ಮೈಸೂರು: ಇತ್ತೀಚೆಗಷ್ಟೇ ಪ್ರತ್ಯೇಕ ರಾಜ್ಯದ ಬಗ್ಗೆ ಉಲ್ಲೇಖ ಮಾಡಿದ್ದ ಸಚಿವ ಉಮೇಶ್ ಕತ್ತಿ ಇದೀಗ ಮತ್ತೆ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ. ತನ್ನ ಹೇಳಿಕೆಯನ್ನು ಸಮರ್ಥಿನೆ ಮಾಡಿಕೊಂಡಿರುವ ಸಚಿವ ಕತ್ತಿ, ‘ಅಭಿವೃದ್ಧಿ ದೃಷ್ಟಿಯಿಂದ ನಾನು ಪ್ರತ್ಯೇಕ ರಾಜ್ಯ ಕೇಳುತ್ತಿದ್ದೇನೆ ಹೊರತು ಬೇರೆ ಉದ್ದೇಶವಿಲ್ಲ” ಎಂದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗಬೇಕಾದರೆ ಅಖಂಡ ಕರ್ನಾಟಕದ ಸಿಎಂ ಆಗುತ್ತೇನೆ. ನನ್ನ ಹಣೆಬರಹದಲ್ಲಿ ಬರೆದಿದ್ದರೆ ನಾನು ಸಿಎಂ ಆಗುತ್ತೇನೆ. ಇರುವ 224 ಶಾಸಕರಲ್ಲಿ ನಾನೇ ಹಿರಿಯ ಶಾಸಕ. ನನಗೆ ಸಿಎಂ ಆಗುವ ಎಲ್ಲಾ ಅರ್ಹತೆಯಿದೆ. ಸಿಎಂ ಸ್ಥಾನಕ್ಕಾಗಿ ನಾನು ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ. ಪ್ರತ್ಯೇಕ ರಾಜ್ಯವಾದರೂ ಕೂಡಾ ನಾವು ಕನ್ನಡಿಗರೇ. ಆಂಧ್ರ ತೆಲಂಗಾಣ ರೀತಿಯಲ್ಲೇ ನಮ್ಮದು ಪ್ರತ್ಯೇಕವಾಗಲಿ ಎಂದು ಬಯಸಿದ್ದೇನೆ. ನಮ್ಮ ಜನರ ದೃಷ್ಟಿಯಿಂದ ನಾನೇ ಹಿರಿಯನಾಗಿ ಧ್ವನಿ ಎತ್ತಿದ್ದೇನೆ ಎಂದರು.
ಹೈಕಮಾಂಡ್ ಮಟ್ಟದಲ್ಲೂ ಹೊಸ ರಾಜ್ಯಗಳ ರಚನೆ ಬಗ್ಗೆ ಚಿಂತನೆ ನಡೆದಿದೆ ಎಂಬುದು ನನ್ನ ಅನಿಸಿಕೆ. ನಾನು ಮಾತನಾಡಿದರೆ ಆ ವಿಚಾರ ಕೇಂದ್ರದ ಮಟ್ಟಕ್ಕೂ ಹೋಗುತ್ತದೆ. ಹೀಗಾಗಿ ಮಾತನಾಡುತ್ತಿದ್ದೇನೆ ಎಂದು ಕತ್ತಿ ಹೇಳಿದರು.