ಏ.1ರಿಂದ ಆರು ಸಂಖ್ಯೆಯ ಹಾಲ್‌ಮಾರ್ಕ್ ಯೂನಿಕ್ ಐಡೆಂಟಿಫಿಕೇಶನ್ ನಂಬರ್ (ಎಚ್‌ಯುಐಡಿ) ಇರುವ ಚಿನ್ನಾಭರಣ ಮಾರಾಟಕ್ಕೆ ಮಾತ್ರ ಅವಕಾಶವಿದೆ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಅದರ ಪ್ರಕಾರ, ಎಚ್‌ಯುಐಡಿ ನಂಬರ್ ಇಲ್ಲದ ಹಳೆಯ ಹಾಲ್‌ಮಾರ್ಕ್ ಚಿನ್ನಾಭರಣ ಮಾರಾಟಕ್ಕೆ ಮಾ.31ರ ನಂತರ ಅವಕಾಶವಿರುವುದಿಲ್ಲ.
ಏತಕ್ಕಾಗಿ ಈ ನಿರ್ಧಾರ?
ಗ್ರಾಹಕರ ಹಿತರಕ್ಷಣೆಯ ದೃಷ್ಟಿಯಿಂದ ಈ ಕ್ಷೇತ್ರದ ಪಾಲುದಾರರ ಸಭೆಯ ಬಳಿಕ ಗ್ರಾಹಕರ ವ್ಯವಹಾರಗಳ ಸಚಿವಾಲಯವು ಜ.18ರಂದು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿತು.
ಎಚ್‌ಯುಐಡಿ ನಂಬರ್ ಗುರುತಿಸುವುದು ಹೇಗೆ?:
ಚಿನ್ನದ ಪರಿಶುದ್ಧತೆಯನ್ನು ಪ್ರಮಾಣಿಕರಿಸಲು ಹಾಲ್‌ಮಾರ್ಕ್ ಕಡ್ಡಾಯವಾಗಿದೆ. ಈ ಹಿಂದೆ ಚಿನ್ನಾಬರಣದ ಮೇಲೆ ಬಿಐಎಸ್ ಲೋಗೊ, ಆಭರಣದ ಪರಿಶುದ್ಧತೆ ಪ್ರಮಾಣ, ಮಾರಾಟ ಮಾಡುವವರ ಲೋಗೊ ಹಾಗೂ ಹಾಲ್‌ಮಾರ್ಕಿಂಗ್ ಕೇಂದ್ರದ ಲೋಗೊ ಹಾಕಲಾಗುತ್ತಿತ್ತು. ಇನ್ನು ಮುಂದೆ ಆರು ಸಂಖ್ಯೆಯ ಎಚ್‌ಯುಐಡಿ ನಂಬರ್ ಹಾಕಲಾಗುತ್ತದೆ.
ಸಮಾಯಾವಕಾಶ ನೀಡಲಾಗಿತ್ತು
2021ರ ಜು.1ರಲ್ಲೇ ಎಚ್‌ಯುಐಡಿ ನಂಬರ್ ಪರಿಚಯಿಸಲಾಗಿತ್ತು. ನಾಲ್ಕು ಸಂಖ್ಯೆಯ ಹಾಲ್‌ಮಾರ್ಕ್ ಇರುವ ಚಿನ್ನಾಭರಣ ಮಾರಾಟಕ್ಕೆ, ತಮ್ಮ ಬಳಿ ಇರುವ ಹಳೆಯ ಸ್ಟಾಕ್‌ಗಳ ಕ್ಲಿಯರೆನ್ಸ್‌ಗಾಗಿ ಚಿನ್ನಾಭರಣ ಮಾಲೀಕರಿಗೆ ಒಂದು ವರ್ಷ ಒಂಬತ್ತು ತಿಂಗಳು ಸರ್ಕಾರ ಅವಕಾಶ ನೀಡಿತ್ತು. ಚಿನ್ನಕ್ಕೆ ಎಚ್‌ಯುಐಡಿ ನಂಬರ್ ಕಡ್ಡಾಯಗೊಳಿಸಲು ಹಿಂದೆಯೇ ತೀರ್ಮಾನಿಸಲಾಗಿತ್ತು. ಅಗತ್ಯ ಸಮಾಯಾವಕಾಶ ನೀಡಿ 2023ರ ಏ.1ರಿಂದ ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿದೆ.
ಹಳೆಯ ಚಿನ್ನದ ಗತಿ ಏನು?
ಗ್ರಾಹಕರ ಬಳಿ ಇರುವ ಹಳೆಯ ಚಿನ್ನಕ್ಕೆ ಮಾನ್ಯತೆ ಇದ್ದೇ ಇರುತ್ತದೆ. ಚಿನ್ನ ಕೊಳ್ಳುವವರು ಪರಿಶುದ್ಧತೆ ಆಧಾರದಲ್ಲಿ ಅದಕ್ಕೆ ಬೆಲೆ ಕಟ್ಟುತ್ತಾರೆ.
ವಂಚನೆಗೆ ಒಳಗಾದರೆ ಪರಿಹಾರ
2018ರ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ ನಿಯಮಗಳ ಸೆಕ್ಷನ್ 49ರ ಪ್ರಕಾರ, ಗ್ರಾಹಕರು ಖರೀದಿಸಿದ ಹಾಲ್‌ಮಾರ್ಕ್ ಆಭರಣದ ಮೇಲೆ ಗುರುತು ಮಾಡುವುದಕ್ಕಿಂತ ಕಡಿಮೆ ಶುದ್ಧತೆ ಇದೆ ಎಂದು ಕಂಡುಬಂದರೆ, ಆಗ ಖರೀದಿದಾರರು/ಗ್ರಾಹಕರು ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಶುದ್ಧತೆಯಲ್ಲಿ ಎಷ್ಟು ಕಡಿಮೆಯಿದೆ ಎಂಬ ಆಧಾರದಲ್ಲಿ ಅದರ ತೂಕದ ಎರಡು ಪಟ್ಟು, ಜತೆಗೆ ಪರೀಕ್ಷಾ ಶುಲ್ಕ ಸೇರಿ ಪರಿಹಾರ ನೀಡಬೇಕಾಗುತ್ತದೆ.
ಹಾರ್ಲ್ಮಾರ್ಕ್ ಪ್ರಯೋಜನ
ಹಾರ್ಲ್ಮಾರ್ಕ್ ಮಾಡಲಾದ ಆಭರಣಗಳು, ಪ್ರಮಾಣೀಕರಣ ಮತ್ತು ಗುಣಮಟ್ಟದ ದೃಢೀಕರಣವಾಗಿದ್ದು, ಅದು ಗ್ರಾಹಕರಿಗೆ ಚಿನ್ನದ ಶುದ್ಧತೆಯ ವಿಶ್ವಾಸವನ್ನು ನೀಡುತ್ತದೆ. ಇದು ಗ್ರಾಹಕರಿಗೆ ಜುವೆಲ್ಲರ್ನಿಂದ ವಂಚನೆಯನ್ನು ತಪ್ಪಿಸುತ್ತದೆ. ಎಷ್ಟು ಶುದ್ಧತೆಯ ಚಿನ್ನವನ್ನು ಖರೀದಿಸಲಾಗುತ್ತಿದೆ ಎಂಬ ಬಗ್ಗೆ ದೃಢೀಕರಣವನ್ನು ಗ್ರಾಹಕರು ಪಡೆಯುತ್ತಾರೆ.