ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಅಭ್ಯರ್ಥಿ ಗಳಿಗೆ ಸೆಪ್ಟಂಬರ್‌ನಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಕಾರಣಗಳಿಂದ ಗೈರುಹಾಜರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು. ಅವರನ್ನು ಪ್ರಥಮ ಅವಕಾಶ ಎಂದು ಪರಿಗಣಿಸಲಾಗುವುದು.
ಅದೇ ರೀತಿ, ಈ ಪ್ರಕರಣಗಳಿಂದ ವಿದ್ಯಾರ್ಥಿಗಳು ಕೆಲ ವಿಷಯಗಳಿಗೆ ಹಾಜರಾಗಿ, ಹಲವು ವಿಷಯಗಳಿಗೆ ಗೈರುಹಾಜರಾದರೂ, ಪೂರಕ ಪರೀಕ್ಷೆಯಲ್ಲಿ ನೋಂದಾಯಿಸಿಕೊಂಡರೆ, ಅಂಥವರನ್ನೂ ಪ್ರಥಮ ಅವಕಾಶ ಎಂದು ಪರಿಗಣಿಸಲಾಗುವುದು. ಆದರೆ, ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲದಿರುವ ಬಗ್ಗೆ ಸ್ವತಃ ವಿದ್ಯಾರ್ಥಿಗಳ ಪೋಷಕರ ಲಿಖೀತ ಹೇಳಿಕೆ ಕಡ್ಡಾಯ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.
ಎಲ್ಲ ವಿಷಯಗಳಿಗೆ ಹಾಜರಾಗಿ, ಅನುತ್ತೀರ್ಣ ಗೊಂಡವರು ನೋಂದಾಯಿಸಿ ಕೊಂಡರೆ, ಅವರನ್ನು ಅನುತ್ತೀರ್ಣ ವಿದ್ಯಾರ್ಥಿಗಳು ಹಾಗೂ 2ನೇ ಪ್ರಯತ್ನ ಎಂದು ಪರಿಗಣಿಸಲಾಗು ವುದು.
ಆ. 11ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಆ. 20 ಕೊನೆಯ ದಿನ. ದಂಡ ಸಹಿತ ಆ. 24 ಕೊನೆಯ ದಿನ. ನೆಫ್ಟ್ ಚಲನ್ ಜನರೇಟ್ ಮಾಡಿಕೊಂಡು, ಬ್ಯಾಂಕ್‌ಗೆ ಪಾವತಿಸಲು ಆ. 28 ಕೊನೆಯ ದಿನ. ಅಭ್ಯರ್ಥಿಗಳು ಗೈರುಹಾಜರಾಗಿರುವ ವಿಷಯಗಳಿಗೆ ಶುಲ್ಕ ವಿನಾಯಿತಿಯಿದೆ. ಆದ್ದರಿಂದ ಗೈರುಹಾಜರಾದ ವಿಷಯ ಹೊರತುಪಡಿಸಿ, ಅನುತ್ತೀರ್ಣಗೊಂಡ ವಿಷಯಗಳಿಗೆ ಮಾತ್ರ ಶುಲ್ಕ ಪಾವತಿಸಬೇಕು.
ಶುಲ್ಕ ವಿವರ
ಒಂದು ವಿಷಯಕ್ಕೆ 320 ರೂ.
ಎರಡು ವಿಷಯಕ್ಕೆ 386 ರೂ.
ಮೂರು ಅಥವಾ ಮೇಲ್ಪಟ್ಟು 520 ರೂ.