ಬೆಂಗಳೂರು, ಜೂ.6- ಸಾರಿಗೆ ಇಲಾಖೆಯಿಂದ ನೀಡಲಾಗುವ ವಾಹನ ನೊಂದಣಿ ಪತ್ರ, ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರಿಗೆ ತಲುಪಿಸಲು ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸರ್ಕಾರ ಸಮ್ಮತಿಸಿದೆ.
ಸಾರಿಗೆ ಇಲಾಖಾ ಆಯುಕ್ತರು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಸಚಿವಾಲಯ ನೊಂದಣಿ ಪ್ರಮಾಣ ಪತ್ರ, ಸ್ಮಾರ್ಟ್ ಕಾರ್ಡ್ ನೀಡಲು ಪ್ರತಿ ಕಾರ್ಡಿಗೆ ಅರ್ಜಿದಾರರಿಂದ ಸಂಗ್ರಹಿಸುವ 212 ರೂ.ಗಳನ್ನು ಹಾಗು ಅಂಚೆ ಮೂಲಕ ರವಾನಿಸಲು 50 ರೂ.ಗಳ ಸೇವಾಶುಲ್ಕ ಒಳಗೊಂಡು 262 ರೂ.ಗಳನ್ನು ಸಂಪೂರ್ಣವಾಗಿ ಸರ್ಕಾರಕ್ಕೆ ಭರಿಸಬೇಕು. ಅದರಲ್ಲಿ 73 ರೂ. 34 ಪೈಸೆಯ ಸೇವಾಶುಲ್ಕವನ್ನು ಖಾಸಗಿ ಪಾಲುದಾರರಿಗೆ ನೀಡಲು ನಿರ್ಧರಿಸಲಾಗಿದೆ.
ಚಾಲನಾ ಅನುಜ್ಞಾ ಪ್ರಮಾಣಪತ್ರಗಳನ್ನು ನೀಡಲು ಪ್ರತಿ ಕಾರ್ಡ್‍ಗೆ 208 ರೂ. 82 ಪೈಸೆಗಳನ್ನು ಸಂಗ್ರಹಿಸಬೇಕು. ಅದರಲ್ಲಿ ಸೇವಾ ಶುಲ್ಕವಾಗಿ 57 ರೂ. 82 ಪೈಸೆಯನ್ನು ಖಾಸಗಿ ಪಾಲುದಾರರಿಗೆ ನೀಡಬೇಕು. ಜೊತೆಗೆ ಸ್ಪೀಡ್ ಪೋಸ್ಟ್ ವೆಚ್ಚ 50 ರೂ.ಗಳನ್ನು ಅರ್ಜಿದಾರರಿಂದ ಪಡೆಯಬೇಕೆಂದು ಆದೇಶಿಸಲಾಗಿದೆ.ಸ್ಪೀಡ್ ಪೋಸ್ಟ್‍ಗೆ ಅಗತ್ಯವಿರುವ ಅಂಚೆ ಲಕೋಟೆಗಳನ್ನು ಸರ್ಕಾರ ಸ್ವಾಮ್ಯದ ಎಂಎಸ್‍ಐಎಲ್‍ನಿಂದ ಖರೀದಿಸಬೇಕೆಂಬ ಸೂಚನೆಯೊಂದಿಗೆ ರಾಜ್ಯಸರ್ಕಾರ 49 ಕೋಟಿ ರೂ.ಗಳ ವೆಚ್ಚದ ಯೋಜನೆಗೆ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಾರಿಗೆ ಇಲಾಖೆಗೆ ಸಹಮತಿ ಸೂಚಿಸಿದೆ.