ಚಿಕ್ಕೋಡಿ: ಮಹಾತ್ಮ ಗಾಂಧೀಜಿ ಅವರು ತಾಲ್ಲೂಕಿನ ನವಲಿಹಾಳ ಗ್ರಾಮದಲ್ಲಿ ಎರಡು ದಿನ ವಾಸ್ತವ್ಯ ಹೂಡಿದ್ದಲ್ಲದೇ, ಪಟ್ಟಣಕ್ಕೂ ಭೇಟಿ ನೀಡಿದ್ದರು.
1934ರ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಸಂಚಿರಿಸಿದ್ದರು. 1934ರ ಮಾರ್ಚ್ 7 ಮತ್ತು 8ರಂದು ತಾಲ್ಲೂಕಿನ ನವಲಿಹಾಳದ ಅಕ್ಕಾಚಂದ್ ಮೆಹತಾ ಎನ್ನುವವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಮನೆ ಇಂದು ಪಾಳು ಬಿದ್ದಿದೆ. ‘ರಾಷ್ಟ್ರಪಿತನ ಪಾದಸ್ಪರ್ಶದಿಂದ ಪಾವನಗೊಂಡಿರುವ ಗ್ರಾಮದಲ್ಲಿ ಗಾಂಧಿ ಸ್ಮಾರಕ ನಿರ್ಮಿಸಬೇಕು’ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ನವಲಿಹಾಳದ ಗಣ್ಯರಾಗಿದ್ದ ಬಿಕುಲಾಲ್ ಮೆಹತಾ ಅವರ ಮೂವರು ಪುತ್ರಿಯರು ಗಾಂಧೀಜಿ ಅವರು ಕರೆ ನೀಡಿದ್ದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿದ್ದರು.
ಸಾಬರಮತಿ ಆಶ್ರಮದಲ್ಲಿದ್ದುಕೊಂಡು ಸ್ವಾತಂತ್ರ್ಯ ಚಳವಳಿಗೆ ಬಲ ನೀಡಿದ್ದರು.
ಗಾಂಧೀಜಿ ರಾಜ್ಯಕ್ಕೆ ಬಂದಿದ್ದಾಗ ನವಲಿಹಾಳದ ಬಿಕುಲಾಲ್ ಮೆಹತಾ ಅವರನ್ನು ಭೇಟಿಯಾಗಿ ಸ್ವಾತಂತ್ರ್ಯ ಚಳವಳಿಗೆ ಧುಮುಕುವಂತೆ ಈ ಭಾಗದ ಜನರನ್ನೂ ಪ್ರೇರೇಪಿಸಲು ಎರಡು ದಿನ ತಂಗಿದ್ದರು. ಅವರು ತಂಗಿದ್ದ ಮನೆಯಲ್ಲಿ ಮೆಹತಾ ಕುಟುಂಬದವರು 1990ರವರೆಗೂ ನೆಲೆಸಿದ್ದರು. ಬಳಿಕ ಅದು ಪಾಳು ಬಿದ್ದಿದೆ. ಸ್ವಾತಂತ್ಯ ಹೋರಾಟಕ್ಕೆ ಆರ್ಥಿಕವಾಗಿ ನೆರವಾಗಲು ನವಲಿಹಾಳ ಗ್ರಾಮಸ್ಥರು ₹ 1,965 ವಂತಿಗೆ ಸಂಗ್ರಹಿಸಿ ಗಾಂಧೀಜಿ ಅವರಿಗೆ ನೀಡಿದ್ದರು ಎಂದು ಹಿರಿಯರು ನೆನೆಯುತ್ತಾರೆ.
ಬತ್ತದ ಬಾವಿ:
ಗಾಂಧೀಜಿ ನವಲಿಹಾಳಕ್ಕೆ ಬಂದಿದ್ದ ಸಂದರ್ಭದಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿತ್ತು. ಜನರು ನೀರಿಗಾಗಿ ಪಡುತ್ತಿದ್ದ ಪರದಾಟ ತಪ್ಪಿಸುವ ನಿಟ್ಟಿನಲ್ಲಿ ತೆರೆದ ಬಾವಿ ತೋಡುವ ಕಾಮಗಾರಿಗೆ ಗಾಂಧೀಜಿ ಚಾಲನೆ ನೀಡಿದ್ದರು. ಆ ಸಾರ್ವಜನಿಕ ಬಾವಿ ಗ್ರಾಮಸ್ಥರ ಜೀವಜಲದ ಮೂಲವಾಗಿದೆ.
ರಾಷ್ಟ್ರಪಿತನ ಭೇಟಿ ಸವಿನೆನಪಿಗಾಗಿ ಗ್ರಾಮದ ಹೊರವಲಯದಲ್ಲಿ ಅವರು ವಾಸ್ತವ್ಯ ಹೂಡಿದ್ದ ಮನೆ ಸುತ್ತಲಿನ ಪ್ರದೇಶದಲ್ಲಿ ಮಾವಿನ ಸಸಿಗಳನ್ನು ನೆಡಲಾಗಿತ್ತು. ಅವುಗಳಲ್ಲಿ ಹಲವು ಹೆಮ್ಮರವಾಗಿ ಬೆಳೆದಿವೆ.
ಸಹಕಾರ ಕೊಡುವೆವು:
‘ನವಲಿಹಾಳ ಗ್ರಾಮ ಗಾಂಧೀಜಿ ಅವರ ಪಾದಸ್ಪರ್ಶದಿಂದ ಪುನೀತಗೊಂಡಿರುವ ಭೂಮಿ. ಇಲ್ಲಿ ಗಾಂಧಿ ಸ್ಮಾರಕ ನಿರ್ಮಿಸುವಂತೆ ಮೆಹತಾ ಕುಟುಂಬದಿಂದ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಸರ್ಕಾರ ಕ್ರಮ ವಹಿಸಿದರೆ ಮೆಹತಾ ಪರಿವಾರದಿಂದ ಅಗತ್ಯ ನೆರವು ನೀಡುತ್ತೇವೆ’ ಎಂದು ರೇಖಾ ಅಶೋಕ ಮೆಹತಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗಾಂಧೀಜಿ ಅವರು ನವಲಿಹಾಳ ಗ್ರಾಮಕ್ಕೆ ಭೇಟಿ ನೀಡಿರುವುದು ಐತಿಹಾಸಿಕ ಘಟನೆ. ಅದನ್ನು ‘ನಮ್ಮೂರಲ್ಲಿ ಗಾಂಧೀಜಿ’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದೇನೆ. ಅಲ್ಲದೇ, ಪ್ರಬುದ್ಧ ಯುವಕರ ತಂಡದೊಂದಿಗೆ ನವಲಿಹಾಳದಲ್ಲಿ ಗ್ರಾಮದಲ್ಲಿ ಗಾಂಧೀಜಿ ಭೇಟಿ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡುತ್ತಿದ್ದೇವೆ. ಸರ್ಕಾರ ನವಲಿಹಾಳ ಗ್ರಾಮದಲ್ಲಿ ಗಾಂಧಿ ಸ್ಮಾರಕ ನಿರ್ಮಿಸಬೇಕು’ ಎಂದು ಶಿಕ್ಷಕ ವಿಶ್ವನಾಥ ಧುಮಾಳ ಒತ್ತಾಯಿಸಿದರು.