ಬೆಳಗಾವಿ :ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಲಾಭವನ್ನು ರೈತರಿಗೆ ತಲುಪಿಸುವಲ್ಲಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. 5 ಲಕ್ಷಕ್ಕೂ ಅಧಿಕ ರೈತರ ಖಾತೆಗೆ 13ನೇ ಕಂತಿನ ಹಣ ಜಮೆ ಮಾಡಲಾಗಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ರೈತರಿಗೆ ಕಿಸಾನ್ ಸಮ್ಮಾನ್ ದೊರಕಿಸಿಕೊಟ್ಟ ಜಿಲ್ಲೆಗಳಲ್ಲಿ ಬೆಳಗಾವಿ ಅಗ್ರಸ್ಥಾನ ಪಡೆದಿದೆ.
ಗಡಿ ಜಿಲ್ಲೆಯ ಬೆಳಗಾವಿಗೆ ಇತ್ತೀಚೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಒಟ್ಟು 8 ಕೋಟಿ ರೈತರ ಖಾತೆಗೆ 16,800 ಕೋಟಿ ರೂಪಾಯಿ ಮೊತ್ತದ 13ನೇ ಕಂತಿನ ಹಣವನ್ನು ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಿದ್ದರು. ಅಂದಿನಿಂದ ಆನ್ಲೈನ್ ಮೂಲಕ ಈಗಾಗಲೆ ರಾಜ್ಯಾದ್ಯಂತ 49,55,791 ರೈತರ ಖಾತೆಗೆ ಒಟ್ಟು 991.16 ಕೋಟಿ ರೂ. ಜಮೆ ಮಾಡಲಾಗಿದೆ.
ವರ್ಷದಿಂದ ವರ್ಷಕ್ಕೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಕುರಿತು ರೈತಾಪಿ ಜನರಲ್ಲಿ ಜಾಗೃತಿ ಮೂಡುತ್ತಿದ್ದು, ಪ್ರತಿ ಜಿಲ್ಲೆಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗುತ್ತಿವೆ. ಯೋಜನೆ ಆರಂಭಗೊಂಡ ವರ್ಷ 2018ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕೇವಲ 4,066 ರೈತರು ಅರ್ಜಿ ಸಲ್ಲಿಸಿದ್ದರು. ಮೊದಲು ಮೂರು ಕಂತುಗಳು ಜಮೆಯಾದ ಬಳಿಕ, ನಂತರ 2019-20ರಲ್ಲಿ 4,95,608 ರೈತರು ಫಲಾನುಭವಿಗಳಾಗಿದ್ದರು. ಇದೀಗ 2022-23ರಲ್ಲಿ ಒಟ್ಟು 5,68,733 ರೈತರ ಅರ್ಜಿ ಸಲ್ಲಿಸಿದ್ದರು. ಅವುಗಳಲ್ಲಿ ಈಗಾಗಲೆ ಅರ್ಹ 5,10,649 ರೈತರಿಗೆ ಒಟ್ಟು 102 ಕೋಟಿ 13 ಲಕ್ಷ ರೂ. ಜಮೆ ಮಾಡಲಾಗಿದೆ.
ಇನ್ನು 2,28,873 ರೈತರಿಗೆ 56,57 ಕೋಟಿ ರೂ. ಸಂದಾಯ ಮಾಡುವ ಮೂಲಕ ತುಮಕೂರು ಜಿಲ್ಲೆ ದ್ವಿತೀಯ ಹಾಗೂ 2,49,058 ರೈತರಿಗೆ 49.81 ಕೋಟಿ ರೂ. ಜಮೆ ಮಾಡಿ ಹಾಸನ ತೃತೀಯ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಕಲಬುರಗಿ (2.43 ಲಕ್ಷ ರೈತರು), ಮಂಡ್ಯ (2.40,763 ಲಕ್ಷ ರೈತರು) ಹಾಗೂ ವಿಜಯಪುರ ಜಿಲ್ಲೆಯಲ್ಲಿ 2,40,448 ರೈತರ ಖಾತೆಗೆ ಕಿಸಾನ್ ಸಮ್ಮಾನ್ ದೊರಕಿದ್ದು, ಅತಿ ಕಡಿಮೆ ರೈತರಿಗೆ ತಲುಪಿದ ಜಿಲ್ಲೆಗಳಾಗಿ ಬೆಂಗಳೂರು ನಗರ (27,806 ರೈತರು) ಹಾಗೂ ಕೊಡಗು (44,306 ರೈತರ) ಜಿಲ್ಲೆಗಳು ಕೊನೆಯ ಸ್ಥಾನದಲ್ಲಿವೆ.
ಕಿಸಾನ್ ಸಮ್ಮಾನ್ ಯೋಜನೆಯ ಪ್ರತಿ ಕಂತು ನಿಗದಿತ ಅವಧಿಯಲ್ಲೆ ಜಮೆಯಾಗುತ್ತಿರುವುದರಿಂದ ರಾಜ್ಯಾದ್ಯಂತ ಸಹಜವಾಗಿಯೇ ರೈತರ ನಿರೀಕ್ಷೆ ಹೆಚ್ಚಾಗುತ್ತಿದ್ದು, ಅರ್ಜಿ ಸಲ್ಲಿಸುವವರ ಸಂಖ್ಯೆ ಏರಿಕೆಯಾಗಿದೆ. ಒಂದೇ ಕುಟುಂಬದಲ್ಲಿನ ಸಹೋದರರು ಹಾಗೂ ತಂದೆ-ಮಕ್ಕಳ ಹೆಸರಿಗೆ ಜಮೀನು ಪೋಡಿ ಮಾಡಿಕೊಳ್ಳುವುದರ ಮೂಲಕ ಪ್ರತ್ಯೇಕ ಕುಟುಂಬಗಳೆಂದು ದಾಖಲೆ ಸಲ್ಲಿಸುತ್ತಿದ್ದಾರೆ. ನಿಯಮದ ಪ್ರಕಾರ ಒಂದೇ ಜಮೀನು (ವೀಸ್ತೀರ್ಣ ಎಷ್ಟಾದರೂ) ಎರಡ್ಮೂರು ಜಂಟಿ ಖಾತೆಯಲ್ಲಿದ್ದರೂ ಕುಟುಂಬಗಳು ಬೇರೆ ಬೇರೆ ಎಂದು ಪರಿಗಣಿಸಿ ಎಲ್ಲ ಖಾತೆದಾರರೂ ಕಿಸಾನ್ ಸಮ್ಮಾನ್ ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ, ಯೋಜನೆಯ ಲಾಭ ಪಡೆಯುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, 2019ರ ಜ.1 ರಿಂದ ಈಚೆಗೆ ಜಮೀನು ಖರೀದಿಸಿದವರು ಈ ಯೋಜನೆಯಡಿ ಅರ್ಹರಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. ತಂದೆಯ ಮರಣದ ನಂತರ ಪೌತಿ ಎಂದು ನಮೂದಾಗಿರುವ ಪಹಣಿಯಲ್ಲಿ ಮಕ್ಕಳನ್ನು ಪ್ರತ್ಯೇಕ ಕುಟುಂಬ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ವರ್ಷದ ಹಿಂದೆ ಕೃಷಿ ಜಮೀನಿಗೆ ಸಂಬಂಧಪಟ್ಟಂತೆ ಕಿಸಾನ್ ಸಮ್ಮಾನಕ್ಕಾಗಿ ಒಂದೇ ಪಹಣಿ ಪತ್ರದಿಂದ ಸಲ್ಲಿಕೆಯಾಗುತ್ತಿದ್ದ ಅರ್ಜಿಯೂ ಈ ಬಾರಿ ಎರಡ್ಮೂರು ಹೆಸರಲ್ಲಿ ಹಂಚಿಕೆಯಾಗಿರುವ ದಾಖಲೆಗಳು ಯೋಜನೆಯಡಿ ಅರ್ಹಗೊಳ್ಳುತ್ತಿವೆ.