ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆ ಈಗ ಕೊರೊನಾ ಕಾರ್ಖಾನೆಯಾಗಿ ಮಾರ್ಪಾಡಾಗ್ತಿದೆ. ಜಿಂದಾಲ್‍ನಲ್ಲಿ ಕೊರೊನಾ ರಣಕೇಕೆ ಮುಂದುವರೆದಿದೆ. ಗ್ರಾಮಗಳಲ್ಲೂ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಜಿಂದಾಲ್ ಕಾರ್ಖಾನೆ ಹೋದ್ರೆ 5,000 ರೂ. ದಂಡ ವಿಧಿಸೋದಾಗಿ ಡಂಗೂರ ಸಾರಿ ಎಚ್ಚರಿಸಲಾಗುತ್ತಿದೆ. ಆದರೆ ಜಿಂದಾಲ್ ಅಧಿಕಾರಿಗಳು ಮಾತ್ರ ಕೆಲಸಕ್ಕೆ ಬರೆದಿದ್ರೆ ಚೆನ್ನಾಗಿ ಇರಲ್ಲಾ ಎಂದು ಆವಾಜ್ ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಬುಧವಾರ ಒಂದೇ ದಿನ ಜಿಂದಾಲ್ ವ್ಯಾಪ್ತಿಯಲ್ಲೇ 34 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಆ ಮೂಲಕ ಜಿಂದಾಲ್ ಕಾರ್ಖಾನೆ ಸೋಂಕಿತರ ಸಂಖ್ಯೆ 178ಕ್ಕೆ ಏರಿಕೆಯಾಗಿದೆ. ಬಳ್ಳಾರಿಯಲ್ಲಿ ಒಟ್ಟು 319 ಕೊರೊನಾ ಪಾಸಿಟಿವ್ ಪತ್ತೆಯಾದಂತಾಗಿದೆ. ಸೋಂಕನ್ನ ತಡೆ ನಿಟ್ಟಿನಲ್ಲಿ ಜಿಂದಾಲ್ ಕಂಪನಿಗೆ ಬಳ್ಳಾರಿ ಜಿಲ್ಲಾಡಳಿತ 7 ಸೂಚನೆ ನೀಡಿದ್ದು, ಇವುಗಳನ್ನು ಇಂದಿನಿಂದಲೇ ಜಿಂದಾಲ್ ಪಾಲಿಸಬೇಕಿದೆ. ಜೂನ್ 30ರವರೆಗೂ ಇದು ಅನ್ವಯ ಆಗಲಿದೆ.
ಸೋಂಕು ತಡೆಗೆ ಸಪ್ತ ಸೂತ್ರ:
1. ಇಂದಿನಿಂದ ಜೂನ್ 30ರವರೆಗೂ ಜಿಂದಾಲ್ ಟೌನ್‍ಶಿಪ್‍ಗೆ ಕ್ವಾರಂಟೈನ್.
2. ಜಿಂದಾಲ್‍ನಲ್ಲಿ ಕೆಲಸ ಮಾಡೋ ಸಿಬ್ಬಂದಿ ಯಾರೂ ಗ್ರಾಮಗಳಿಗೆ ತೆರಳುವಂತಿಲ್ಲ.
3. ಕಾರ್ಖಾನೆಯಲ್ಲಿ ಕೆಲಸ ಮಾಡೋರು ಜಿಂದಾಲ್ ಟೌನ್‍ಶಿಪ್‍ನಲ್ಲಿಯೇ ಉಳಿಯಬೇಕು.
4. ಕಾರ್ಮಿಕರಿಗೆ ಟೌನ್‍ಶಿಪ್ ಹಾಗೂ ಕಾರ್ಖಾನೆಯ ನಡುವೆ ಮಾತ್ರ ಸಂಚರಿಸಲು ಅವಕಾಶ.
5. ಇನ್ನುಳಿದ ಉದ್ಯೋಗಿಗಳು ಮನೆಯಲ್ಲೆ ಇರಬೇಕು. ಹೊರಗೆ ಬರುವಂತೆ ಇಲ್ಲ.
6. ಕಾರ್ಖಾನೆಯಲ್ಲಿ ಉಳಿಯುವ ಕಾರ್ಮಿಕರಿಗೆ ಜಿಂದಾಲ್‍ನಿಂದಲೇ ಊಟ ವಸತಿ ವ್ಯವಸ್ಥೆ.
8. ಸರಕು ಸಾಗಣೆ ವಾಹನಗಳಿಗೆ ಮಾತ್ರ ಜಿಂದಾಲ್‍ನಿಂದ ಹೊರಗೆ ತೆರಳಲು ಅವಕಾಶ
ಜಿಲ್ಲಾಡಳಿತವೇನೋ ಜಿಂದಾಲ್‍ಗೆ ಸಪ್ತ ಸೂತ್ರ ಅನುಸರಿಸುವಂತೆ ಆದೇಶ ನೀಡಿದೆ. ಆದರೆ ಜಿಂದಾಲ್ ಮಾತ್ರ ಗುತ್ತಿಗೆ ನೌಕರರನ್ನು ಒತ್ತಾಯ ಪೂರ್ವಕವಾಗಿ ಕೆಲಸಕ್ಕೆ ಹಾಜರಾಗುವಂತೆ ಒತ್ತಡ ಹೇರುತ್ತಿದೆ. ಕೆಲಸ ಬಾರದೇ ಇದ್ದಲ್ಲಿ ಉದ್ಯೋಗದಿಂದ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇನ್ಮುಂದೆ ಯಾರೂ ಜಿಂದಾಲ್‍ಗೆ ಹೋಗಬಾರದು. ಒಂದು ವೇಳೆ ಹೋದರೆ 5000 ಸಾವಿರ ದಂಡ ವಿಧಿಸಲಾಗುವುದು ಅಂತಾ ಹಳ್ಳಿಗಳಲ್ಲಿ ಡಂಗೂರ ಸಾರಿಸಿ ಎಚ್ಚರಿಕೆ ಕೊಡಲಾಗ್ತಿದೆ.
ಒಟ್ಟಾರೆ ಜಿಂದಾಲ್‍ನಲ್ಲಿ ಏನೆಲ್ಲಾ ಕ್ರಮ ಕೈಗೊಂಡರೂ ಕೊರೊನಾ ಮಾತ್ರ ಇಳಿಮುಖವಾಗದೇ ಏರುತ್ತಲೇ ಸಾಗುತ್ತಿದೆ. ಗ್ರಾಮೀಣ ಭಾಗದ ಜನರಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಾ ಇದೆ.