ಬೆಳಗಾವಿ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ ಅವರ ಸಹೋದರ ಬಾಳೆಕುಂದ್ರಿ ಕೆ.ಎಚ್.ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಜಾಧವ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಅವರ ಸದಸ್ಯತ್ವ ರದ್ದುಪಡಿಸಬೇಕೆಂದು ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಪ್ರಶಾಂತ ಅವರು ವಿರುದ್ಧ 26,78,473 ರುಪಾಯಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರ ನ್ಯಾಯಾಲಯ ವಿಚಾರಣೆ ನಡೆಸಿದೆ. ಅಲ್ಲದೆ ಅವರ ವಿರುದ್ಧ ಹಲವಾರು ಗಂಭೀರ ಆರೋಪಗಳ ಕೇಳಿ ಬಂದಿವೆ.
ಗ್ರಾಮ ಪಂಚಾಯಿತಿಯ ಕರವಸೂಲಾತಿಯಲ್ಲಿ 86,781 ರೂ.ಗಳನ್ನು ಸರ್ಕಾರಿ ಖಾತೆಗೆ ಭರಿಸದೆ ಸ್ವಂತ ಉಪಯೋಗಕ್ಕಾಗಿ ಬಳಸಿ, ಒಟ್ಟೂ 26,78,473 ರೂ.ಗಳಷ್ಟು ಮೊತ್ತದ ಗ್ರಾಮ ಪಂಚಾಯಿತಿಯ ಅನುದಾನವನ್ನು ದುರಪಯೋಗಪಡಿಸಿಕೊಂಡ ಆರೋಪವನ್ನು ಜಿಲ್ಲಾ ಪಂಚಾಯಿತಿ ಸಿಇಒ ಹೊರಿಸಿದ್ದರು.
ಆರೋಪಗಳು ಬಲವಾಗಿದ್ದರೂ ಕ್ರಿಮಿನಲ್ ಮೊಕದ್ದಮೆ ದಾಖಲಿಸದೆ ಇರುವುದನ್ನು ವಿಚರಣೆ ವೇಳೆ ಪ್ರಾದೇಶಿಕ ಆಯುಕ್ತರು ಗಮನಿಸಿ, ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಪಂ ಸಿಇಒಗೆ ಸೂಚಿಸಿದ್ದರು. ಬಳಿಕ ಜೂನ್ 19ರಂದು ಜಿಲ್ಲಾ ಪಂಚಾಯಿತಿ ಸಿಇಒ ಅವರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ 1 ಬಾರಿಯೂ ವಿಚಾರಣೆಗೆ ಹಾಜರಾಗದೆ. ವಕೀಲರ ಮೂಲಕ ನ್ಯಾಯಾಲಯದ ನಿರ್ಣಯದಿಂದ ತಪ್ಪಿಸಿಕೊಳ್ಳಲು ಪದೇ ಪದೆ ಕಾಲಾವಕಾಶ ಕೋರುತ್ತಿದ್ದು, ಅವರ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಸದಸ್ಯತ್ವ ರದ್ದುಗೊಳಿಸಬೇಕೆಂದು ಎಂದು ಪ್ರಾದೇಶಿಕ ಆಯುಕ್ತರು ಸರ್ಕಾಋಕ್ಕೆ ಶಿಫಾರಸ್ಸು ಮಾಡಿದ್ದಾರೆ.