Breaking News

ಬೆಳಗಾವಿ ಗ್ರಾಮೀಣ: ಹೈ ವೋಲ್ಟೇಜ್‌ ಕ್ಷೇತ್ರದಲ್ಲಿ ತಂತ್ರ- ಪ್ರತಿತಂತ್ರ

Spread the love

ಬೆಳಗಾವಿ: ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ಕದನದಿಂದಾಗಿ ರಾಜ್ಯದ ಹೈವೋಲ್ಟೇಜ್‌ ಕ್ಷೇತ್ರವಾಗಿ ಗುರುತಿಸಿಕೊಂಡ ‘ಬೆಳಗಾವಿ ಗ್ರಾಮೀಣ’ದಲ್ಲಿ ಈ ಬಾರಿ ಗೆಲ್ಲಲು ಬಿಜೆಪಿ ಹಾಗೂ ಕಾಂಗ್ರೆಸ್‌ ತಂತ್ರ- ಪ್ರತಿತಂತ್ರ ಹೆಣೆಯುತ್ತಿವೆ.

ಇಬ್ಬರ ತಿಕ್ಕಾಟದಲ್ಲಿ ಗೆಲುವಿನ ದಡ ಸೇರಲು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಪ್ರಯತ್ನಿಸುತ್ತಿದೆ.

‘ಭಾಷಾ ರಾಜಕಾರಣ’ಕ್ಕೆ ಹೆಸರಾದ ಈ ಕ್ಷೇತ್ರ 2008ರಲ್ಲಿ ಪುನರ್‌ ವಿಂಗಡಣೆಯಾಗಿದೆ. ಹಿರೇಬಾಗೇವಾಡಿ ಕ್ಷೇತ್ರದ ಕೆಲವು ಹಳ್ಳಿಗಳನ್ನು ಸೇರಿಸಿ, ‘ಬೆಳಗಾವಿ ಗ್ರಾಮೀಣ’ ಕ್ಷೇತ್ರ ರಚಿಸಲಾಗಿದೆ.

ಕಳೆದ ಮೂರು ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳನ್ನೇ ಗೆಲ್ಲಿಸುತ್ತ ಬಂದಿರುವ ಮತದಾರರು, ಎಂಇಎಸ್‌ ಅನ್ನು ಅಧಿಕಾರದಿಂದ ದೂರವಿರಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅವರು ರಾಷ್ಟ್ರೀಯ ಪಕ್ಷಗಳಿಗೆ ಮಣೆ ಹಾಕುತ್ತಾರೆಯೇ? ಅಥವಾ ಎಂಇಎಸ್ ಬೆಂಬಲಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ: ಹಾಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿದೆ. ರಾಜ್ಯಮಟ್ಟದಲ್ಲಿ ವೈಯಕ್ತಿಕ ವರ್ಚಸ್ಸು ಹಾಗೂ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಅವರು ಮತ ಕೇಳುತ್ತಿದ್ದಾರೆ. ‘ಮನೆಮಗಳನ್ನು ಕೈಬಿಡಬೇಡಿ. ಹೊರಗಿನವರ ಮಾತು ಕೇಳಬೇಡಿ’ ಎಂದು ಪ್ರತಿ ಮನೆಗೂ ತಮ್ಮ ಕೂಗು ಮುಟ್ಟಿಸುತ್ತಿದ್ದಾರೆ.

ಮತ್ತೊಂದೆಡೆ, ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ. ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ ಮನ್ನೋಳಕರ್‌, ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ, ವಿನಯ ಕದಂ ಟಿಕೆಟ್‌ಗಾಗಿ ದೊಡ್ಡಮಟ್ಟದ ಲಾಬಿ ನಡೆಸಿದ್ದಾರೆ. ಅಭ್ಯರ್ಥಿಗಳ ಬೆನ್ನಿಗೆ ನಿಂತಿರುವ ರಮೇಶ ಜಾರಕಿಹೊಳಿ, ‘ಬಿಜೆಪಿಯನ್ನು ಗೆಲ್ಲಿಸುವುದಕ್ಕಿಂತ ಲಕ್ಷ್ಮಿ ಹೆಬ್ಬಾಳಕರ ಸೋಲಿಸುವುದೇ ನನ್ನ ಗುರಿ’ ಎಂಬಂತೆ
ಓಡಾಡುತ್ತಿದ್ದಾರೆ.

ಎಂಇಎಸ್‌ನಿಂದ ಕಣಕ್ಕಿಳಿಯಲು ಆರ್‌.ಎಂ.ಚೌಗುಲೆ, ಆರ್‌.ಐ.ಪಾಟೀಲ, ಸುಧೀರ ಚವ್ಹಾಣ ಮತ್ತು ರಾಮಚಂದ್ರ ಮೋದಗೇಕರ್‌ ಕಸರತ್ತು ನಡೆಸಿದ್ದಾರೆ.

ಮರಾಠಿಗರ ಓಲೈಕೆಗಾಗಿ ಕಸರತ್ತು: ಮರಾಠ, ಲಿಂಗಾಯತರು, ಹಿಂದುಳಿದ ಸಮುದಾಯದವರು ಈ ಕ್ಷೇತ್ರದಲ್ಲಿ ಹೆಚ್ಚಿದ್ದಾರೆ. ಮರಾಠಿಗರ ಓಲೈಕೆಗಾಗಿ ಎಲ್ಲ ಪಕ್ಷಗಳಿಂದ ಪ್ರಯತ್ನ ಮುಂದುವರಿದಿದೆ. ತಾಲ್ಲೂಕಿನ ರಾಜಹಂಸಗಡ ಕೋಟೆ ಆವರಣದಲ್ಲಿ ನಿರ್ಮಿಸಿದ ‘ಶಿವಾಜಿ ಪ್ರತಿಮೆ’ ವಿಚಾರ ಬಿಜೆಪಿ, ಕಾಂಗ್ರೆಸ್‌ ನಾಯಕರಿಗೆ ಪ್ರತಿಷ್ಠೆಯಾಗಿ ಹೊರಹೊಮ್ಮಿತ್ತು. ಚುನಾವಣೆ ಹೊಸ್ತಿಲಲ್ಲಿ ರಾಜ್ಯದಾದ್ಯಂತ ಇದು ಸದ್ದು ಮಾಡಿತ್ತು.

‘ಇದು ರಾಜ್ಯ ಸರ್ಕಾರದ ಕಾಮಗಾರಿ. ಯಾರೂ ಮನೆಯಿಂದ ಖರ್ಚು ಮಾಡಿಲ್ಲ. ಹಾಗಾಗಿ ಸರ್ಕಾರವೇ ಇದನ್ನು ಉದ್ಘಾಟನೆ ಮಾಡುತ್ತದೆ’ ಎಂದು ಬಿಜೆಪಿ ನಾಯಕರು ವಾದಿಸಿದ್ದರು. ‘ಇದು ನನ್ನ ಅಧಿಕಾರವಧಿಯಲ್ಲಿ ನಡೆದ ಕಾಮಗಾರಿ. ನಾನು ಸರ್ಕಾರದ ಮಟ್ಟದಲ್ಲಿ ‌ಒತ್ತಡ ಹೇರಿ ಅನುದಾನ ತಂದಿದ್ದೇನೆ’ ಎಂದು ಲಕ್ಷ್ಮಿ ಹಟ ತೊಟ್ಟಿದ್ದರು.

ಆರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿ, ಈ ಪ್ರತಿಮೆ ಲೋಕಾರ್ಪಣೆಗೊಳಿಸುವಲ್ಲಿ ರಮೇಶ ಜಾರಕಿಹೊಳಿ ಯಶಸ್ವಿಯಾಗಿದ್ದರು. ಇದಕ್ಕೆ ಸೆಡ್ಡು ಹೊಡೆದು ಲಕ್ಷ್ಮಿ ಹೆಬ್ಬಾಳಕರ ಎರಡನೇ ಬಾರಿ ಲೋಕಾರ್ಪಣೆಗೊಳಿಸಿದ್ದರು. ಇದಕ್ಕೆ ಎಂಇಎಸ್‌ನವರು ಆಕ್ಷೇಪ ವ್ಯಕ್ತಪಡಿಸಿ, ‘ಎರಡೂ ರಾಷ್ಟ್ರೀಯ ಪಕ್ಷದವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಎರಡು ಬಾರಿ ಪ್ರತಿಮೆ ಲೋಕಾರ್ಪಣೆಗೊಳಿಸಿ, ಶಿವಾಜಿ ಮಹಾರಾಜರಿಗೆ ಅಪಚಾರವೆಸಗಿದ್ದಾರೆ’ ಎಂದು ಆಪಾದಿಸಿದ್ದರು. ಪ್ರತಿಮೆ ಶುದ್ಧೀಕರಣ ಕಾರ್ಯಕ್ರಮವನ್ನೂ ನಡೆಸಿದ್ದರು. ಈಗ ಪ್ರತಿಮೆ ವಿವಾದ ತುಸು ತಣ್ಣಗಾಗಿದೆ.

*

ಕ್ಷೇತ್ರದ ಸಂಕ್ಷಿಪ್ತ ಇತಿಹಾಸ

ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗ್ರಾಮಗಳು, ಈ ಹಿಂದೆ ಹಿರೇಬಾಗೇವಾಡಿ ಕ್ಷೇತ್ರದಲ್ಲಿದ್ದವು. ಆ ಕ್ಷೇತ್ರಕ್ಕೆ 1957ರಿಂದ 2004ರವರೆಗೆ ನಡೆದ 11 ಚುನಾವಣೆಗಳಲ್ಲಿ ಮೂರು ಬಾರಿ ಎಂಇಎಸ್, ತಲಾ ಎರಡು ಬಾರಿ ಕಾಂಗ್ರೆಸ್‌, ಜನತಾದಳ, ಪಿಡಬ್ಲ್ಯೂಪಿ(ರೈತರು ಮತ್ತು ಕಾರ್ಮಿಕರು ಪಕ್ಷ), ತಲಾ ಒಂದು ಬಾರಿ ಜನತಾಪಕ್ಷ, ಬಿಜೆಪಿ ಗೆಲುವು ಸಾಧಿಸಿವೆ.


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ