ಯಾದಗಿರಿ: ರಾಜಕಾರಣಿಗಳು ಬೇಕಾಬಿಟ್ಟಿಯಾಗಿ ದೊಡ್ಡ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಲಾಕ್‍ಡೌನ್ ನಿಯಮ ಉಲ್ಲಂಘಿಸಿ, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದನ್ನು ನಿರ್ಲಕ್ಷಿಸುತ್ತಿದ್ದಾರೆ. ಇನ್ನೊಂದೆಡೆ ಕೊರೊನಾ ತಡೆಗೆ ಲಸಿಕೆ ಸಂಶೋಧನೆಯಾಗಿಲ್ಲ. ಹೀಗಿರುವಾಗ ಸಾಮಾಜಿಕ ಅಂತರವೇ ಮಹಾಮಾರಿ ತಡೆಗೆ ಆಯುಧವಾಗಿದೆ. ಇದನ್ನರಿತ ಗ್ರಾಮಸ್ಥರು ಕೊರೊನಾ ಬಂದ ಹಿನ್ನೆಲೆ ಹಳ್ಳಿ ಬಿಟ್ಟು ಜಮೀನು ಸೇರಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಕೊರೊನಾಗೆ ಸದ್ಯ ಔಷಧಿ ಇಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಅನಿವಾರ್ಯವಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೊರೊನಾ ವಿರುದ್ಧ ಹೋರಾಡಬಹುದಾಗಿದೆ. ಈ ಕುರಿತು ಸರ್ಕಾರ ಸಹ ಸಾರಿ ಸಾರಿ ಹೇಳುತ್ತಿದೆ. ಆದರೆ ಸುಕ್ಷಿತರೂ ಸೇರಿದಂತೆ ಹಲವರು ಈ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದರೆ ಜಿಲ್ಲೆಯ ಶಹಪುರ ತಾಲೂಕಿನ ಚಂದಾಪುರತಾಂಡಾದ 40ಕ್ಕೂ ಅಧಿಕ ಕುಟುಂಬಗಳು ತಮ್ಮ ಗ್ರಾಮವನ್ನು ತೊರೆದು, ಕಳೆದ ಒಂದು ತಿಂಗಳಿನಿಂದ ಹೊಲಗಳಲ್ಲಿ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಂಡು ಕುಟುಂಬ ಸಮೇತರಾಗಿ ಅಲ್ಲೇ ವಾಸಿಸುತ್ತಿದ್ದಾರೆ.
ಈ ತಾಂಡದ ವ್ಯಕ್ತಿಗೆ ಮೇ 17 ರಂದು ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಇದರಿಂದ ಗ್ರಾಮದಲ್ಲಿ ಕೊರೊನಾ ವ್ಯಾಪಕವಾಗಿ ಹರಡುವ ಭೀತಿ ಉಂಟಾಗಿತ್ತು. ಸ್ಥಳೀಯ ಗ್ರಾ.ಪಂ.ಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡುವಂತೆ ತಿಳಿಸಿತ್ತು. ಇದರಿಂದ ಜಾಗೃತಗೊಂಡ ಗ್ರಾಮದ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಜಮೀನಿನಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಂಡು, ಜೀವನ ಸಾಗಿಸುತ್ತಿವೆ.
ಶೆಡ್ ನಲ್ಲಿಯೂ ಮಾಸ್ಕ್ ಧರಿಸುತ್ತಿರುವ ಕುಟುಂಬದ ಸದಸ್ಯರು ಇತರರಿಗೆ ಮಾದರಿಯಾಗಿದ್ದಾರೆ. ಸದ್ಯ ಪಾಸಿಟಿವ್ ಬಂದಿದ್ದ ಈ ಗ್ರಾಮದ ವ್ಯಕ್ತಿ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಮ್ಮ ಗ್ರಾಮಕ್ಕೆ ಮರಳಿದ್ದಾರೆ. ಜಿಲ್ಲಾಡಳಿತ ಸಹ ತಮ್ಮ ಮನೆಗಳಿಗೆ ತೆರಳುವಂತೆ ಈ ಕುಟುಂಬಗಳಿಗೆ ಸೂಚನೆ ನೀಡಿದೆ. ಆದರೆ ಈ ಕುಟುಂಬಗಳು ಕೊರೊನಾ ಕಡಿಮೆಯಾಗುವವರಿಗೂ ಜಮೀನಲ್ಲಿಯೇ ವಾಸ ಮಾಡಲು ನಿರ್ಧರಿಸಿವೆ.
ಸ್ಯಾಂಪಲ್ ಸಂಗ್ರಹಣೆಯಲ್ಲಿ ರಾಜ್ಯದಲ್ಲಿ ಯಾದಗಿರಿ ಪ್ರಥಮ ಸ್ಥಾನ
ಕೊರೊನಾ ಮಾದರಿಗಳ ಸಂಗ್ರಹ ಮತ್ತು ಪರೀಕ್ಷೆಯಲ್ಲಿ ಯಾದಗಿರಿ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಯಾದಗಿರಿ ಜಿಲ್ಲಾಡಳಿತ ಕೆಲವು ದಿಟ್ಟ ನಿರ್ಧಾರ ಕೈಗೊಂಡಿತ್ತು. ಇದರ ಪರಿಣಾಮ ಕಳೆದ 10 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿಯೇ ಯಾದಗಿರಿಯಲ್ಲಿ ಅತಿ ಹೆಚ್ಚು ಕೊವಿಡ್ 19 ಟೆಸ್ಟ್ ಆಗಿದೆ. 10 ದಿನದ ಅವಧಿಯಲ್ಲಿ 7,297 ಜನರಿಂದ ಸ್ಯಾಂಪಲ್ ಸಂಗ್ರಹಣೆ ಮಾಡಲಾಗಿದೆ. ಈವರೆಗೆ ಬರೋಬ್ಬರಿ 21,100 ಮಾದರಿಗಳ ಸಂಗ್ರಹ ಮತ್ತು ಪರೀಕ್ಷೆ ನಡೆದಿದ್ದು, ಇದರಲ್ಲಿ 19,500 ನೆಗಟಿವ್ ಮತ್ತು 828 ಕೊರೊನಾ ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಈ ವರೆಗೆ 18,000ಕ್ಕೂ ಅಧಿಕ ಕಾರ್ಮಿಕರು ಮಹಾರಾಷ್ಟ್ರದಿಂದ ಜಿಲ್ಲೆಗೆ ವಾಪಸಾಗಿದ್ದು, ಇನ್ನೂ 150 ಜನರ ವರದಿ ಬಾಕಿಯಿದೆ.
ಸೋಂಕು ಹರಡುವದನ್ನು ತಟೆಗಟ್ಟಲು ಜಿಲ್ಲೆಯಲ್ಲಿ ಫೋರ್ ಪ್ರಿನ್ಸಿಪಲ್ಸ್ ಆಫ್ ‘ಟಿ’ ಅಳವಡಿಕೆ ಮಾಡಲಾಗಿತ್ತು. ಟ್ರೇಸಿಂಗ್, ಟ್ರ್ಯಾಕಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್ಮೆಂಟ್ ಗೆ ಮಹತ್ವದ ಆಧ್ಯತೆ ನೀಡಲಾಗಿದೆ. ಪರಿಣಾಮ ಯಾದಗಿರಿ ಪ್ರಥಯ ಸ್ಥಾನ ಬಳಿಕ ಕಲಬುರಗಿ (4843) ಉಡುಪಿ(4219) ವಿಜಯಪುರ(3891) ಸ್ಥಾನ ಪಡೆದಿವೆ. ಅತಿ ಹೆಚ್ಚು ಟೆಸ್ಟಿಂಗ್ ನೊಂದಿಗೆ ಯಾದಗಿರಿ ಅಗ್ರಸ್ಥಾನದಲ್ಲಿದೆ.