ಬೆಂಗಳೂರು: ಸ್ಯಾಂಡಲ್‌ವುಡ್ ಉದಯೋನ್ಮುಖ ನಟ, ದುನಿಯಾ ವಿಜಯ ಅವರ ಸಲಗ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟ್ಟಿಸಿದ್ದ ಸುಶೀಲ್ ಅವರು ಆತ್ಮಹತ್ಯೆಗೆ ಶರಣರಾಗಿದ್ದಾರೆ ಎನ್ನಲಾಗಿದೆ.
ಸುಶೀಲ್ ಸಾವಿನ ಬಗ್ಗೆ ದುನಿಯಾ ವಿಜಯ್ ಫೇಸ್ ಬುಕ್ ನಲ್ಲಿ ಕಂಬನಿ ಮಿಡಿದಿದ್ದಾರೆ. ‘ಸಲಗ’ ಚಿತ್ರದಲ್ಲಿ ಒಂದು ಒಳ್ಳೆಯ ಪೊಲೀಸ್ ಪಾತ್ರವಿದೆ. ಅದನ್ನು ಒಬ್ಬ ಸ್ಫುರದ್ರೂಪಿ ಹುಡುಗ ನಿರ್ವಹಿಸಿದ್ದ. ಆತನ ಹೆಸರು ಸುಶೀಲ್ ಅಂತ. ಮಂಡ್ಯದವನು. ಆತನ ನೋಡ್ತಿದ್ರೆ ಮುಂದೊಮ್ಮೆ ಹೀರೋ ಆಗಬಹುದಾದ ಹುಡುಗ ಅಂತ ಮನಸ್ಸಲ್ಲೇ ಅಂದ್ಕೊಂಡಿದ್ದೆ. ಆದ್ರೆ ಅದೇನಾಯ್ತೋ ಗೊತ್ತಿಲ್ಲ; ನಿನ್ನೆ ಇರಬೇಕು ಆತ್ಮಹತ್ಯೆ ಮಾಡ್ಕೊಂಡಿದ್ದಾನೆ ಅಂತ ಗೊತ್ತಾಯ್ತು. ನನಗೆ ಈಗಲೂ ನಂಬೋಕೆ ಆಗ್ತಿಲ್ಲ. ಇಂಡಸ್ಟ್ರೀನಲ್ಲಿ ಬೆಳೆಯಬೇಕು ಅಂತ ಬರೋರು ಸಿನಿಮಾದಲ್ಲಿ ಒಂದೊಳ್ಳೆಯ ಅವಕಾಶ ಸಿಕ್ಕಮೇಲೂ ಚಿತ್ರ ಬಿಡುಗಡೆಗೂ ಕಾಯದೆ ಆತ್ಮಹತ್ಯೆ ಮಾಡ್ಕೊಳ್ಳೋದು ಅಂದರೆ ಏನು?! ನಿಮ್ಮ ಸಮಸ್ಯೆ ಎಷ್ಟೇ ದೊಡ್ಡದಿರಬಹುದು. ಆದರೆ ಸಾವು ಅದಕ್ಕೆ ಪರಿಹಾರವಾಗುತ್ತಾ? ಸಮಸ್ಯೆಗೆಲ್ಲ ಸಾವಲ್ಲೇ ಉತ್ತರ ಕಾಣೋದಾದ್ರೆ ಬಹುಶಃ ಭೂಮೀಲಿ ಯಾರೊಬ್ಬರೂ ಉಳಿದಿರಲ್ಲ ಅನ್ಸುತ್ತೆ! ಎಂದು ಕಂಬನಿ ಮಿಡಿದಿದ್ದಾರೆ.
ನೀವೇನೂ ಸತ್ತು ಹೋಗ್ತೀರಿ; ನಿಮಗೆ ಬೆಂಕಿ ಇಡಬೇಕಾದರೆ ಅಲ್ಲಿ ಜೀವ ಇರುವುದಿಲ್ಲ. ಆದರೆ ಜತೆಗಿರುವ ತಾಯಿ, ತಂದೆ, ಮಡದಿ ಜೀವನಪೂರ್ತಿ ಬೆಂಕಿಯಲ್ಲಿದ್ದಂಥ ಬದುಕು ಕೊಡ್ತೀರಲ್ಲ? ಇದೇನು ನ್ಯಾಯ? ಆತ್ಮಹತ್ಯೆ ಖಂಡಿತವಾಗಿ ತಪ್ಪು. ಸುಶೀಲ್ ಆತ್ಮಕ್ಕೆ ಶಾಂತಿ ಸಿಗಲಿ. ಆದರೆ ಮುಂದೆ ಯಾವ ತಂದೆ ತಾಯಿಗೂ ಇಂಥ ದುಃಖ ಎದುರಿಸುವ ಸಂದರ್ಭ ಬಾರದಿರಲಿ ಎಂದಿದ್ದಾರೆ.