ನವದೆಹಲಿ: ಆಗ್ನೇಯ ಏಷ್ಯಾ ಮತ್ತು ಯುರೋಪ್ನ ಕೆಲ ಭಾಗಗಳಲ್ಲಿ ಕೋವಿಡ್ ಸೋಂಕು ಮತ್ತೆ ಅಬ್ಬರಿಸುತ್ತಿದ್ದು ಕಳವಳ ಸೃಷ್ಟಿಸಿರುವುದರ ನಡುವೆ ಭಾರತದಲ್ಲಿ ಹೊಸ ಅಲೆ ಅಪ್ಪಳಿಸಿದರೂ ಗಂಭೀರ ಪರಿಣಾಮ ಬೀರದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕಡ್ಡಾಯ ಮಾಸ್ಕ್ ಧಾರಣೆ ನಿಯಮವನ್ನು ಸಡಿಲಿಸಲೂ ಕೆಲವರು ಸಲಹೆ ಮಾಡಿದ್ದಾರೆ. ನೈಸರ್ಗಿಕ ಸೋಂಕಿನ ಕಾರಣದಿಂದ ರೋಗನಿರೋಧಕತೆ (ಇಮ್ಯುನಿಟಿ) ಹೆಚ್ಚಳ ಮತ್ತು ಅಧಿಕ ಲಸಿಕೆ ನೀಡಿಕೆಯಿಂದಾಗಿ ದೇಶದಲ್ಲಿ ಮುಂದೆ ಕರೊನಾ ಅಲೆ ಅಪ್ಪಳಿಸಿದರೂ ಅದು ದೊಡ್ಡ ರೀತಿಯಲ್ಲಿ ಪರಿಣಾಮ ಬೀರದು ಎನ್ನುವುದು ತಜ್ಞರ ಅಭಿಮತವಾಗಿದೆ.
ಸೋಂಕಿನ ಹೊಸ ಪ್ರಕರಣಗಳು ಹಾಗೂ ಸಾವಿನ ಪ್ರಮಾಣ ಕ್ಷೀಣಿಸಿರುವುದರಿಂದ ಕಡ್ಡಾಯ ಮಾಸ್ಕ್ ನಿಯಮವನ್ನು ಸಡಿಲಿಸುವುದನ್ನೂ ಸರ್ಕಾರ ಪರಿಶೀಲಿಸಬಹುದು ಎನ್ನುವುದು ಅವರ ಸಲಹೆಯಾಗಿದೆ. ಸಾರ್ಸ್-ಸಿಒವಿ-2 ಆರ್ಎನ್ಎ ವೈರಸ್ ಆಗಿದ್ದು ರೂಪಾಂತರಗೊಳ್ಳುತ್ತಲೇ ಇರುತ್ತದೆ. ಈಗಾಗಲೇ 1,000ಕ್ಕೂ ಅಧಿಕ ರೂಪಾಂತರವಾಗಿದ್ದು ಅದರಲ್ಲಿ ಐದು ಪ್ರಭೇದಗಳು ಮಾತ್ರವೇ ಕಳವಳಕಾರಿಯಾದುದು ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್್ಸ) ಹಿರಿಯ ಸಾಂಕ್ರಾಮಿಕ ರೋಗ ತಜ್ಞ ಸಂಜಯ್ ರಾಯ್ ಹೇಳಿದ್ದಾರೆ. ಹೊಸ ತಳಿ ಹುಟ್ಟಿಕೊಂಡರೂ ಭಾರತದಲ್ಲಿ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡುವ ಸಾಧ್ಯತೆಯಿಲ್ಲ ಎಂದು ಸಾರ್ವಜನಿಕ ಆರೋಗ್ಯ ತಜ್ಞ ಚಂದ್ರಕಾಂತ ಲಹಾರಿಯಾ ಅಭಿಪ್ರಾಯ ಪಟ್ಟಿದ್ದಾರೆ.
2 ಸಾವಿರಕ್ಕಿಂತ ಕಡಿಮೆ ಕೇಸ್: ಭಾರತದಲ್ಲಿ ಕರೊನಾ ಸೋಂಕು ಕ್ಷೀಣಿಸುತ್ತಿದ್ದು ಭಾನುವಾರ 1,761 ಹೊಸ ಕೇಸ್ಗಳು ವರದಿಯಾಗಿವೆ. ಇದು ಸುಮಾರು ಎರಡು ವರ್ಷ, ಅಂದರೆ 688 ದಿನಗಳಲ್ಲಿ ಅತ್ಯಂತ ಕಡಿಮೆ ದೈನಿಕ ಪ್ರಕರಣವಾಗಿದೆ. ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 4,30,07,841ಕ್ಕೆ ಏರಿದೆ. 127 ಜನರು ಬಲಿಯಾಗಿದ್ದು ಮೃತರ ಸಂಖ್ಯೆ 5,16,479ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ತಪ್ಪು ಮಾಹಿತಿಗೆ ಡಬ್ಲ್ಯುಎಚ್ಒ ಕಳವಳ: ಕೋವಿಡ್ ಸಾಂಕ್ರಾಮಿಕತೆ ಬಗ್ಗೆ ಜಗತ್ತಿನಾದ್ಯಂತ ತಪ್ಪು ದಾರಿಗೆಳೆಯುವ ಮಾಹಿತಿ ಹರಿದಾಡುತ್ತಿರುವುದು ಕಳವಳದ ವಿಚಾರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ. ಸಾಂಕ್ರಾಮಿಕತೆ ಅಂತ್ಯಗೊಂಡಿದೆ. ಒಮಿಕ್ರಾನ ಪ್ರಭೇದ ತುಂಬಾ ಮೃದು ಪರಿಣಾಮದ್ದು ಹಾಗೂ ಅದುವೇ ಕೊನೆಯ ರೂಪಾಂತರಿ ಎಂಬಂಥ ತಪುಪ ಅಭಿಪ್ರಾಯಗಳು ಹೆಚ್ಚಾಗಿ ಹರಿದಾಡುತ್ತಿವೆ. ಅದರಿಂದ ಸೋಂಕಿನ ಹೆಚ್ಚಳವಾದಾಗ ಆತಂಕ ಮೂಡುತ್ತದೆ ಎಂದು ಕರೊನಾ ಕುರಿತ ಡಬ್ಲ್ಯುಎಚ್ಒ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥೆ ಮಾರಿಯಾ ವಾನ್ ಕೆರ್ಖೋವ್ ಹೇಳಿದ್ದಾರೆ. ಈ ಎಲ್ಲ ತಪುಪ ಮಾಹಿತಿಗಳು ಗೊಂದಲ ಹುಟ್ಟಿಸಿ ಸೋಂಕು ಹೆಚ್ಚಾಗಲು ಕಾರಣವಾಗಿವೆ ಎಂದವರು ತಿಳಿಸಿದ್ದಾರೆ. ಕೋವಿಡ್ ಸೋಂಕನ್ನು ಎದುರಿಸಲು ಲಸಿಕೆ ಹಾಕಿಸಿಕೊಳ್ಳುವುದು ತುಂಬಾ ಅಗತ್ಯ ಎಂದವರು ಪ್ರತಿಪಾದಿಸಿದ್ದಾರೆ.