ಚೆನ್ನೈ: 14 ವರ್ಷದ ಬಾಲಕಿಯ ಸುಟ್ಟ ಮೃತದೇಹ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಪತ್ತೆಯಾಗಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ.
ತಿರುಚ್ಚಿಯ ಸೋಮರಸಂಪೆಟ್ಟಾಯ್ ಗ್ರಾಮದಲ್ಲಿ ಕಸದ ರಾಶಿಯ ಪಕ್ಕದಲ್ಲಿ ಬಾಲಕಿಯ ಸುಟ್ಟ ಶವ ಪತ್ತೆಯಾಗಿದೆ. ಸ್ಥಳೀಯರು ಕಸ ವಿಲೇವಾರಿ ಪ್ರದೇಶದ ಬಳಿ ಬಾಲಕಿಯ ಶವವನ್ನು ನೋಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೃತ ಬಾಲಕಿ ಸೋಮವಾರ ಮಧ್ಯಾಹ್ನ ಕಸ ಎಸೆಯಲು ತನ್ನ ಮನೆಯಿಂದ ಬಂದಿದ್ದಾಳೆ. ಆದರೆ ತುಂಬಾ ಸಮಯವಾದರೂ ಬಾಲಕಿ ಮನೆಗೆ ಹಿಂದಿರುಗಿಲ್ಲ. ಹೀಗಾಗಿ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಬಾಲಕಿ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಪೋಷಕರು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಸ್ಥಳೀಯರು ಬಾಲಕಿಯ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಅರೆ-ಬರೆ ಸುಟ್ಟ ಬಾಲಕಿಯ ಬಟ್ಟೆಯಿಂದ ಪೋಷಕರು ತಮ್ಮ ಮಗಳು ಎಂದು ಗುರುತಿಸಿದ್ದಾರೆ.
ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಹುಡುಗಿ ಮಧ್ಯಾಹ್ನ 12.15ಕ್ಕೆ ಮನೆಯಿಂದ ಹೊರ ಬಂದಿದ್ದಾಳೆ. ಸಂಜೆಯಾದರೂ ಮನೆಗೆ ಹಿಂದಿರುಗಿಲ್ಲ ಎಂದು ಪೋಷಕರು ಮಗಳಿಗಾಗಿ ಹುಡುಕಾಡಿದ್ದಾರೆ. ಕೊನೆಗೆ ಆಕೆಯ ಪೋಷಕರು ಸಂಜೆ 5ಕ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಯಾರೂ ಈ ಕೊಲೆ ಮಾಡಿದ್ದಾರೆ ಎಂಬುದು ನಿಖರವಾಗಿ ತಿಳಿದಿಲ್ಲ. ನಾವು ತನಿಖೆ ನಡೆಸುತ್ತಿದ್ದೇವೆ. ಆದರೆ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಡಿಐಜಿ ಅನ್ನಿ ವಿಜಯಾ ತಿಳಿಸಿದ್ದಾರೆ.