- 2023-24 ಸಾಲಿಕಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆ ಗುರಿಯನ್ನು 1,01,000 ಕೋಟಿ ರೂ. ನಿಗದಿಪಡಿಸಲಾಗಿದ್ದು 2023-24 ಸಾಲಿನಲ್ಲಿ ಅಬಕಾರಿ ಇಲಾಖೆಗೆ 36,000 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ಇಟ್ಟುಕೊಳ್ಳಲಾಗಿದೆ.
- ಇನ್ನು ಇದೇ ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಮೂಲಕ 25,000 ಕೋಟಿ ರೂ. ಸಂಗ್ರಹ, ಮೋಟಾರು ಮತ್ತು ವಾಹನ ತೆರಿಗೆ ಮೂಲಕ 11,500 ಕೋಟಿ ರೂ., ಗಣಿ ಮತ್ತು ಭೂ ವಿಜ್ಞಾನ ಇಲಾಖೆ 9,000 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ಇಟ್ಟುಕೊಳ್ಳಲಾಗಿದೆ.
ಶಿಕ್ಷಣ, ಉನ್ನತ ಶಿಕ್ಷಣ ಇಲಾಖೆಯ ಪ್ರಮುಖಾಂಶಗಳು
- ಕಲಿಕಾ ನ್ಯೂನತೆ ಸರಿಪಡಿಸಲು ಮರುಸಿಂಜನ ಎಂಬ ಹೊಸ ಯೋಜನೆ ಜಾರಿ ಪ್ರಸ್ತಾಪ ಮಾಡಿರುವ ಸಿಎಂ ಬಿಜೆಪಿ ಸರ್ಕಾರ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೋಕ್ ನೀಡಿ, ಹೊಸ ಶಿಕ್ಷಣ ನೀತಿ ಜಾರಿ ತರುವುದಾಗಿ ಹೇಳಿದ್ದಾರೆ. ಅಲ್ಲದೇ ಶಾಲಾ ಕಾಲೇಜುಗಳಿಗೆ 8311 ಕೊಠಡಿ ನಿರ್ಮಾಣಕ್ಕೆ 550 ಕೋಟಿ ಅನುದಾನ ಮೀಸಲಿಡುವುದಾಗಿ ಅವರು ತಿಳಿಸಿದ್ದಾರೆ.
- 5775 ಶಾಲೆ 150 ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 200 ಕೋಟಿ, 3833 ಶಾಲೆ 724 ಪದವಿ ಪೂರ್ವ ಕಾಲೇಜು ಕಠಡಿ ದುರಸ್ತಿಗೆ 100 ಕೋಟಿ, 47272 ಶಾಲೆಗಳು, 1231 ಪಿಯು ಕಾಲೇಜುಗಳ ನಿರ್ವಹಣೆಗೆ 153 ಕೋಟಿ ಅನುದಾನ ಮೀಸಲಿಟ್ಟಿರುವ ಸಿಎಂ ಮೊಟ್ಟೆ, ಶೇಂಗಾಚಿಕ್ಕಿ, ಬಾಳೆ ಹಣ್ಣು ವಿತರಣೆಯನ್ನು 9 ಮತ್ತು 10 ನೇ ತರಗತಿಗೂ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದಾರೆ.
- ಮಾಧ್ಯಮಿಕ ಮತ್ತು ಪಿಯು ಕಾಲೇಜುಗಳಲ್ಲಿ ಇನ್ನೋವೇಶನ್ ಲ್ಯಾಬ್ ನಿರ್ಮಾಣಕ್ಕೆ 2 ಕೋಟಿ ಅನುದಾನ, ಶಾಲೆಯ ಸುತ್ತಮುತ್ತ ಗಿಡ ನೆಡಲು ಸಸ್ಯ ಶಾಮಲ ಕಾರ್ಯಕ್ರಮ, ರಾಷ್ಟ್ರೀಯ ಶಿಕ್ಷಣ ನೀತಿ ಬದಲು ಸ್ಥಳೀಯವಾದ ಸಾಮಾಜಿಕ, ಸಾಂಸಕ್ ಮತ್ತು ಆರ್ಥಿಕ ವಾಸ್ತವಾಂಶಗಳ ಒಳಗೊಂಡ ಹೊಸ ಶಿಕ್ಷಣ ನೀತಿ ಜಾರಿ ಬಗ್ಗೆ ಪ್ರಸ್ತಾಪಿಸಿದ್ದಾರೆ.
- ನಕಲಿ ಅಂಕಪಟ್ಟಿ ತಡೆಗೆ ಡಿಜಿಲಾಕರ್ ಪ್ರಮಾಣ ಪತ್ರ ವ್ಯವಸ್ಥೆ ಬಗ್ಗೆಯೂ ಹೇಳಿರುವ ಸಿಎಂ ಅತ್ಯುತ್ತಮ ಸಾಧನೆ ಮಾಡುವ ವಿವಿಗಳಿಗೆ 50 ಲಕ್ಷ ಪ್ರೋತ್ಸಾಹ ಧನ, ಅಲ್ಲದೇ ಎಲ್ಲ ವಿವಿಗಳಲ್ಲಿ ಪಿಹೆಚ್ಡಿ ಸೀಟು ಭರ್ತಿಗೆ ಏಕರೂಪತೆ ಜಾರಿ ತರುವ ಬಗ್ಗೆ ಹೇಳಿದ್ದಾರೆ.
ಗೃಹ, ಅಗ್ನಿಶಾಮಕ, ಬಂಧಿಖಾನೆ ಇಲಾಖೆಯ ಬಜೆಟ್ ಪ್ರಮುಖಾಂಶಗಳು
- ಪೊಲೀಸ್ ಗೃಹ 2025 ಯೋಜನೆಯಡಿ ಪ್ರಸಕ್ತ ವರ್ಷ 2,125 ವಸತಿಗೃಹ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು 450 ಕೋಟಿ ರೂ. ಅನುದಾನ ಮೀಸಲು, ಪೊಲೀಸ್ ಮೊಬಿಲಿಟಿ ಯೋಜನೆಯಡಿ ಇಲಾಖೆಯ ಹಳೆಯ ವಾಹನಗಳನ್ನು ಹಂತ ಹಂತವಾಗಿ ಬದಲಾಯಿಸಲು 2023-24ನೇ ಸಾಲಿನಲ್ಲಿ 100 ಕೋಟಿ ರೂ. ಮೀಸಲು, ಈ ನಿಟ್ಟಿನಲ್ಲಿ ಪೊಲೀಸ್ ಠಾಣೆ ಮತ್ತು ಕಚೇರಿ ಕಟ್ಟಡಗಳು, ಎಂ.ಟಿ. ಶೆಡ್, ಶಸ್ತ್ರಾಗಾರ ಮುಂತಾದ ಕಟ್ಟಡಗಳ ನಿರ್ಮಾಣ ಕಾರ್ಯ ನಿರ್ಮಾಣಕ್ಕೆ 10 ಕೋಟಿ ಮೀಸಲು ಇಡಲಾಗಿದೆ.
- ಇನ್ನು ಬೆಂಗಳೂರು ನಗರದ ಸಂಚಾರ ವ್ಯವಸ್ಥೆ, ಮಹಿಳೆಯರ ಸುರಕ್ಷತೆಗಾಗಿ ಹೊಸದಾಗಿ 5 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆ ಮತ್ತು 5 ಸಂಚಾರ ಮಹಿಳಾ ಪೊಲೀಸ್ ಠಾಣೆಗಳ ಸ್ಥಾಪನೆ, ಸಿಐಡಿ, ಸೈಬರ್ ಅಪರಾಧ ಘಟಕ ಮತ್ತು ಸೆನ್ ಪೊಲೀಸ್ ಠಾಣೆಗಳ ಘಟಕಗಳಲ್ಲಿ ಉನ್ನತೀಕರಿಸಲು 10 ಕೋಟಿ ವೆಚ್ಚ ಭರಿಸುವ ಕ್ರಮ ಕೈಗೊಳ್ಳುವ ಪ್ರಸ್ತಾಪ ಮಾಡಿರುವ ಸಿಎಂ 20 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ತರಬೇತಿ ಶಾಲೆಗಳ ಬಲವರ್ಧನೆ ಒತ್ತು ನೀಡಿದ್ದಾರೆ.
- ರಾಜ್ಯದ 7 ಕೇಂದ್ರ ಕಾರಾಗೃಹಗಳಲ್ಲಿ 10 ಕೋಟಿ ರೂ. ಗಳ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ, 5 ಕೇಂದ್ರ ಕಾರಾಗೃಹಗಳಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಭದ್ರತಾ ವಾಚ್ ಟವರ್ಗಳ ನಿರ್ಮಾಣಕ್ಕೆ ಅನುದಾನ, ಕಾರಾಗೃಹಗಳಲ್ಲಿನ ಬಂದಿಗಳನ್ನು ವಿಡಿಯೋ ಕಾನ್ವರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸುವ ವ್ಯವಸ್ಥೆಯನ್ನ ಬಲಪಡಿಸಲು 3 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ.
- ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಡಿ 2023-24ನೇ ಸಾಲಿನಲ್ಲಿ ಕೆ-ಸೇಫ್ ಯೋಜನೆಯಡಿ ಸೂಪ ಯಲಹಂಕ, ಭಟ್ಕಳ, ಅರಕೇರಾ, ನಾಗರಬಾವಿ, ಎನ್.ಆರ್.ಪುರ, ಶಿರಹಟ್ಟಿ, ಹೊನ್ನಾವರ, ನರಸಾಪುರ (ಕೋಲಾರ ಜಿಲ್ಲೆ) ಕೈಗಾರಿಕಾ ಪ್ರದೇಶ ಮತ್ತು ದೇವನಹಳ್ಳಿ ಏರೋಸ್ಪೇಸ್ ಕೈಗಾರಿಕಾ ಪ್ರದೇಶಗಳಲ್ಲಿ 3 ಅಗ್ನಿಶಾಮಕ ಠಾಣಾ ಕಟ್ಟಡಗಳ ನಿರ್ಮಾಣ, ಅಗತ್ಯವಿರುವ ಅಗ್ನಿಶಾಮಕ ವಾಹನಗಳನ್ನು ಖರೀದಿಗಾಗ 100 ಕೋಟಿ ರೂ. ಗಳ ವೆಚ್ಚದಲ್ಲಿ ಒದಗಿಸಲಾಗುವುದು ಎಂದಿದ್ದಾರೆ.
- ಅಗ್ನಿಶಮನ ಕರ್ತವ್ಯ ನಿರ್ವಹಣೆಗೆ ಅಗತ್ಯವಿರುವ ಹೈ ಪ್ರೆಶರ್ ವಾಟರ್ ಮಿಸ್ಟ್ (High pressure water mist), ಫೋಮ್ ಕಾಂಪೌಂಡ್ (Foam compound) ಮತ್ತು (Air blower) ಮುಂತಾದ ಯಂತ್ರೋಪಕರಣಗಳನ್ನು ಸಂಗ್ರಹಿಸಸಲು ಮೂರು ಕೋಟಿ ಮೀಸಲು ಇಟ್ಟಿದ್ದಾರೆ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣಯಡಿ ಹೊಸದಾಗಿ 46 ಡಯಾಲಿಸಿ ಕೇಂದ್ರ ಆರಂಭಕ್ಕೆ 92 ಕೋಟಿ ಅನುದಾನ ಮೀಸಲು ಇಡಲಾಗಿದೆ. 23 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆಗೇರಿಸಲು 70 ಕೋಟಿ ಅನುದಾನ, ನವಜಾತ ಶಿಶು, ಮಕ್ಕಳು, ಮಹಿಳೆಯರಲ್ಲಿ ರಕ್ತಹೀತನೆ, ಅಪೌಷ್ಟಿಕತೆ ನಿವಾರಿಸಲು ಸಮಗ್ರ ಪರೀಕ್ಷೆ, ಚಿಕಿತ್ಸೆ ಅರಿವು ಮೂಡಿಸಲು 25 ಕೋಟಿ ಅನುದಾನ, ಆಶಾಕಿರಣ ಕಾರ್ಯಕ್ರಮದಡಿ ಚಿತ್ರದುರ್ಗ ರಾಯಚೂರು ಉತ್ತರ ಕನ್ನಡ, ಮಂಡ್ಯದಲ್ಲಿ 21 ಕೋಟಿ ವೆಚ್ಚದಲ್ಲಿ ನೇತ್ರ ತಪಾಸಣೆ,ಚಿಕಿತ್ಸಾ ಅಭಿಯಾನ, ಮಧುಮೇಹ, ರಕ್ತದೊತ್ತಡ ರೋಗಿಗಳ ಪತ್ತೆ ಹಚ್ಚಿ ಔಷಧಿ ಮನೆ ಬಾಗಿಲಿಗೆ ತಲುಪಿಸುವ ಪ್ರಾಯೋಗಿಕ ಯೋಜನೆ 8 ಜಿಲ್ಲೆಗಳಲ್ಲಿ ಜಾರಿ ತರುವ ಯೋಜನೆ ಹಾಕಿಕೊಳ್ಳಲಾಗಿದೆ.
- ಇನ್ನು ಪುನೀತ್ ಸ್ಮರಣಾರ್ಥ ಹಠಾತ್ ಹೃದಯ ಸಂಬಂಧಿ ಸಾವು ತಡೆಯಲು ಎಲ್ಲ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ Automated External Defibrillators (AED) ಅಳವಡಿಕೆಗೆ 6 ಕೋಟಿ ಅನುದಾನ ಮೀಸಲು ಇಟ್ಟಿದ್ದಾರೆ. 8 ಕೋಟಿ ವೆಚ್ಚದಲ್ಲಿ ಆರೋಗ್ಯ ತಂತ್ರಜ್ಞಾನ ಪ್ರಯೋಗಾಲಯ ಸ್ಥಾಪನೆ, ಆರೋಗ್ಯ ದಾಖಲಾತಿಗಳ ಡಿಜಿಟಲೀಕರಣಕ್ಕಾಗಿ ಕರ್ನಾಟಕ ಡಿಜಿಟಲ್ ಹೆಲ್ತ್ ಸೊಸೈಟಿ ಸ್ಥಾಪನೆ ಮಾಡುವ ಪ್ರಸ್ತಾಪ ಮಾಡಿದ್ದಾರೆ.
ಲೋಕೋಪಯೋಗಿ ಇಲಾಖೆಯ ಪ್ರಮುಖಾಂಶಗಳು
- ಕಲ್ಯಾಣ ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಪೂರಕವಾಗುವ ನಿಟ್ಟಿನಲ್ಲಿ ರಾಯಚೂರು ಬಳಿಯ ಕಲ್ಮಲಾ ಜಂಕ್ಷನ್ನಿಂದ ಸಿಂಧನೂರು ಬಳಿಯ ಬಳ್ಳಾರಿ ಲಿಂಗಸುಗೂರು ರಸ್ತೆ ವೃತ್ತದವರೆಗೆ ಒಟ್ಟು 78 ಕಿ.ಮೀ. ಉದ್ದದ ರಸ್ತೆಯನ್ನು 1,696 ಕೋಟಿ ರೂ.ಗಳ ಮೊತ್ತದಲ್ಲಿ ಹೈಬ್ರಿಡ್ ಆನ್ಯೂಟಿ ಮಾದರಿಯಲ್ಲಿ (Hybrid Annuity Model) ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಅಭಿವೃದ್ಧಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.
- ದೇವನಹಳ್ಳಿ-ವಿಜಯಪುರ-ಹೆಚ್.ಕ್ರಾಸ್- ವೇಮಗಲ್- ಮಾಲೂರು- ತಮಿಳುನಾಡು-ಗಡಿಯವರೆಗೆ ಕೈಗಾರಿಕಾ ಸಂಪರ್ಕವನ್ನು ಕಲ್ಪಿಸಲು ನಾಲ್ಕು ಮತ್ತು ಆರು ಪಥದ 123 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾಮಗಾರಿಯನ್ನು 1,826 ಕೋಟಿ ರೂ. ಅಂದಾಜು ಮೊತ್ತದಲ್ಲಿ ಹೈಬ್ರಿಡ್ ಆನ್ಯೂಟಿ ಯೋಜನೆಯಡಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಜಾರಿ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ.
- 2023-24ನೇ ಸಾಲಿನಲ್ಲಿ ಸಾರ್ವಜನಿಕರ ಸಂಚಾರ ಮತ್ತು ವಾಣಿಜ್ಯ ಚುಟುವಟಿಕೆಗಳ ಉತ್ತೇಜನಕ್ಕೆ ಈಗಾಗಲೇ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಗಳಲ್ಲಿ ಒಟ್ಟು 2,000 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ಮತ್ತು ರಾಜ್ಯದಲ್ಲಿನ ಅಂತರ್ ಜಿಲ್ಲಾ ಸಂಪರ್ಕಕ್ಕಾಗಿ ಒಟ್ಟಾರೆಯಾಗಿ 2,400 ಕಿ.ಮೀ. ಉದ್ದದ ಜಿಲ್ಲಾ ರಸ್ತೆಗಳನ್ನು 4,083 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿ ಮಾಡುವ ಪ್ರಸ್ತಾಪ ಮಾಡಿದ್ದಾರೆ.
- ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಖಾಲಿ ನಿವೇಶನಗಳು ಮತ್ತು ಕಟ್ಟಡಗಳನ್ನು ಗುರುತಿಸಿ Asset Monetization ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ಸೃಜಿಸಲು ಕ್ರಮ ಕೈಗೊಳ್ಳುವ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ವೈದ್ಯಕೀಯ ಶಿಕ್ಷಣದ ಪ್ರಮುಖಾಂಶಗಳು
- ಗದಗ, ಕೊಪ್ಪಳ, ಕಾರವಾರ, ಕೊಡಗಿನಲ್ಲಿ 450 ಬೆಡ್ಗಳ ಆಸ್ಪತ್ರೆ ನಿರ್ಮಾಣ ಸೇರಿದಂತೆ ಕನಕಪುರ ತಾಲೂಕಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಬಗ್ಗೆ ಇಂದಿನ ಬಜೆಟ್ನಲ್ಲಿ ಸಿಎಂ ತಿಳಿಸಿದ್ದಾರೆ.
- ಮೈಸೂರು, ಕಲಬುರಗಿ, ಬೆಳಗಾವಿ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭ ಮತ್ತು ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ 155 ಕೋಟಿ ಅನುದಾನ ಮೀಸಲು, ನಿಮ್ಹಾನ್ಸ್ನಲ್ಲಿ ಅಂಗಾಂಗ ಜೋಡಣೆಗೆ ಮೀಸಲಾದ ದೇಶದ ಪ್ರಥಮ ಸಾರ್ವಜನಿಕ ಆಸ್ಪತ್ರೆ ಸ್ಥಾಪನೆಗೆ 146 ಕೋಟಿ ಅನುದಾನ ಮೀಸಲು ಇಡಲಾಗಿದೆ.
- ಇನ್ನು ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (GIMS) 200 ಹಾಸಿಗೆಯ ಹೊಸ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 70 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಾಣ ಮಾಡುವ ಬಗ್ಗೆಯೂ ತಿಳಿಸಿದ್ದಾರೆ.
- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯಗಳು, ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಹಾಗೂ ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ (Allied Health Sciences) ಕಾಲೇಜುಗಳನ್ನು ಸ್ಥಾಪನೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.
- ಮೈಸೂರು ಮತ್ತು ಕಲಬುರಗಿಯಲ್ಲಿ ಟ್ರಾಮಾ ಕೇರ್ ಸೆಂಟರ್‌ಗಳ (Trauma Care Center) ಕಾರ್ಯಾಚರಣೆಗೆ 30 ಕೋಟಿ ರೂ., ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಕಲಬುರಗಿ ಮತ್ತು ಮೈಸೂರಿನಲ್ಲಿರುವ ಪ್ರಾದೇಶಿಕ ಘಟಕಗಳಲ್ಲಿ ಸೌಲಭ್ಯಗಳ ಸುಧಾರಣೆಗೆ 20 ಕೋಟಿ ರೂ., ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಂಪೂರ್ಣ ಸ್ವಯಂಚಾಲಿತ ಮತ್ತು ಕೇಂದ್ರೀಕೃತ ರಕ್ತನಿಧಿ ನಿರ್ವಹಣಾ ವ್ಯವಸ್ಥೆ ಸ್ಥಾಪನೆಗೆ ಐದು ಕೋಟಿ ರೂ. ಮೀಸಲು ಇಡಲಾಗಿದೆ.