ಬೆಂಗಳೂರು: ಮಹಾಮಾರಿ ಕೊರೊನಾದಿಂದ ಭಾರತ ನಲುಗಿ ಹೋಗಿದೆ. ಹೀಗಾಗಿ ಆಪರೇಷನ್ ವಂದೇ ಭಾರತ್ ಮೆಗಾ ಏರ್‌ಲಿಫ್ಟ್ ಮೂಲಕ ಬೇರೆ ಬೇರೆ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಕನ್ನಡಿಗರು ವಾಪಸ್ಸಾಗುತ್ತಿದ್ದಾರೆ. ಇಂದು ತಾಯ್ನಾಡಿಗೆ 326 ಕನ್ನಡಿಗರು ಬಂದಿಳಿದಿದ್ದಾರೆ.
ಬೆಂಗಳೂರಿಗೆ 323 ಜನ ಕನ್ನಡಿಗರು ಬಂದಿಳಿದಿದ್ದಾರೆ. ವಿಶೇಷ ವಿಮಾನದ ಮೂಲಕ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಸುಕಿನ ಜಾವ 4.47ಕ್ಕೆ ಕನ್ನಡಿಗರು ಆಗಮಿಸಿದ್ದಾರೆ. ಮೊದಲಿಗೆ ವಿಮಾನ ಲಂಡನ್‍ನಿಂದ ದೆಹಲಿಗೆ ಬಂದಿದೆ. ನಂತರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದೆ.
ವೈದ್ಯರ ತಂಡ ವಿಮಾನ ನಿಲ್ದಾಣದಲ್ಲೇ ಎಲ್ಲರನ್ನು ಸಾಮಾಜಿಕ ಅಂತರದ ಮೂಲಕ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿದ್ದಾರೆ. ಸ್ಕ್ರೀನಿಂಗ್ ನಡೆಸಿದ ಬಳಿಕ ಒಂದೊಂದು ಬಸ್ಸಿನಲ್ಲಿ 20 ಜನ ಪ್ರಯಾಣಿಕರು, ಪೊಲೀಸರು, ವೈದ್ಯರನ್ನು ತಂಡಗಳಾಗಿ ವಿಂಗಡಣೆಯಾಗುತ್ತಾರೆ. ನಂತರ ಪೊಲೀಸರ ಭದ್ರತೆಯಲ್ಲಿ ನಗರದ ನಿಗದಿತ ಕ್ವಾರಂಟೈನ್ ಹೋಟೆಲ್‍ಗಳಿಗೆ ಕನ್ನಡಿಗರನ್ನು ಕಳಿಸಿಕೊಡಲಾಗುತ್ತದೆ.
ಬೆಂಗಳೂರು ಗ್ರಾಮಾಂತರ ಡಿಸಿ ರವೀಂದ್ರ, ಈಶಾನ್ಯ ವಲಯ ಡಿಸಿಪಿ ಭೀಮಾ ಶಂಕರ್ ಗೂಳೆದ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.
ಹೊರ ರಾಜ್ಯದಲ್ಲಿರೋ 56 ಸಾವಿರ ಮಂದಿ ಕನ್ನಡಿಗರ ಪೈಕಿ, 4 ಸಾವಿರಕ್ಕೂ ಹೆಚ್ಚು ಕನ್ನಡಿಗರು ಶೀಘ್ರದಲ್ಲೇ ತವರಿಗೆ ಬರಲಿದ್ದಾರೆ. ವಿದ್ಯಾರ್ಥಿಗಳು, ಪ್ರವಾಸಿಗರು, ಉದ್ಯೋಗಕ್ಕೆ ತೆರಳಿದವರು ಈಗಾಗಲೇ ಆಯಾ ಜಿಲ್ಲೆ ಡಿಸಿ, ನೋಡಲ್ ಅಧಿಕಾರಿಗಳ ಬಳಿ ನೋಂದಣಿ ಮಾಡಿಸಿಕೊಂಡಿದ್ದಾರೆ.
ವಿದೇಶದಿಂದ ತವರಿಗೆ ಬರುವುದಕ್ಕೆ ಸುಮಾರು 6 ಸಾವಿರದ 100 ಕನ್ನಡಿಗರು ಸಿದ್ಧರಿದ್ದಾರೆ. ಇವರು ಉಳಿದುಕೊಳ್ಳಲು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಹೋಟೆಲ್ ವ್ಯವಸ್ಥೆ ಮಾಡಲಾಗಿದೆ. 18 ಪಂಚತಾರಾ ಹೋಟೆಲ್, 25 ತ್ರಿ ಸ್ಟಾರ್ ಹೋಟೆಲ್‍ಗಳು ಬುಕ್ ಮಾಡಲಾಗಿದೆ. ಸುಮಾರು 6008 ರೂಂಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಕನ್ನಡಿಗರ ಊಟ ತಿಂಡಿಗೆ ವ್ಯವಸ್ಥೆ ಮಾಡಲಾಗಿದೆ.