ನವದೆಹಲಿ: ತಮಿಳುನಾಡಿನ ಕುನೂರು ಬಳಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಸೇನಾ ಮುಖಂಡ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಅಂತ್ಯಕ್ರಿಯೆಯು ಇಂದು ನವದೆಹಲಿಯ ಕಂಟೋನ್ಮೆಂಟ್ ಪ್ರದೇಶದ ಬ್ರಾರ್ ಸ್ಕ್ವೇರ್ ರುದ್ರಭೂಮಿಯಲ್ಲಿ ನಡೆಯಲಿದೆ.
ಇದಕ್ಕೂ ಮುನ್ನ ಜನರಲ್ ರಾವತ್ ಅವರ ಪಾರ್ಥಿವ ಶರೀರವನ್ನು ನವದೆಹಲಿಯ ಕಾಮರಾಜ್ ಮಾರ್ಗದ ನಂ. 3ರಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ನಮನಕ್ಕೆ ಇಡಲಾಗುವುದು. ಬೆಳಗ್ಗೆ 11 ಗಂಟೆಯಿಂದ 12.30ರವರೆಗೆ ಗಣ್ಯರು ಮತ್ತು ನಾಗರಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶವಿರಲಿದೆ. ಬಳಿಕ ಸೇನಾ ಸಿಬ್ಬಂದಿ ಅಂತಿಮ ಗೌರವ ಸಲ್ಲಿಸಲಿದ್ದಾರೆ.
ತದನಂತರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಜನರಲ್ ಬಿಪಿನ್ ರಾವತ್ ಅವರ ನಿವಾಸದಿಂದ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯು ಬ್ರಾರ್ ಸ್ಕ್ವೇರ್ ರುದ್ರಭೂಮಿಯತ್ತ ತೆರಳಲಿದೆ.
ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ 13 ಮಂದಿಯ ಪಾರ್ಥಿವ ಶರೀರಗಳನ್ನು ನಿನ್ನೆ ದೆಹಲಿಯ ಪಾಲಂ ಏರ್ಬೇಸ್ಗೆ ತರಲಾಗಿತ್ತು. ಪಾಲಂ ಏರ್ಬೇಸ್ನಲ್ಲಿ ಪಾರ್ಥಿವ ಶರೀರಗಳಿಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿ, ಅಂತಿಮ ದರ್ಶನ ಪಡೆದಿದ್ದರು. ಇದೇ ವೇಳೆ ವೀರ ಪುತ್ರರ ಕುಟುಂಬಸ್ಥರಿಗೆ ಮೋದಿ ಸಾಂತ್ವನ ಹೇಳಿದ್ದರು.