ಇಟಿ, ಸಿಇಟಿಗಳನ್ನು ಎದುರಿಸಿ ಎಲ್ಲ ಅರ್ಹತೆಗಳೊಂದಿಗೆ ಅಯ್ಕೆಪಟ್ಟಿಯಲ್ಲಿ ಅವಕಾಶ ಪಡೆದಿದ್ದರೂ, ಮೀಸಲಾತಿ ಅನ್ವಯಿಸುವ ವಿಚಾರದಲ್ಲಿ ಉಂಟಾಗಿರುವ ಗೊಂದಲದಿಂದಾಗಿ ಅವಕಾಶ ಕೈತಪುಪತ್ತಿದೆ ಎಂದು ಪದವೀಧರ ಪ್ರಾಥಮಿಕ ಶಾಲಾ ಶಿಕಕ್ಷರ ಹುದ್ದೆಯ ಸಾವಿರಾರು ಆಕಾಂಕ್ಷಿಗಳು ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಹಾಗೂ ಮಹಿಳಾ ‘ಮೀಸಲಾತಿ’ ನೀಡುವಲ್ಲಿ ಉಂಟಾಗಿರುವ ಎಡವಟ್ಟು ಇದಕ್ಕೆ ಕಾರಣವೆಂದು ದೂರಿದ್ದಾರೆ. ಈ ಗೊಂದಲವನ್ನು ಸರಿಪಡಿಸುವಂತೆ ಭಾವಿ ಶಿಕ್ಷಕರ ವಲಯದಿಂದ ಒತ್ತಾಯ ಕೇಳಿಬಂದಿದೆ.
ಶಿಕ್ಷಕರ ನೇಮಕಾತಿ ಸಂಬಂಧ 2022ರ ಮಾ.21ರಂದು ಅಧಿಸೂಚನೆ ಹೊರಡಿಸಿದ್ದ ಇಲಾಖೆಯು ಮೇ 21, 22ರಂದು ನಡೆಸಿದ ಪರೀಕ್ಷೆಗೆ 68,849 ಮಂದಿ ಹಾಜರಾಗಿದ್ದರು. ಇದರಲ್ಲಿ 51,098 ಮಂದಿ ಅರ್ಹತೆ ಪಡೆದಿದ್ದರು. 1:2ರ ಅನುಪಾತದ ಪಟ್ಟಿಯಲ್ಲಿ 22,432 ಮಂದಿಯನ್ನು ಪರಿಗಣಿಸಲಾಗಿತ್ತು. ಅಂತಿಮವಾಗಿ 13,363 ಅಭ್ಯರ್ಥಿಗಳ 1:1ರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ನ.19ರಂದು ಪ್ರಕಟಿಸಿದೆ. ಆದರೀಗ ಮೀಸಲಾತಿ ಪ್ರಮಾದ ಬಹಿರಂಗವಾಗಿದೆ. ವಿವಾಹಿತ ಮಹಿಳಾ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಕೆ ಗೊಂದಲ, ಅಧಿಕಾರಿಗಳ ಮೀಸಲಾತಿ ಎಡವಟ್ಟಿನಿಂದ ಹುದ್ದೆ ಕೈತಪುಪತ್ತಿದೆ. ಕಲ್ಯಾಣ ಕರ್ನಾಟಕ ಹುದ್ದೆ ಮೀಸಲಾತಿಯಲ್ಲಿ 371(ಜೆ) ಇತರೆ ವೃಂದದಲ್ಲಿ ಶೇ.20 ಮೀಸಲಿನಲ್ಲಿ ಹುದ್ದೆಗೆ ಅವಕಾಶವಿದ್ದರೂ ಕಲ್ಪಿಸದ ಹಿನ್ನೆಲೆ ಸಾವಿರಾರು ಅಭ್ಯರ್ಥಿಗಳಿಗೆ ತೊಂದರೆಯಾಗಿದೆ. ಒಂದು ವೇಳೆ ಇಲಾಖೆಯಿಂದ ತಪ್ಪಾಗಿದ್ದರೆ ಆಕ್ಷೇಪಣೆಗಳನ್ನು ಪರಿಗಣಿಸಿ ಅಂತಿಮ ಪಟ್ಟಿ ಪ್ರಕಟಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಭರವಸೆ ಕೊಟ್ಟಿದ್ದಾರೆ.
ರೋಸ್ಟರ್ ಪದ್ಧತಿ ಪಾಲಿಸಿಲ್ಲ: ಕಲ್ಯಾಣ ಕರ್ನಾಟಕ ಮಾತ್ರವಲ್ಲ, ಇತರೆ ಜಿಲ್ಲೆಗಳಲ್ಲಿಯೂ ರೋಸ್ಟರ್ ಪದ್ಧತಿ ಪ್ರಕಾರ ಮೀಸಲಾತಿ ನೀಡುವಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಸಾಕಷ್ಟು ಗೊಂದಲ ಸೃಷ್ಟಿಸಿದ್ದಾರೆ. ಈ ಕಾರಣದಿಂದ ಅರ್ಹರು ಹುದ್ದೆ ಕಳೆದುಕೊಳ್ಳುವಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂಬ ಆಕ್ಷೇಪ ಕೇಳಿಬಂದಿದೆ.
ಆದಾಯ/ಜಾತಿ ಪತ್ರದ ಗೊಂದಲವೇನು?: ಅರ್ಜಿ ಸಲ್ಲಿಕೆ ವೇಳೆ ಅಭ್ಯರ್ಥಿಗಳು ಮಾಡಿರುವ ಲೋಪದಿಂದ ಮದುವೆಯಾಗಿರುವ ಅಂದಾಜು 900 ಮಹಿಳಾ ಅಭ್ಯರ್ಥಿಗಳಿಗೆ ಅರ್ಹತೆ ಹೊಂದಿದ್ದರೂ ಹುದ್ದೆ ಕೈ ತಪುಪತ್ತಿದೆ. 1:2 ಆಯ್ಕೆ ಪಟ್ಟಿಯಲ್ಲಿ ಪ್ರಕಟವಾಗಿದ್ದ ಅವರ ಹೆಸರು 1:1ರ ಪಟ್ಟಿಯಲ್ಲಿ ಪ್ರಕಟವಾಗಿಲ್ಲ. ಅರ್ಜಿ ಸಲ್ಲಿಕೆ ವೇಳೆ ಮಹಿಳಾ ಅಭ್ಯರ್ಥಿಗಳು ಮದುವೆಯಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ದಾಖಲೆ ಸಲ್ಲಿಕೆ ವೇಳೆ ಆದಾಯ/ಜಾತಿ ಪ್ರಮಾಣಪತ್ರವನ್ನು ತಂದೆಯ ಆದಾಯ ಪ್ರಮಾಣಪತ್ರ ಸಲ್ಲಿಸಿದ್ದಾರೆ. ನಿಯಮಗಳ ಪ್ರಕಾರ ಮದುವೆಯಾದ ಮಹಿಳಾ ಅಭ್ಯರ್ಥಿಗಳು ಪತಿಯ ಅದಾಯ ಪ್ರಮಾಣಪತ್ರವನ್ನೇ ಸಲ್ಲಿಸಬೇಕು. ಜಾತಿ ಪ್ರಮಾಣಪತ್ರದಲ್ಲಿ ಮಾತ್ರ ತಂದೆಯ ಜಾತಿಯೇ ಅನ್ವಯವಾಗಲಿದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ.
ಆಕ್ಷೇಪಣೆ ಸಲ್ಲಿಕೆಗೆ ಇಂದೇ ಕೊನೇ ದಿನ: ಶಿಕ್ಷಕರ ನೇಮಕಾತಿ ಸಂಬಂಧ ಅಭ್ಯರ್ಥಿ ಗಳು ಆಕ್ಷೇಪಣೆಗಳನ್ನು ಸಲ್ಲಿಸಲು ನ.30 ಕೊನೆಯ ದಿನವಾಗಿದೆ. 1:2 ಪಟ್ಟಿಯಲ್ಲಿ ಹೆಸರು ಬಂದಿದ್ದು, 1:1ರ ಪಟ್ಟಿಯಲ್ಲಿ ಕೈಬಿಟ್ಟಿದ್ದರೆ, ಸಂಬಂಧಪಟ್ಟ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಮಹಿಳಾ ಮೀಸಲಾತಿಗೆ ದೂರುಗಳೇನು?: ಚಿಕ್ಕೋಡಿಯಲ್ಲಿ 2ಎ ಅಂಗವಿಕಲ ಅಭ್ಯರ್ಥಿಗಳಿಗೆ 4 ಹುದ್ದೆಗಳನ್ನು ಮೀಸಲಿಡಲಾಗಿದೆ. ಈ ಪೈಕಿ ತಲಾ 2 ಹುದ್ದೆಗಳನ್ನು ಪುರುಷ/ಮಹಿಳೆಯರಿಗೆ ನೀಡಬೇಕಿತ್ತು. ಆದರೆ, ನಾಲ್ಕೂ ಹುದ್ದೆಗಳನ್ನು ಪುರುಷರಿಗೆ ನೀಡಲಾಗಿದೆ. ಶೇ.50 ಮೀಸಲಾತಿ ಮತ್ತು ಅರ್ಹತೆ ಇದ್ದರೂ 1:1ರ ಪಟ್ಟಿಯಲ್ಲಿ ಹೆಸರು ಪ್ರಕಟವಾಗಿಲ್ಲ. ಗ್ರಾಮೀಣ, ಕನ್ನಡ ಮಾಧ್ಯಮ, ಮಹಿಳಾ ಮೀಸಲಾತಿ ಕೋಟಾದಡಿ ತಮಗಿಂತ ಕಡಿಮೆ ಅಂಕ ಪಡೆದಿರುವ ಆಭ್ಯರ್ಥಿಗಳ ಹೆಸರು 1:1 ಪಟ್ಟಿಯಲ್ಲಿ ಪ್ರಕಟವಾಗಿದೆ. ಇದರಿಂದ ಅನ್ಯಾಯವಾಗಿದೆ ಎಂದು ಆಕಾಂಕ್ಷಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರಮಾದ?: ಕಲ್ಯಾಣ ಕರ್ನಾಟಕ ಹುದ್ದೆ ಮೀಸಲಾತಿಯಲ್ಲಿ 371(ಜೆ) ಸ್ಥಳೀಯ ವೃಂದದಲ್ಲಿ ಶೇ.80 ಮತ್ತು ಇತರೆ ವೃಂದದಲ್ಲಿ ಶೇ.20 ಮೀಸಲಾತಿ ನೀಡಲಾಗಿದೆ. ಆದರೆ, ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಹೆಚ್ಚು ಅಂಕ ಪಡೆದು ಅರ್ಹತೆ ಪಡೆದರೆ, ಶೇ.20 ಮೀಸಲಿನಲ್ಲೂ ಹುದ್ದೆ ಪಡೆದುಕೊಳ್ಳಬಹುದು. ಆದರೆ, ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗಿಂತ ಕಡಿಮೆ ಅಂಕ ಪಡೆದಿರುವ ಇತರೆ ಜಿಲ್ಲೆಗಳ ಆಭ್ಯರ್ಥಿಗಳನ್ನು 1:1ರ ಆಯ್ಕೆ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ. ಕನ್ನಡ ಮಾಧ್ಯಮ, 371(ಜೆ), ಸ್ಥಳೀಯ ವೃಂದ ಮೀಸಲಾತಿ ಇದ್ದರೂ ಹುದ್ದೆ ಪಡೆಯಲು ಸಾಧ್ಯ ಆಗುತ್ತಿಲ್ಲವೆಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.