Breaking News

ಲಿಂಗಾಯತ ಧರ್ಮ‌ ಮಾನ್ಯತೆ ವಿಚಾರ: ರಾಜ್ಯ ಸರ್ಕಾರ ಮರು ಉತ್ತರ ನೀಡಲಿ: ಡಾ. ಶಿವಾನಂದ ಜಾಮದಾರ ಆಗ್ರಹ

Spread the love

ಬೆಳಗಾವಿ: ”ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮರು ಉತ್ತರ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಣಯ ಮಾಡಲಾಗಿದೆ” ಎಂದು ಜಾಗತಿಕ ಲಿಂಗಾಯತ ಮಹಾಸಭೆ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ತಿಳಿಸಿದ್ದಾರೆ.

ಬೆಳಗಾವಿಯ ಜಾಗತಿಕ ಲಿಂಗಾಯತ ಮಹಾಸಭೆ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ನಡೆಸಿ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗಾಗಿ 2018ರಲ್ಲಿಯೇ ಅಂದಿನ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪುರಸ್ಕರಿಸದ ಕೇಂದ್ರ ಸರ್ಕಾರ ಮೂರು ಕಾರಣ ಕೇಳಿ ಮಾನ್ಯತೆ ನೀಡಲು ಕಷ್ಟಸಾಧ್ಯ ಎಂದು ಉತ್ತರಿಸಿದ್ದಾರೆ. ಆದರೆ, ಕೇಂದ್ರ ಕೇಳಿರುವ ಕಾರಣಗಳಲ್ಲಿ ಒಂದಾಗಿರುವ ‘ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಿದರೆ ಪರಿಶಿಷ್ಟ ಜಾತಿಯವರಿಗೆ ಜಾರಿಯಲ್ಲಿರುವ ಸೌಲಭ್ಯ ಕಳೆದುಕೊಳ್ಳುತ್ತಾರೆ ಎನ್ನುವುದು ಆಧಾರ ರಹಿತವಾಗಿದೆ. ಆದರೆ, ಬೌದ್ಧ ಮತ್ತು ಸಿಖ್ ಧರ್ಮಗಳಲ್ಲಿರುವ ಪರಿಶಿಷ್ಟರಿಗೆ ಮೂಲ ಸೌಲಭ್ಯ ಮುಂದುವರಿಸಬೇಕು ಎಂದು ಅಂದಿನ ರಾಷ್ಟ್ರಪತಿಗಳೇ ಆದೇಶ ಹೊರಡಿಸಿದ್ದರು. ಅದರಂತೆಯೇ ಈಗಲೂ ಪರಿಶಿಷ್ಟರು ಮೂಲಸೌಲಭ್ಯ ಪಡೆಯುತ್ತಿದ್ದಾರೆ. ಇನ್ನು ಮೊದಲ ಜನಗಣತಿಯಿಂದ ಇಲ್ಲಿಯವರೆಗೆ ಲಿಂಗಾಯತರು ಹಿಂದು ಧರ್ಮದ ಒಂದು ಪಂಥ ಎನ್ನುವುದು ಕೇಂದ್ರದ ವಾದವಾಗಿದ್ದು, 1871ರಲ್ಲಿ ನಡೆದ ಮೊದಲ ಜನಗಣತಿಯಲ್ಲಿಯೇ ಲಿಂಗಾಯತ ಒಂದು ಧರ್ಮ ಜಾತಿ ಅಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಇದರಂತೆ ಕೇಂದ್ರ ಕೇಳಿರುವ ಇನ್ನುಳಿದ ಕಾರಣಗಳು ಆಧಾರ ರಹಿತ ಎಂದು ಅಸಮಾಧಾನ ಹೊರಹಾಕಿದರು.

ಸರ್ಕಾರ ಮರು ಉತ್ತರ ನೀಡಲಿ: 1991ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಹೋರಾಟ ಆರಂಭವಾಯ್ತು. 2001, 2011, 2013ರಲ್ಲಿ ಅದು ಮುಂದುವರಿಯಿತು. ನ್ಯಾ.ನಾಗಮೋಹನದಾಸ್ ಸಮಿತಿ ವಿವರವಾಗಿ ಮಾಹಿತಿ ಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರ ಈಗ ಏನೂ ಮಾಡಬೇಕಿಲ್ಲ. ಕೇಂದ್ರ ಸರ್ಕಾರ ನೀಡಿದ ಮೂರು ಅಂಶಗಳಿಗೆ ರಾಜ್ಯ ಸರ್ಕಾರ ಮರು ಉತ್ತರ ಕಳಿಸಲಿ. ಹೊಸ ಸರ್ಕಾರ ಈಗ ಆರಿಸಿ ಬಂದಿದೆ. ತಕ್ಷಣ ಅವರಿಗೆ ಮನವಿ ಕೊಡುತ್ತಿಲ್ಲ. ಅವರು ತಮ್ಮ ಎಲ್ಲ ಸಮಸ್ಯೆ ಪರಿಹಾರ ಮಾಡಿಕೊಂಡು ಶಾಂತ ಮಟ್ಟಕ್ಕೆ ಬರಲಿ. ಎಲ್ಲಾ ಲಿಂಗಾಯತ ಮಠಾಧೀಶರು, ಸಂಘಟನೆಗಳು ಒಳಗೊಂಡು ಮನವಿ ಕೊಡುತ್ತೇವೆ ಎಂದರು. ಭಾರತ ಸರ್ಕಾರಕ್ಕೆ ಈಗಾಗಲೇ ಕರ್ನಾಟಕ ಸರ್ಕಾರ ವರದಿಯನ್ನು ಒಪ್ಪಿಸಿದೆ. ಭಾರತ ಸರ್ಕಾರದಿಂದಲೂ ಉತ್ತರ ಬಂದಿದೆ. ಈಗ ಅದಕ್ಕೆ ಕರ್ನಾಟಕ‌ ಸರ್ಕಾರ ಮರು ಉತ್ತರ ಕೊಡಬೇಕಿದೆ ಎಂದರು.

ಇತರೆ ಕಾಲಂ‌ ತೆಗೆದ ಕೇಂದ್ರದ ವಿರುದ್ಧ ಸಾರ್ವಜನಿಕ‌ ಹಿತಾಸಕ್ತಿ ಅರ್ಜಿ: 1951ರ ಜನಗಣತಿಯ ನಮೂನೆಯಲ್ಲಿ ಮೂರು ಧರ್ಮಗಳಿದ್ದವು. ನಂತರ ಸಿಖ್, ಬೌದ್ಧ, ಜೈನ ಧರ್ಮಗಳು ಸೇರ್ಪಡೆಯಾದವು. ಅದರ ಜೊತೆಗೆ ಇತರೆ ಕಾಲಂ‌ ಕೂಡ ನೀಡಲಾಗಿತ್ತು. ಮಾನ್ಯತೆ ಇಲ್ಲದ ಇತರೆ ಧರ್ಮ ಅನುಸರಿಸುವ ಸಮಾಜ ಮತ್ತು ಸಮುದಾಯವರಿಗಾಗಿ ‘ಇತರೆ’ ಕಾಲಂ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಕೂಡ ಆದೇಶ ನೀಡಿತ್ತು. ಇತರೆ ಕಾಲಂ ಕೂಡ ಇರಬೇಕು ಎಂದು ಆದೇಶಿಸಿತ್ತು. ಈಗ ಕೇಂದ್ರ ಸರ್ಕಾರ ಜನಗಣತಿ ನಮೂನೆಯಲ್ಲಿ ‘ಇತರೆ’ ಕಾಲಂ ತೆಗೆದು ಹಾಕಿರುವುದು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಹಿಂದೂ ಹೇರಿಕೆಗೆ ಮುಂದಾಗಿದ್ದಲ್ಲದೇ ನ್ಯಾಯಾಲಯದ ಆದೇಶವನ್ನೂ ಉಲ್ಲಂಘಿಸಿದೆ. ಕೇಂದ್ರ ಸರಕಾರದ ಈ ಕ್ರಮವನ್ನು ಜಾಗತಿಕ ಲಿಂಗಾಯತ ಮಹಾಸಭೆ ಖಂಡಿಸುವುದಲ್ಲದೆ ಸರ್ವೋಚ್ಛ ನ್ಯಾಯಾಲಯದಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವುದಾಗಿ ಹೇಳಿದರು.

ಮತ್ತೆ ಲಿಂಗಾಯತರ ದಾರಿ ತಪ್ಪಿಸುತ್ತಿರುವ ಪಂಚಾಚಾರ್ಯರು: ವೀರಶೈವ ಲಿಂಗಾಯತ ಜಾತಿ ಪ್ರಮಾಣಪತ್ರ ವಿಷಯವಾಗಿ ಈಗಾಗಲೇ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆ ಆಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ನಡುವೆ ‘ಬೇಡ ಜಂಗಮ’ ಪ್ರಮಾಣಪತ್ರಕ್ಕಾಗಿ ನಡೆದ ಹೋರಾಟಕ್ಕೆ ಬೆಂಬಲಿಸಿದ್ದ ಪಂಚಾಚಾರ್ಯರು ರಾಜ್ಯದಲ್ಲಿ ಸರ್ಕಾರ ಬದಲಾಗುತ್ತಿದ್ದಂತೆ ಲಿಂಗಾಯತ ಸಮುದಾಯದ ಪಂಗಡಗಳನ್ನು ‘ಒಬಿಸಿ’ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರ ಅಂಗಳಕ್ಕೆ ಹೋಗಲು ಹೊಸ ನಾಟಕ ಶುರು ಮಾಡಿದ್ದಾರೆ. 2018ರ ಚುನಾವಣೆಯಲ್ಲಿಯೇ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಪಂಚಾಚಾರ್ಯರು ಪ್ರತ್ಯೇಕ ಧರ್ಮ ಹೋರಾಟವನ್ನು ವಿರೋಧಿಸಿದ್ದರು. ಪಂಚಮಸಾಲಿ ಹೋರಾಟವನ್ನು ಬೆಂಬಲಿಸದ ಪಂಚಾಚಾರ್ಯರು ಈಗ ಲಿಂಗಾಯತರನ್ನು ಮತ್ತೆ ದಾರಿ ತಪ್ಪಿಸಲು ಮುಂದಾಗಿದ್ದಾರೆ. ಜೂ.15ರಂದು ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ವಿರಕ್ತ ಮಠಾಧೀಶರನ್ನೊಳಗೊಂಡಂತೆ ನಾಡಿನ ಎಲ್ಲ ಮಠಾಧೀಶರ ಸಭೆ ಕರೆದಿರುವುದನ್ನೂ ಜಾಗತಿಕ ಲಿಂಗಾಯತ ಮಹಾಸಭೆ ಖಂಡಿಸುತ್ತದೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ