Breaking News

ನಕಲಿ ಚಿನ್ನ: 10 ಬ್ಯಾಂಕ್‌ಗಳಿಗೆ ವಂಚನೆ

Spread the love

ಬೆಳಗಾವಿ: ಜಿಲ್ಲೆಯ ಹತ್ತು ವಿವಿಧ ಬ್ಯಾಂಕ್‌ ಹಾಗೂ ಸಹಕಾರ ಸಂಸ್ಥೆಗಳಲ್ಲಿ ನಕಲಿ ಚಿನ್ನದ ಮೇಲೆ ಸಾಲ ಪಡೆದ ಒಂಬತ್ತು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್‌ ಸೊಸೈಟಿಯ ಭೋಜ ಶಾಖೆಯ ವ್ಯವಸ್ಥಾಪಕ ಸದಲಗಾ ಗ್ರಾಮದ ಆನಂದ ಚಿದಾನಂದ ಕಮತೆ ಅವರು ದೂರು ನೀಡಿದ ನಂತರ ಈ ಪ್ರಕರಣಗಳು ಬೆಳಕಿಗೆ ಬಂದಿವೆ.

 

ಭೋಜ ಗ್ರಾಮದ ನಿವಾಸಿ ದಾದಾ
ಸಾಹೇಬ ದತ್ತು ತಿಲಕ ಎನ್ನುವವರು ನಕಲಿ ಚಿನ್ನಕ್ಕೆ ಹಾಲ್‌ಮಾರ್ಕ್‌ ಹಾಕಿ ಅಸಲಿ ಚಿನ್ನವೆಂದು ಬಿಂಬಿಸಿ, ಬೀರೇಶ್ವರ ಕೋ ಆಪ್ ಕ್ರೆಡಿಟ್‌ ಸೊಸೈಟಿಯಯಲ್ಲಿ ₹ 2.75 ಲಕ್ಷ ಸಾಲ ಪಡೆದಿದ್ದರು. ಆನಂದ ಕಮತೆ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ವಿಚಾರಣೆ ಮಾಡಲಾಗಿ, ಉಳಿದ ಪ್ರಕರಣಗಳೂ ಬೆಳಕಿಗೆ ಬಂದಿವೆ.

ಕೊಲ್ಹಾಪುರ ಮೂಲದ ಅಮೂಲ್ ಗಣಪತಿ ಪೋತದಾರ, ರಾಜಸ್ಥಾನದ ಜೈಪುರ ಮೂಲದ ಪಪ್ಪು ಮದನಲಾಲ್‌ ಜಾಂಗಿಡ ಹಾಗೂ ಇತರ ಆರೋಪಿಗಳಾದ ಇಚಲಕರಂಜಿಯ ಓಂಕಾರ ಚಂದ್ರಕಾಂತ ದಬಾಡೆ, ಗಣೇಶ ನೇಮಿನಾಥ ಗೋಡಕೆ, ಚಂದು ಗಜಾಜ್‌ ಚೋರಗೆ, ಗೌಸಪಾಕ್‌ ಅಬ್ದುಲ್‌ ರಜಾಕ್‌ ಜಮಾದಾರ, ಸುಹಾಸ್‌ ಸತ್ಯಪ್ಪ ಮೋಹಿತೆ, ಅಥಣಿಯ ಫರೀದ್‌ ಅಬ್ದುಲ್‌ ಮಕಾನದಾರ ಅವರನ್ನು ಬಂಧಿಸಿ, ತನಿಖೆಗೆ ಒಳಪಡಿಸಲಾಗಿದೆ.

ಬೋರಗಾಂವದ ಜನತಾ ಕೋ ಅಪ್‌ ಕ್ರೆಡಿಟ್‌ ಸೊಸೈಟಿ, ಮಾಂಗೂರಿನ ಶ್ರೀ ಭೈರವನಾಥ ಕೋ ಆಪ್‌ ಕ್ರೆಡಿಟ್‌ ಸೊಸೈಟಿ, ಹೆಬ್ಬಾಳ ಅರ್ಬನ್‌ ಕ್ರೆಡಿಟ್‌ ಸೌಹಾರ್ದ ಸಹಕಾರ ಸಂಘ, ರಾಯಬಾಗದ ಕರ್ನಾಟಕ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ, ಚಿಕ್ಕೋಡಿಯ ಎಚ್‌ಡಿಎಪ್‌ಸಿ ಬ್ಯಾಂಕ್ ಶಾಖೆ, ಎಂ.ಎ.ಜಿ ಫೈನಾನ್ಸ್‌, ಐಸಿಐಸಿ ಬ್ಯಾಂಕ್‌ ಶಾಖೆ, ಬೈಲಹೊಂಗಲದ ಎಕ್ಸಿಸ್ ಬ್ಯಾಂಕ್‌ ಶಾಖೆ, ಎಕ್ಸಿಸ್‌ ಬ್ಯಾಂಕ್‌ ನಿಪ್ಪಾಣಿ ಶಾಖೆ ಇವುಗಳಲ್ಲಿ ಇದೇ ತರದ ಕೃತ್ಯ ಎಸಗಿದ್ದಾರೆ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ಚಿಕ್ಕೋಡಿ ಡಿವೈಎಸ್ಪಿ ಬಸವರಾಜ ಯಲಿಗಾರ, ಸಿಪಿಐ ಆರ್.ಆರ್.ಪಾಟೀಲ, ಪಿಎಸ್‌ಐ ಯಮನಪ್ಪ ಮಾಂಗ, ಪ್ರವೀಣ ಬೀಳಗಿ, ಸದಲಗಾ ಪಿಎಸ್‌ಐ ಭರತ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದರು.

ನೇಕಾರ ಆತ್ಮಹತ್ಯೆ

ಬೆಳಗಾವಿ: ಇಲ್ಲಿನ ಖಾಸಬಾಗ ವರದಪ್ಪ ಗಲ್ಲಿಯ ನಿವಾಸಿ ಚನ್ನಪ್ಪ ಬಾಬು ದೊಡ್ಡಶಾನಟ್ಟಿ (47) ಅವರು ಸಾಲಬಾಧೆ ತಾಳದೇ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಗ್ಗದ ಯಂತ್ರಗಳನ್ನು ದುರಸ್ತಿ ಕೆಲಸ ಮಾಡುತ್ತಿದ್ದ ಅವರು, ಕೊರೊನಾ ಸಮಯದಲ್ಲಿ ಉದ್ಯೋಗದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಮತ್ತೆ ನೇಕಾರಿಕೆಯಲ್ಲಿ ಚೇತರಿಕೆ ಕಾಣುವ ಆಸೆಯಿಂದ ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿದ್ದರು.

ಇದರ ಕಿರುಕುಳ ಹೆಚ್ಚಿದ್ದರಿಂದ ಕಳೆದ ಕೆಲ ತಿಂಗಳಿಂದ ಚಿಂತೆಗೀಡಾಗಿದ್ದರು. ಸೋಮವಾರ ಸಂಜೆ ನಗರದ ಕಲ್ಮೇಶ್ವರ ಕೆರೆಯ ಹತ್ತಿರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಅವರಿಗೆ ತಾಯಿ, ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*

ತಂದೆ ಕೊಲೆ: ಪುತ್ರ, ಸ್ನೇಹಿತನ ಬಂಧನ

ಕೌಜಲಗಿ: ಸಮೀಪದ ಕುಲಗೋಡ ಗ್ರಾಮದಲ್ಲಿ ಪುತ್ರನೇ ತಂದೆಯನ್ನು ಕೊಲೆ ಮಾಡಿದ ಪ್ರಕರಣ ತಡವಾಗಿ ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.

ಕುಲಗೋಡದ ಮಾರುತಿ ಬೀರಪ್ಪ ಕುರಬೇಟ ಕೊಲೆಯಾದವರು. ಇವರ ಪುತ್ರ ಕೃಷ್ಣ ಹಾಗೂ ಈತನ ಸ್ನೇಹಿತ ಕಲ್ಮೇಶ ನಾಗಪ್ಪ ಗಡಾದ ಬಂಧಿತರು. ಆಸ್ತಿಗಾಗಿ ಈ ಕೊಲೆ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರುತಿ ಅವರಿಗೆ ಇಬ್ಬರು ಪತ್ನಿಯರಿದ್ದಾರೆ. ಅವರ ಐದು ಎಕರೆ ಜಮೀನು ಯಾರಿಗೆ ಸೇರಬೇಕು ಎಂಬ ಬಗ್ಗೆ ತಕರಾರು ನಡೆದಿತ್ತು. ಈಚೆಗೆ ಗ್ರಾಮದಲ್ಲಿ ನಡೆದ ಹಿರಿಯರ ಸಭೆಯಲ್ಲಿ, ತಮ್ಮ 5 ಎಕರೆ ಜಮೀನಿನಲ್ಲಿ ಇಬ್ಬರು ಪತ್ನಿಯರಿಗೆ ತಲಾ 2 ಏಕರೆ 20 ಗುಂಟೆ ಹಂಚುವುದಾಗಿ ಮಾರುತಿ ಹೇಳಿದ್ದರು.

ಇದಕ್ಕೆ ಒಪ್ಪದ ಮೊದಲ ಪತ್ನಿಯ ಮಗ ಕೃಷ್ಣ ಹಾಗೂ ಆತನ ಸ್ನೇಹಿತ ಕಲ್ಮೇಶ ಪೂರ್ತಿ ಹೊಲಕ್ಕಾಗಿ ಬೇಡಿಕೆ ಇಟ್ಟಿದ್ದರು. ಕಳೆದ ಶುಕ್ರವಾರ ಮಾರುತಿ ಅವರು ದನಕರುಗಳಿಗೆ ಮೇವು ತರಲು ಹೋಗುತ್ತಿದ್ದ ವೇಳೆ ಅವರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದರು. ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ, ಕಬ್ಬಿನ ಹೊಲದಲ್ಲಿ ಶವ ಬಿಸಾಡಿ ಪರಾರಿಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ ಹಾಗೂ ಕುಲಗೋಡ ಪಿಎಸ್‌ಐ ಗೋವಿಂದಗೌಡ ಪಾಟೀಲ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. ಕಾರ್ಯಚರಣೆಯಲ್ಲಿ ಎಲ್.ಎಂ. ನಾಯಿಕ, ಮಾಳಪ್ಪ ಆಡಿನ, ಕಲ್ಮೇಶ ಬಾಗಲಿ, ಸಿದ್ದು ಬಡಬಡಿ ಇದ್ದರು. ಕುಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ