Breaking News

ಬೆಳಗಾವಿ: ವಿದ್ಯಾರ್ಥಿಗಳ ಹೆಣಗಾಟ; ಸಾರಿಗೆ ಅಧಿಕಾರಿಗಳಿಗೆ ಶಾಪ..

Spread the love

: ಸಮರ್ಪಕ ಬಸ್‌ ವ್ಯವಸ್ಥೆ ಮೊದಲೇ ಇಲ್ಲ, ಇದ್ದ ಬಸ್‌ಗಳಂತೂ ಸರಿಯಾದ ಸಮಯಕ್ಕೆ ಬರದೇ ವಿದ್ಯಾರ್ಥಿಗಳು ನಿಗದಿತ ತರಗತಿಗಳಿಂದ ವಂಚಿತವಾದರೇ ಪ್ರಯಾಣಿಕರಿಗೆ ನಿತ್ಯವೂ ಭಾರಿ ತೊಂದರೆಯನ್ನು ಅನುಭವಿಸುವಂತಾಗಿದ್ದು ಸಾರಿಗೆ ಇಲಾಖೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಗ್ರಾಮೀಣ ಭಾಗದಿಂದ ನಗರ, ಪಟ್ಟಣದ ಶಾಲಾ-ಕಾಲೇಜು ಹೋಗುವ ವಿದ್ಯಾರ್ಥಿಗಳು ಬಸ್‌ಗಾಗಿ ಗಂಟೆಗಟ್ಟಲೇ ಕಾಯುತ್ತಿದ್ದಾರೆ. ಹಾಗೆಯೇ ಮನೆಗೆ ಮರಳಿ ಹೋಗುವಾಗಲೂ ಸರಿಯಾದ ಸಮಯಕ್ಕೆ ಬಸ್‌ ಬಾರದೇ ಬಸ್‌ ನಿಲ್ದಾಣದಲ್ಲಿಯೇ ಕಾಲ ಕಳೆಯಬೇಕಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುವ ಬಸ್‌ಗಳಿಗೆ ಸಿಬ್ಬಂದಿ ಕೊರತೆ ಹಾಗೂ ಸಮರ್ಪಕ ಬಸ್‌ ಸಂಚಾರ ಇಲ್ಲದ ಕಾರಣ ಪ್ರಯಾಣಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿರುವುದು ಪ್ರಸಕ್ತ ವರ್ಷದ ಶೈಕ್ಷಣಿಕ ಸಾಧನೆಗೆ ಭಾರಿ ಹಿನ್ನಡೆಯಾಗುತ್ತಿದೆ. ಇದು ಪಾಲಕರು, ವಿದ್ಯಾರ್ಥಿಗಳಲ್ಲಿ ಆತಂಕ ಉಂಟು ಮಾಡಿದೆ.

ಕೋವಿಡ್‌ ಸಮಯದ ನಂತರ ಜಿಲ್ಲೆಯಲ್ಲಿ ಅಸಮರ್ಪಕ ಬಸ್‌ ಸೇವೆಯ ಪರಿಸ್ಥಿತಿ ನಿರ್ಮಾಣವಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮೂಲಗಳ ಪ್ರಕಾರ ಕೋವಿಡ್‌ ಪರಿಸ್ಥಿತಿಗೂ ಮೊದಲು ಚಿಕ್ಕೋಡಿ ವಿಭಾಗದ 642 ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿದ್ದವು. ಕೋವಿಡ್‌ ಸಮಯದ ನಂತರ ಅವುಗಳನ್ನು 601 ಮಾರ್ಗಗಳಿಗೆ ಇಳಿಸಲಾಯಿತು. ಬೆಳಗಾವಿ ವಿಭಾಗದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಕೋವಿಡ್‌ಗೆ ಮುನ್ನ 695 ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿದ್ದು, ಕೋವಿಡ್‌ ಪರಿಸ್ಥಿತಿಯ ನಂತರ 653 ಮಾರ್ಗಗಳಿಗೆ ಇಳಿಸಲಾಗಿದೆ. ಕಳೆದ ತಿಂಗಳು ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನ ಮಂಡಲದ ಅಧಿವೇಶನದಲ್ಲಿ ಸಮಸ್ಯೆ ಮತ್ತಷ್ಟುಉಲ್ಬಣವಾಗಿತ್ತು. ಇದಕ್ಕೆ ಕಾರಣ ಅಧಿವೇಶನ ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸರು ಮತ್ತು ಇತರ ಸಿಬ್ಬಂದಿಯನ್ನು ಕರೆದೊಯ್ಯಲು ಸುಮಾರು 60 ಬಸ್‌ಗಳ ನಿಯೋಜನೆ ಮಾಡಲಾಗಿತ್ತು. ಸದ್ಯ ಅಧಿವೇಶ ಮುಗಿದಿದ್ದು, ಬಸ್‌ ಸಂಚಾರ ಮೊದಲಿನಂತೆ ಆರಂಭವಾಗದೇ ಇರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೋವಿಡ್‌ ಮೊದಲಿನ ಮಾರ್ಗಗಳನ್ನು ಕಡಿತಗೊಳಿಸಿದ ಪರಿಣಾಮ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ನಿತ್ಯ ಬಸ್‌ ಸಂಚಾರಕ್ಕಾಗಿ ಭಾರಿ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ, ಜಿಲ್ಲೆಯ ವಿವಿಧೆಡೆ ಪ್ರತಿಭಟನೆಗಳು ಜೋರಾಗಿವೆ. ಆದರೆ, ಅಧಿಕಾರಿಗಳ ಪ್ರಕಾರ ಸಮಸ್ಯೆಗೆ ಬೇರೆ ಬೇರೆ ಕಾರಣಗಳಿವೆ. ಸಾರಿಗೆ ಸಂಸ್ಥೆಯ 2 ವಿಭಾಗಗಳಲ್ಲಿ ಸಾಕಷ್ಟುಸಿಬ್ಬಂದಿ ಲಭ್ಯವಿಲ್ಲದೇ ಇರುವುದು ಬಸ್‌ ವ್ಯವಸ್ಥೆಯ ನ್ಯೂನತೆಗೆ ಪ್ರಮುಖ ಕಾರಣ. ಹಾಗೆಯೇ ಬೆಳಗಾವಿಯಲ್ಲಿ ಸಂಚರಿಸುತ್ತಿರುವ ಬಸ್‌ಗಳು ತುಂಬಾ ಹಳೆಯದಾಗಿದ್ದು, ಕಾರ್ಯಾಗಾರದಲ್ಲಿ ಆಗಾಗ ದುರಸ್ತಿ ಮಾಡಿಸಿ, ಸಂಚಾರ ಮಾಡಬೇಕಿದೆ ಎನ್ನುವುದು ಇನ್ನೊಂದು ಕಾರಣ.

ಜಿಲ್ಲೆಯ ಶಾಲಾ​-ಕಾಲೇಜುಗಳಲ್ಲಿ ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 1.50 ಲಕ್ಷ ವಿದ್ಯಾರ್ಥಿಗಳು ಬಸ್‌ಪಾಸ್‌ ಹೊಂದಿದ್ದು, ಸಾರಿಗೆ ಬಸ್‌ ಮೂಲಕವೇ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಆದರೆ, ಅಸಮರ್ಪಕ ಬಸ್‌ ಸಂಚಾರದಿಂದಾಗಿ ಶಿಕ್ಷಣ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಬಹುತೇಕ ವಿದ್ಯಾರ್ಥಿಗಳು ಬಸ್‌ಗಾಗಿ ಬಸ್‌ ನಿಲ್ದಾಣಗಳಲ್ಲಿ ಕಾಯುತ್ತ ಕುಳಿತುಕೊಳ್ಳುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿರುವ ಬಸ್‌ನಲ್ಲಿ ಹಾಗೂ ಬಾಗಿಲಿಗೆ ಜೋತು ಬಿದ್ದು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸರಿಯಾದ ಸಮಯಕ್ಕೆ ಬಸ್‌ ಬಾರದ ಹಿನ್ನೆಲೆಯಲ್ಲಿ ಕ್ಲಾಸ್‌ಗಳಿಗೆ ಹಾಜರಾಗಲು ಆಗುತ್ತಿಲ್ಲ. ಹಲವು ಬಾರಿ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ನಮ್ಮ ಸಮಸ್ಯೆ ಕುರಿತು ಹೇಳಿಕೊಂಡರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಮಸ್ಯೆಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸ್ಪಂದಿಸುವ ಕಾರ್ಯ ಮಾಡಬೇಕಿದೆ ಅಂತ ಕಾಲೇಜು ವಿದ್ಯಾರ್ಥಿನಿ ಅನುಶ್ರೀ ತಿಳಿಸಿದ್ದಾರೆ.


Spread the love

About Laxminews 24x7

Check Also

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Spread the love ನವದೆಹಲಿ: ಇತ್ತೀಚೆಗೆ ಕೃತಕ ಬುದ್ಧಿಮತ್ತೆ(ಎಐ) ಚಾಲಿತ ರೊಬೋಟ್‌ ಒಂದು ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿತ್ತು. ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ