Breaking News

ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ 54 ನೇ ಪಟ್ಟಾಭಿಷೇಕ

Spread the love

ಬೆಳ್ತಂಗಡಿ: ಮಾನವನ ಸೇವೆಯೇ ಭಗವಂತನ ಸೇವೆ ಎಂಬುದನ್ನು ಅಕ್ಷರಶಃ ನಿರೂಪಿಸಿರುವ ಡಾ. ಹೆಗ್ಗಡೆ ಭಾರತ ರತ್ನಕ್ಕೆ ಅರ್ಹರು ಎಂದು ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.
ಅವರು ಧರ್ಮಸ್ಥಳದಲ್ಲಿ ಆದಿತ್ಯವಾರ ನಡೆದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ 54 ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದಲ್ಲಿ ಶುಭಾಶಂಸನೆಗೈದರು.
ಧರ್ಮಕ್ಕೆ ಹೊಸ ಸ್ವರೂಪವನ್ನು, ವ್ಯಾಖ್ಯಾನವನ್ನು ಡಾ. ಹೆಗ್ಗಡೆ ನೀಡಿದ್ದಾರೆ. ಪಟ್ಟಾಧಿಕಾರವನ್ನು ಅಧಿಕಾರ ಎಂದು ಭಾವಿಸದೆ ಸೇವಾದೀಕ್ಷೆಯಾಗಿ ಸ್ವೀಕರಿಸಿ ಕ್ಷೇತ್ರವನ್ನು ವಿಸ್ತಾರವಾಗಿ ವೈಶಾಲ್ಯದಿಂದ ನಡೆಸಿಕೊಂಡು ಬಂದಿದ್ದಾರೆ. ಅನ್ನ, ಆಶ್ರಯ, ಅಭಯ, ಆರೋಗ್ಯಗಳಿಗೆ ಸಂಬಂಧಿಸಿದಂತೆ 60 ಕ್ಕೂ ಹೆಚ್ಚು ಸಂಸ್ಥೆಗಳನ್ನು ಮುನ್ನಡೆಸುತ್ತಿರುವುದು ಅಧ್ಯಯನಕ್ಕೆ ಅರ್ಹವಾದುದಾಗಿದೆ. ಕ್ಷೇತ್ರದಲ್ಲಿ ಅವರ ಸಾಂಸ್ಕೃತಿಕ, ಸಾಮಾಜಿಕ ನಿರ್ವಹಣೆ ಅನುಪಮವಾದದ್ದು. ವಿಶ್ವದಲ್ಲಿ ದಿನದಲ್ಲಿ ಒಂದು ಲಕ್ಷ ಮಂದಿ ಅನ್ನಪ್ರಸಾದ ಸ್ವೀಕರಿಸಿರುವುದು ಧರ್ಮಸ್ಥಳ ಬಿಟ್ಟರೆ ಎಲ್ಲೂ ಇಲ್ಲಾ ಎಂದು ಅಭಿಪ್ರಾಯಪಟ್ಟ ಅವರು ಇತರರಿಗಾಗಿ ಯಾರು ಬದುಕಿರುತ್ತಾರೋ ಅವರು ಸದಾ ಜೀವಂತವಾಗಿರುತ್ತಾರೆ ಎಂದು ಅವರು ವಿಶ್ಲೇಷಿಸಿದರು.
ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಮಾತನಾಡುತ್ತಾ, ತೃಪ್ತ ಜೀವನ ಅತ್ಯಂತ ಮುಖ್ಯವಾದದ್ದು. ಇನ್ನೊಬ್ಬರನ್ನು ಸಂತೋಷ ಪಡಿಸುವ ಸಂದರ್ಭವನ್ನು ನಾನು ಸ್ವಾಗತಿಸುತ್ತೇನೆ. ಜನಹಿತದಲ್ಲಿನ ಸಂತೋಷ ಬೇರೆ ಎಲ್ಲೂ ಎಲ್ಲಾ ಎಂಬುದನ್ನು ನಾನು ನಂಬಿಕೊಂಡು‌ಬಂದಿದ್ದೇನೆ. ಬತ್ತದ ಉತ್ಸಾಹ ಎಲ್ಲರಲ್ಲೂ ಸದಾ ಇರಬೇಕು. ಕ್ಷೇತ್ರದಲ್ಲಿ ಆದ ಇದುವರೆಗಿನ ಎಲ್ಲಾ ಸಾಧನೆಗಳು ನಮ್ಮ ಹಿರಿಯರ ಆಶೀರ್ವಾದ ಫಲವೇ ಆಗಿದೆ. ಅವರು ಹಾಕಿಕೊಟ್ಟ ಪರಂಪರೆಗಳನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಜನೋಪಯೋಗಿ ಕಾರ್ಯಗಳಿಗೆ ನನಗೆ ಮಂಜುನಾಥ ಸ್ವಾಮಿ ಬುದ್ಧಿ, ಪ್ರೇರಣೆ ನೀಡಿದ್ದಾನೆ. ಅದನ್ನು ಸಿಬ್ಬಂದಿಗಳು ‌ಕಾರ್ಯಗತಗೊಳಿಸಿದ್ದಾರೆ ಎಂದರು. ಕ್ಷೇತ್ರದ ಹಿರಿಮೆಗಾಗಿ ಹಲವಾರು ಅವತಾರಗಳನ್ನು ತಾಳಿದ್ದೇನೆ ಎಂಬ ಭಾವನೆ ಇದೆ ಎಂದರು.
ಹೇಮಾವತಿ ವೀ.ಹೆಗ್ಗಡೆ ಅವರು ಡಾ. ಪ್ರಕಾಶ್ ಭಟ್ ಸಂಪಾದಿತ SHG Movement International Conference 2019 ಮತ್ತು ಡಾ.ಎಸ್.ಆರ್.ವಿಘ್ನರಾಜ್ ಸಂಪಾದಕತ್ವದ ಜೈನ ಗ್ರಂಥಸ್ಥ ಎಂಬೆರೆಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ಕ್ಷೇತ್ರದ ತೋಟಗಾರಿಕಾ ವಿಭಾಗದ ಬಾಲಕೃಷ್ಣ ಪೂಜಾರಿ ಹಾಗೂ ಕಂದಾಯ ವಿಭಾಗದ ಶುಭಚಂದ್ರರಾಜ ಅವರನ್ನು ಹೆಗ್ಗಡೆಯವರು ಸಮ್ಮಾನಿಸಿದರು.
ಜನಮಂಗಲ ಕಾರ್ಯಕ್ರಮದ ಅಂಗವಾಗಿ ನಾಲ್ಕು ಮಂದಿ ವಿಕಲಾಂಗರಿಗೆ ಗಾಲಿ ಖುರ್ಚಿಗಳನ್ನು ಡಿ. ಸುರೇಂದ್ರ ಕುಮಾರ್ ಹಾಗೂ ಹರ್ಷೇಂದ್ರ ಕುಮಾರ್ ವಿತರಿಸಿದರು.
ಶ್ರೀ‌ಕ್ಷೇ.ಧ.ಗಾ.ಯೋ.ಯ ಆಶ್ರಯದಲ್ಲಿ 4 ಪ್ರಖ್ಯಾತ ಆಸ್ಪತ್ರೆಗಳಿಗೆ ಸಿ.ಟಿ.ಸ್ಕ್ಯಾನ್ ಯಂತ್ರದ ಮಂಜೂರಾತಿ ಪತ್ರಗಳ ‌ಹಸ್ತಾಂತರವನ್ನು‌ ಹೆಗ್ಗಡೆಯವರು ಮಾಡಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಸ್ ಪ್ರಭಾಕರ , ಸರ್ವಮಂಗಳ ಸೋಮಶೇಖರ್ ಉಪಸ್ಥಿತರಿದ್ದರು.
ದೇವಳದ ಅರ್ಚಕರು ವೇದಘೋಷ ನೆರವೇರಿಸಿದರು. ಅನ್ನಪೂರ್ಣ ಭೋಜನಾಲಯದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ದೇವಳದ ಪಾರುಪತ್ಯೆಗಾರ ಲಕ್ಷ್ಮೀನಾರಾಯಣ ರಾವ್ ವಂದಿಸಿದರು. ಎಸ್.ಡಿ.ಎಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ರವಿಶಂಕರ್ ಜಿ.ಕೆ. ನಿರ್ವಹಿಸಿದರು.
ಬಾಕ್ಸ್
ಹೆಗ್ಗಡೆಯವರ ನೂತನ ‌ಯೋಚನೆ-ಯೋಜನೆಗಳು:
* ಧಾರವಾಡದಲ್ಲಿ ಎಸ್.ಡಿ.ಎಂ. ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಮುಂದಿನ ವರ್ಷ ಫೆಬ್ರುವರಿಯಿಂದ ಪ್ರಾರಂಭವಾಗಲಿದ್ದು
ಎರಡು ವರ್ಷದೊಳಗೆ ಮುಗಿಯಲಿದೆ
* ಆರು ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಆಸ್ಪತ್ರೆಗಳಿಗೆ ಸಿ.ಟಿ. ಸ್ಕ್ಯಾನ್ ಕೊಡುಗೆ, ಅದರಲ್ಲಿ ಒಂದು ಯಂತ್ರ ಉಜಿರೆಯ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಸ್ಥಾಪಿಸಲಾಗುತ್ತದೆ.
* ಮಂಗಳೂರಿನಲ್ಲಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಘಟಕ ಹಾಗೂ ಉಜಿರೆಯಲ್ಲಿರುವ ಎಸ್.ಡಿ.ಎಮ್. ಆಸ್ಪತ್ರೆಯಲ್ಲಿ ಹನ್ನೊಂದು ಡಯಾಲಿಸಿಸ್ ಘಟಕಗಳನ್ನು ಸದ್ಯದಲ್ಲಿಯೇ ಪ್ರಾರಂಭಿಸಿಲಾಗುವುದು.

* ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಈಗಾಗಲೇ ೩೬೫ ಕೆರೆಗಳ ಹೂಳೆತ್ತಲಾಗಿದೆ. ಈ ವರ್ಷ ಇನ್ನೂ ೧೨೦ ಕೆರೆಗಳ ಹೂಳೆತ್ತಲಾಗುವುದು.

* ೮೪೩ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನೆರವು ನೀಡಲಾಗಿದೆ.
* ಧರ್ಮೋತ್ಥಾನ ಟ್ರಸ್ಟ್ ಆಶ್ರಯಲ್ಲಿ ೨೫೦ ಕ್ಕೂ ಮಿಕ್ಕಿ ಪ್ರಾಚೀನ ದೇಗುಲಗಳ ಜೀರ್ಣೋದ್ಧಾರ ಮಾಡಿದ್ದು ಈ ವರ್ಷ ೧೨ ದೇಗುಲಗಳ ಜೀರ್ಣೋದ್ಧಾರ ಕಾರ್ಯ ಹಮ್ಮಿಕೊಳ್ಳಲಾಗಿದೆ.
* ಇನ್ನು ಮೂರು ತಿಂಗಳೊಳಗೆ ಬೆಂಗಳೂರಿನಲ್ಲಿ ೩೦೦ ಹಾಸಿಗೆ ಸಾಮರ್ಥ್ಯದ ಪ್ರಕೃತಿ ಚಿಕಿತ್ಸಾ ಕೇಂದ್ರ ಪ್ರಾರಂಭಗೊಳ್ಳಲಿದೆ.
* ವಾತ್ಸಲ್ಯ ಯೋಜನೆಯಡಿ ಅನಾಥ ವೃದ್ಧರಿಗೆ ನೆರವು ಮತ್ತು ಮನೆ ನಿರ್ಮಾಣ
* ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ನೆರವು ನೀಡಲು ಶೌರ್ಯ ಆಪತ್ತು ತಂಡದ ರಚನೆಯಾಗಿದೆ. * ಧರ್ಮಸ್ಥಳದಲ್ಲಿ ಅನ್ನಪೂರ್ಣ ಭೋಜನಾಲಯ ವಿಸ್ತರಣಾ ಕಾರ್ಯನಡೆಯಲಿದ್ದು ಅಲ್ಲಿ‌ ನೆಲದಲ್ಲಿ ಕುಳಿತು ಕೊಳ್ಳಲು ಅಸಾಧ್ಯವಿರುವವರಿಗೆ ಊಟ ಮಾಡಲು ‌ಮೇಜು ಖುರ್ಚಿಯ ಅನುಕೂಲತೆ ಕಲ್ಪಿಸಲಾಗುವುದು.
* ಸಕಲ ಸೌಲಭ್ಯ ಹೊಂದಿರುವ ಸರದಿಸಾಲಿನ( ಕ್ಯೂ ಕಾಂಪ್ಲೆಕ್ಸ್) ವಿಶಾಲ ಸುಗಮ ವ್ಯವಸ್ಥೆ ಮಾಡಲಾಗುವುದು. ಅಲ್ಲಿ ಭಕ್ತರಿಗೆ ಕುಳಿತುಕೊಳ್ಳು ವ್ಯವಸ್ಥೆ, ಶೌಚಾಲಯದ ನಿರ್ಮಾಣ.

ಸಮಾರಂಭದ ಮೊದಲು ಆನೆ, ಬಸವ, ಕೊಂಬು, ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಅತಿಥಿಗಳನ್ನು ದೇವಳದಿಂದ ವೇದಿಕೆಗೆ ಕರೆತರಲಾಯಿತು.


Spread the love

About Laxminews 24x7

Check Also

ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಅತಿಶಿ

Spread the love ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಮುಹೂರ್ತ ನಿಗದಿಯಾಗಿದೆ. ಶನಿವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ