ನವದೆಹಲಿ: ಚೀನಾ ಮತ್ತು ಭಾರತ ಗಡಿಯಲ್ಲಿ ಉಂಟಾಗಿರುವ ಸಂಘರ್ಷದ ಕುರಿತು ಪ್ರಧಾನಿ ನರೇಂದ್ರ ಮೋದಿ ವೈರಿ ಚೀನಾಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.
ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಯ ಸಭೆಯ ಆರಂಭದಲ್ಲಿ ಚೀನಾ ಸಂಘರ್ಷದ ಕುರಿತು ಮಾತನಾಡಿದರು. ದೇಶವನ್ನು ರಕ್ಷಿಸಿಕೊಳ್ಳಲು ನಮ್ಮನ್ನು ಯಾರು ತಡೆಯುವರು ಇಲ್ಲ ಭಾರತ ಶಾಂತಿಯನ್ನು ಬಯಸುತ್ತೆ. ಆದ್ರೆ ನಮ್ಮನ್ನು ಪ್ರಚೋದಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮ ಹುತಾತ್ಮ ಯೋಧರು ಕೊನೆಯವರೆಗೂ ಹೋರಾಡಿದ್ದಾರೆ. ಭಾರತಕ್ಕೆ ಶಾಂತಿ ಬೇಕು, ನಮ್ಮ ತಾಳ್ಮೆಯನ್ನು ಕೆಣಕಬೇಡಿ. ನಮ್ಮ ಯೋಧರ ಬಲಿದಾನ ವ್ಯರ್ಥವಾಗಲ್ಲ. ಯಾರಿಗೂ ಯಾವ ಸಂದೇಹ, ಅನುಮಾನ ಬೇಡ, ಚೀನಾಕ್ಕೆ ಉತ್ತರ ಕೊಟ್ಟೇ ಕೊಡುತ್ತೇವೆ ಎಂದರು.
ಸಭೆಯ ಆರಂಭಕ್ಕೂ ಮುನ್ನ ಎರಡು ನಿಮಿಷ ಮೌನಾಚರಣೆ ಮಾಡುವ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಜೂನ್ 21 ಭಾನುವಾರ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಚೀನಾ ಜೊತೆ ಸಂಘರ್ಷ ಜೊತೆ ಕೋವಿಡ್-19 ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಭಾಷಣ ಈಗ ಭಾರೀ ಮಹತ್ವ ಪಡೆದಿದೆ.ಚೀನಾ ಜೊತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಜೂನ್ 19 ರಂದು ಪ್ರಧಾನಿ ಮೋದಿ ಸರ್ವ ಪಕ್ಷ ಸಭೆಯನ್ನು ಕರೆದಿದ್ದಾರೆ. ಸಂಜೆ 5 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ರಾಜಕೀಯ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಗಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪ್ರತಿ ಪಕ್ಷಗಳು ಪ್ರಶ್ನೆಗಳನ್ನು ಕೇಳುತ್ತಿರುವ ಹಿನ್ನೆಲೆಯಲ್ಲಿ ಮೋದಿ ಸಭೆ ಕರೆದಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ಖ್ಯಾತೆ ತೆಗೆಯುತ್ತಿರುವ ಚೀನಾ, ತನ್ನ ಹೇಳಿಕೆಗಳ ಮೂಲಕ ಭಾರತವನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಈಗ ಈ ವಿಚಾರವಾಗಿ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೀವೋ ಲಿಜಿಯಾನ್, ನಾವು ಭಾರತದ ಜೊತೆಗೆ ಹೆಚ್ಚಿನ ಸಂಘರ್ಷ ಬಯಸುವುದಿಲ್ಲ. ಆದರೆ ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ಯಾವಗಲೂ ಚೀನಾಗೆ ಸೇರಿದ್ದು ಎಂದು ಹೇಳಿದ್ದಾರೆ.