ಬೆಂಗಳೂರು: ಲಾಕ್‍ಡೌನ್ ನಡುವೆ ಎಣ್ಣೆ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್‍ನ್ಯೂಸ್ ನೀಡಿದೆ. ಸೋಮವಾರದಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಮಾರ್ಗಸೂಚಿ ಹೊರಡಿಸಿದೆ. ಜೊತೆಗೆ ಕೆಲವು ಷರತ್ತುಗಳನ್ನು ವಿಧಿಸಿದೆ.
ರಾಜ್ಯದಲ್ಲಿ ಸೋಮವಾರದಿಂದ ಎಣ್ಣೆ ಮಾರಾಟಕ್ಕೆ ಅನುಮತಿ ನೀಡಿ ಅಬಕಾರಿ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಶನಿವಾರ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ರೆಡ್‍ಝೋನ್ ಸೇರಿದಂತೆ ಉಳಿದ ಕಡೆ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ. ನಂತರ ರಾಜ್ಯ ಸರ್ಕಾರ ಲಾಕ್‍ಡೌನ್ 3.0 ಮಾರ್ಗಸೂಚಿಗಳನ್ನು ಪ್ರಕಟಿಸಿತು. ಇದು ಮೇ 4ರಿಂದ ಮೇ 17ರವರೆಗೂ ಜಾರಿಯಲ್ಲಿ ಇರುತ್ತದೆ.
ಷರತ್ತುಗಳು ಏನು?
1. ಕಂಟೈನ್‍ಮೆಂಟ್ ಝೋನ್ ಬಿಟ್ಟು ಉಳಿದೆಡೆ ಮದ್ಯ ಮಾರಾಟ
2. ವೈನ್‍ಶಾಪ್, ಎಂಆರ್‌ಪಿ, ಎಂಎಸ್‍ಐಎಲ್‍ಗಳಲ್ಲಿ ಮದ್ಯ ಮಾರಾಟ
3. ಬೆಳಗ್ಗೆ 9ರಿಂದ ಸಂಜೆ 7 ಗಂಟೆಯವರೆಗೂ ವೈನ್‍ಶಾಪ್ ಓಪನ್
4. ವೈನ್ ಶಾಪ್‍ನಲ್ಲಿ ಮದ್ಯಪಾನ ಇಲ್ಲ, ಪಾರ್ಸಲ್‍ಗಷ್ಟೇ ಅವಕಾಶ
5. ಸೂಪರ್ ಮಾರ್ಕೆಟ್ ಗಳಲ್ಲಿ ಮದ್ಯ ಮಾರಾಟ ಇರಲ್ಲ
6. ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುವಂತೆ ಇಲ್ಲ
7. ಮದ್ಯ ಕೊಂಡುಕೊಳ್ಳುವ ಗ್ರಾಹಕರಿಗೆ ಮಾಸ್ಕ್ ಕಡ್ಡಾಯ
8. ಮದ್ಯದಂಗಡಿಯಲ್ಲಿ ಸ್ಯಾನಿಟೈಸರ್ ಬಳಕೆ ಕಡ್ಡಾಯ
9. 5 ಜನ ಮಾತ್ರ ಇರುವಂತೆ ನೋಡಿಕೊಳ್ಳಬೇಕು
10. 6 ಅಡಿ ಸಾಮಾಜಿಕ ಅಂತರ ಇರಬೇಕು
ಅಬಕಾರಿ ಇಲಾಖೆಯೇನೋ ಎಣ್ಣೆ ಸಿಗುತ್ತೆ ಅಂತ ಹೇಳಿದೆ. ಆದರೆ ಅದನ್ನ ಉಳಿಸಿಕೊಳ್ಳೋದು ಮಾತ್ರ ಎಣ್ಣೆ ಪ್ರಿಯರ ಕೈಲಿದೆ. ಯಾಕೆಂದರೆ ಸರಿಯಾಗಿ ನಿಯಮ ಪಾಲಿಸದಿದ್ರೆ, ನೂಕು ನುಗ್ಗಲು ಉಂಟಾದರೆ ತಕ್ಷಣ ಮದ್ಯದಂಗಡಿ ಮುಚ್ಚುವುದಾಗಿ ಅಬಕಾರಿ ಸಚಿವ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ಕೆಲವು ವಿರೋಧಗಳ ನಡುವೆಯೇ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ ಉಳಿಸಿಕೊಳ್ಳೋದು, ಬಿಡೋದು ಎಣ್ಣೆ ಪ್ರಿಯರಿಗೆ ಬಿಟ್ಟಿದೆ. ಕಂಟೈನ್‍ಮೆಂಟ್ ಝೋನ್ ವ್ಯಾಪ್ತಿಯ ಜನರಿಗೂ ಎಣ್ಣೆ ಬೇಕು ಅಂದರೆ ಸರಿಯಾಗಿ ಲಾಕ್‍ಡೌನ್ ನಿಯಮ ಪಾಲಿಸಿ ಸೋಂಕು ಮುಕ್ತ ಝೋನ್ ಆಗಬೇಕಿದೆ.
ಕರ್ನಾಟಕ ಸರ್ಕಾರ ಲಾಕ್‍ಡೌನ್ ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಶನಿವಾರ ತನ್ನ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕರ್ನಾಟಕವನ್ನು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನಾಗಿ ಸರ್ಕಾರ ವಿಂಗಡನೆ ಮಾಡಿದೆ. ಕೊನೆಯ 21 ದಿನದಿಂದ ಪ್ರಕರಣ ಪತ್ತೆ ಆಗದ ಸ್ಥಳಗಳು ಗ್ರೀನ್ ಝೋನ್ ಎಂದು ಗುರುತಿಸಲಾಗಿದೆ. ಗ್ರೀನ್ ಹಾಗೂ ರೆಡ್ ಝೋನ್ ಬೈಫರಿಕೇಟ್ ಮಾಡಲಾಗದ ಸ್ಥಳ ಅರೆಂಜ್ ಝೋನ್ ಪಟ್ಟಿಯಲ್ಲಿರಲಿವೆ. ರಾಜ್ಯ ಸರ್ಕಾರ ಬಹುತೇಕ ಕೇಂದ್ರದ ಮಾರ್ಗಸೂಚಿಗಳನ್ನು ಯಥಾವತ್ತು ಪಾಲಿಸಿದೆ. ಮೂರು ವಲಯಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.