ವಿಜಯಪುರ: ಕಂಬಳಿ ಹಾಕಿಕೊಳ್ಳಲೂ ಯೋಗ್ಯತೆ ಬೇಕು ಎಂದಿರುವ ಸಿಎಂ ಬಸವರಾಜ ಬೊಮ್ಮಾಯಿಗೆ ಟಾಂಗ್ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ನೀವೇನಾದರೂ ಕುರಿ ಕಾಯ್ದಿದ್ದೀರೇನು? ಎಂದು ತಿರುಗೇಟು ನೀಡಿದರು.
ಸಿಂದಗಿಯಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು ಎಂದು ಬಸವರಾಜ ಬೊಮ್ಮಾಯಿ ಭಾಷಣ ಬಿಗಿದಿದ್ದಾರೆ. ನಾನು ಕೇಳುತ್ತೇನೆ, ‘ಸೀನಿಯರ್ ಬೊಮ್ಮಾಯಿ, ಬಸವರಾಜ ಬೊಮ್ಮಾಯಿ ಯಾವತ್ತಾದರೂ ಕುರಿ ಕಾಯ್ದಿದ್ದೀರೇನು?’ ಎಂದು ಪ್ರಶ್ನಿಸಿದರು.
ನಾನು ಕುರಿ ಕಾಯ್ದಿದಿನಯ್ಯ..! ಕಂಬಳಿ ಹೊತ್ತುಕೊಳ್ಳಲು ಯೋಗ್ಯತೆ ನಿನಗೆ ಬೇಕು. ಕಾಗಿನೆಲೆಯಲ್ಲಿ ಕನಕ ಗುರುಪೀಠ ಸ್ಥಾಪಿಸಿದ್ದು ನಾನು. ಬಸವರಾಜ ಬೊಮ್ಮಾಯಿ ನೀನೆಲ್ಲಿದ್ದೀಯಪ್ಪಾ..? ಹಲವು ಜಯಂತಿಗಳನ್ನು ಮಾಡಿದ್ದು ಸಿದ್ದರಾಮಯ್ಯ. ವಿಜಯಪುರ ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರಿಟ್ಟಿದ್ದು ಸಿದ್ದರಾಮಯ್ಯ. ಎಲ್ಲಾ ಕಚೇರಿಗಳಲ್ಲೂ ಬಸವಣ್ಣನವರ ಫೋಟೋ ಹಾಕಿಸಿದ್ದು ಸಿದ್ದರಾಮಯ್ಯ. ಕಿತ್ತೂರು ಚನ್ನಮ್ಮ ಜಯಂತಿ ಆರಂಭಿಸಿದ್ದು ನಾನು. ಹೀಗೆ ಹಲವು ಜಯಂತಿಗಳನ್ನು ಮಾಡಿಸಿದ್ದು ಸಿದ್ದರಾಮಯ್ಯ. ಹಾಗಾದ್ರೆ ಬಸವರಾಜ ಬೊಮ್ಮಾಯಿ ನೀನೆಲ್ಲಿದ್ದಿಯಪ್ಪಾ..? ಈಶ್ವರಪ್ಪನಿಗೆ ತಾನು ಕುರುಬ ಅಂತ ಹೇಳೋಕು ಭಯ, ಆದರೆ ನಾನು ಎಲ್ಲಾ ಕಡೆ ಎದೆತಟ್ಟಿ ಹೇಳ್ತೀನಿ, ನಾನೊಬ್ಬ ಕುರುಬ, ಕುರುಬ, ಕುರುಬ ಎಂದರು.
Laxmi News 24×7