ಹುಬ್ಬಳ್ಳಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಧಾರವಾಡ ಜಿಲ್ಲೆಯಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ 732 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದ್ದರೂ, 235 ಮಕ್ಕಳು ಮಾತ್ರ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ.
1,456 ವಿದ್ಯಾರ್ಥಿಗಳು, ತಾವು ವಾಸಿಸುತ್ತಿರುವ ಜಾಗದಿಂದ ಒಂದು ಕಿ.ಮೀ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ಆರ್‌ಟಿಇ ಅಡಿ ಅರ್ಜಿ ಸಲ್ಲಿಸಿದ್ದರು. ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ 406 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಪ್ರವೇಶ ದಿನಾಂಕ ಮುಕ್ತಾಯ ಆಗುವುದರೊಳಗೆ 235 ವಿದ್ಯಾರ್ಥಿಗಳು ಮಾತ್ರ ಖಾಸಗಿ ಶಾಲೆ ಸೇರಿದ್ದಾರೆ ಎಂದು ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಅಂಕಿ-ಅಂಶ ತಿಳಿಸುತ್ತದೆ.
ಬದಲಾದ ನಿಯಮ: ಆರ್‌ಟಿಇ ಜಾರಿಯಾದಾಗ ಎಲ್ಲ ಖಾಸಗಿ ಶಾಲೆಗಳು ಈ ಕಾಯ್ದೆಯಡಿ ಶೇ 25ರಷ್ಟು ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಬೇಕಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಖಾಸಗಿ ಶಾಲೆಗಳಿಗೆ ಸರ್ಕಾರವೇ ಭರಿಸುತ್ತದೆ. 2017ರ ನಂತರ ವಿದ್ಯಾರ್ಥಿಯು ವಾಸಿಸುತ್ತಿರುವ ಜಾಗದಿಂದ ಒಂದು ಕಿ.ಮೀ ಅಂತರದಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಇದ್ದರೆ, ಅಲ್ಲಿಯೇ ದಾಖಲಾತಿ ಪಡೆಯಬೇಕಾಗುತ್ತದೆ’ ಎಂದು ಹುಬ್ಬಳ್ಳಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಸಿಂಧಗಿ ತಿಳಿಸಿದರು.
ವಾರ್ಡ್ ವ್ಯಾಪ್ತಿ: ‘ಆರಂಭದಲ್ಲಿ ಎಲ್ಲ ಖಾಸಗಿ ಶಾಲೆಗಳಲ್ಲಿ ಪ್ರವೇಶಕ್ಕೆ ಅನುಕೂಲ ಕಲ್ಪಿಸಿದ್ದರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿತ್ತು. ಇದೀಗ ವಿದ್ಯಾರ್ಥಿಯು ವಾಸಿಸುತ್ತಿರುವ ವಾರ್ಡ್‍ನಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಇದ್ದರೆ ಆರ್‌ಟಿಇ ಅಡಿ ಖಾಸಗಿ ಶಾಲೆಗಳಿಗೆ ದಾಖಲಾಗುವ ಅವಕಾಶವಿಲ್ಲ. ಒಂದು ಕಿ.ಮೀ ಒಳಗೆ ಶಾಲೆ ವ್ಯವಸ್ಥೆ ಕಲ್ಪಿಸುವುದನ್ನೇ ಕಾಯ್ದೆಯೂ ಹೇಳುತ್ತದೆ. ಹಾಗಾಗಿ, ಆರ್‌ಟಿಇ ಮೂಲಕ ಖಾಸಗಿ ಶಾಲೆಗಳಿಗೆ ಪ್ರವೇಶ ಕ್ರಮೇಣ ಕಡಿಮೆಯಾಗುತ್ತಿದೆ’ ಎಂದು ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ ಹೇಳಿದರು.
ಪೋಷಕರ ನಿರಾಸಕ್ತಿ: ಆರ್‌ಟಿಇ ಕಾಯ್ದೆ ಹಾಗೂ ಅದರ ಮಹತ್ವದ ಬಗ್ಗೆ ನಿರಂತರವಾಗಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ತಮ್ಮ ವಾರ್ಡ್‍ನಲ್ಲಿ ಶಾಲೆಗಳಿಲ್ಲದಿದ್ದರೂ ಪಕ್ಕದ ವಾರ್ಡ್‍ನಲ್ಲಿರುವ ಖಾಸಗಿ ಶಾಲೆಗೆ ಪ್ರವೇಶ ಪಡೆಯುವ ಅವಕಾಶವೂ ಇದೆ. ಮಗುವಿನ ಅನುಕೂಲದ ನೆಪ ಹೇಳಿ ಕೆಲವು ಪೋಷಕರು, ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿಲ್ಲ. ಅವಕಾಶವಿರುವೆಡೆ ಖಾಸಗಿ ಶಾಲೆಗಳು ಪ್ರವೇಶ ನೀಡುತ್ತಿವೆ’ ಎಂದು ಡಿಡಿಪಿಐ ಕಚೇರಿಯ ಆರ್‌ಟಿಇ ನೋಡಲ್ ಅಧಿಕಾರಿ ಎಸ್.ಕೆ. ಮಾಕಣ್ಣವರ ತಿಳಿಸಿದರು.
ಎಲ್ಲ ವಾರ್ಡ್‍ಗಳಲ್ಲಿ ಸರ್ಕಾರಿ ಶಾಲೆಗಳಿವೆ. ಶಿಕ್ಷಕರು ಪಠ್ಯಪುಸ್ತಕ ಸಮವಸ್ತ್ರ ಸೇರಿದಂತೆ ಎಲ್ಲ ಸೌಲಭ್ಯಗಳಿವೆ. ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಅಶೋಕ್ ಸಿಂಧಗಿ ಹುಬ್ಬಳ್ಳಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ
‘ಕೊರತೆ ಇದ್ದರೂ ಸರ್ಕಾರಿ ಶಾಲೆಯೇ ಗತಿ’ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮೂಲಸೌಕರ್ಯ ಸಮಸ್ಯೆಗಳಿವೆ. ಮಕ್ಕಳ ಪ್ರವೇಶ ಮಿತಿಯೂ ಇಲ್ಲ. ಇದರಿಂದ ಗುಣಮಟ್ಟದ ಶಿಕ್ಷಣ ಕಷ್ಟಸಾಧ್ಯ. ಆರ್‌ಟಿಇ ಅಡಿ ಈ ಮೊದಲು ಅವಕಾಶ ನೀಡಿದ್ದರಿಂದ ಹತ್ತಿರದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಹುದಿತ್ತು. ವಾರ್ಡ್ ವ್ಯಾಪ್ತಿಗೆ ಸೀಮಿತ ಮಾಡಿದ್ದರಿಂದ ಇಲ್ಲಿರುವ ಸರ್ಕಾರಿ ಶಾಲೆಗೇ ಮಕ್ಕಳನ್ನು ಸೇರಿಸಬೇಕಿದೆ. ಖಾಸಗಿ ಶಾಲೆಗೆ ಸೇರಬೇಕೆಂದರೆ ಲಕ್ಷಾಂತರ ರೂಪಾಯಿ ಹಣ ನೀಡಬೇಕು. ಬಡವರಿಗೆ ಇದು ಅಸಾಧ್ಯ. ಆರ್‌ಟಿಇ ಮೂಲಕ ಸಿಗುತ್ತಿದ್ದ ಅವಕಾಶವೂ ಈಗ ಇಲ್ಲವಾಗಿದೆ ಎಂಬುದು ಪೋಷಕರ ಅಳಲು.
ವಲಯವಾರು ವಿದ್ಯಾರ್ಥಿಗಳ ಪ್ರವೇಶ ವಿವರ ವಲಯ;ಪ್ರವೇಶ ಪಡೆದ ಮಕ್ಕಳು ಧಾರವಾಡ;14 ಧಾರವಾಡ ನಗರ;97 ಹು-ಧಾ ಪಾಲಿಕೆ;266 ಹುಬ್ಬಳ್ಳಿ ನಗರ;9 ಕುಂದಗೋಳ;12 ನವಲಗುಂದ;8