Breaking News

ಕೊರೋನಾ ಕಂಟ್ರೋಲ್‌ಗೆ ರಾಜ್ಯ ಸರ್ಕಾರದಿಂದ ಹೊಸ ಸುತ್ತೋಲೆ : ಇಲ್ಲಿದೆ ಡೀಟೇಲ್ಸ್

Spread the love

ಬೆಂಗಳೂರು, ಮೇ 22- ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸೋಂಕು ನಿವಾರಣೆಗೆ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ.

ನಿಯಂತ್ರಣ ವಲಯ, ಬಫರ್‍ಜೋನ್ ಹಾಗೂ ಕ್ಲಸ್ಟರ್‍ಗಳನ್ನು ಪುನರ್‍ವ್ಯಾಖ್ಯಾನಿಸಿರುವ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್‍ಭಾಸ್ಕರ್ ಅವರು ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದಾರೆ.

ನಿಯಂತ್ರಿತ ವಲಯದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ವಾಸವಾಗಿರುವ ಮನೆಯ ಸುತ್ತಲ ಸರಹದ್ದನ್ನು ಗುರುತಿಸಿ ಆ ಪ್ರದೇಶದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಪರಿಣಾಮಕಾರಿಯಾದ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಅವಶ್ಯವಾಗಿದೆ.

ಕೊನೆಯ ಕೋವಿಡ್ ಪ್ರಕರಣದ ನಂತರದ 28 ದಿನಗಳಲ್ಲಿ ಯಾವುದೇ ಹೊಸ ಸೋಂಕು ಪ್ರಕರಣಗಳು ವರದಿಯಾಗದಿದ್ದರೆ ನಿಯಂತ್ರಿತ ವಲಯದಲ್ಲಿ 10ಕ್ಕಿಂತ ಕಡಿಮೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವವರು ಸಕ್ರಿಯ ಗೃಹ ಬಂಧನದಲ್ಲಿ ಉಳಿದಿದ್ದರೆ, ಅಪಾರ್ಟ್‍ಮೆಂಟ್‍ಗಳಲ್ಲಿ, ವಿಲ್ಲಾಗಳಲ್ಲಿ, ಕೊಳಗೇರಿ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿತ ವ್ಯಕ್ತಿ ಇದ್ದರೆ ಅಂತಹ ಪ್ರದೇಶಗಳ ರಸ್ತೆ, ಚರಂಡಿ, ಉದ್ಯಾನವನ ಮುಂತಾದ ಗುರುತುಗಳನ್ನು ಭೌಗೋಳಿಕವಾಗಿ ವಿಂಗಡಿಸುವ ಹೊಣೆ ಹೊತ್ತು ಆಯಾ ಜಿಲ್ಲಾಧಿಕಾರಿಗಳೇ ಪರಿಷ್ಕøತ ಅಧಿಸೂಚನೆ ಹೊರಡಿಸಬೇಕು.

ಸೋಂಕಿತ ವಾಸವಾಗಿರುವ 200 ಮೀಟರ್ ಸುತ್ತಳತೆಯ ಪ್ರದೇಶವನ್ನು ಬಫರ್ ವಲಯ ಎಂದು ಘೋಷಣೆ ಮಾಡಬೇಕು. ವಾರಕ್ಕೆ ಎರಡು ಬಾರಿ ಆರೋಗ್ಯ ಸಮೀಕ್ಷೆ ನಡೆಸಬೇಕು. 28 ದಿನಗಳ ವರೆಗೆ ಯಾವುದೇ ಹೊಸ ಪ್ರಕರಣ ಪತ್ತೆಯಾಗದಿದ್ದರೆ ಅಂತಹ ವಲಯವನ್ನು ಬಫರ್‍ಜೋನ್ ಎಂದು ಪರಿಗಣಿಸಬೇಕು

ಬಿಬಿಎಂಪಿಯಾಗಲಿ, ಜಿಲ್ಲಾಡಳಿತವಾಗಲಿ ನಿಯಂತ್ರಿತ ವಲಯ ಎಂದು ಘೋಷಣೆ ಮಾಡಿದ ಬಳಿಕ ಆ ವಲಯಕ್ಕೆ ಒಬ್ಬ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅಥವಾ ಒಂದನೇ ದರ್ಜೆ ಅಧಿಕಾರಿಗೆ ಮೆಜಿಸ್ಟ್ರೀಯಲ್ ಅಧಿಕಾರ ನೀಡಿ ಕಮಾಂಡರ್ ಆಗಿ ನಿಯೋಜನೆ ಮಾಡಬೇಕು. ಬಫರ್ ವಲಯ ಹಾಗೂ ನಿಯಂತ್ರಿತ ವಲಯದ ಸಂಪೂರ್ಣ ನಿರ್ವಹಣೆಯನ್ನು ಕಮಾಂಡರ್ ನಿರ್ವಹಿಸಬೇಕಾಗಿದೆ.

ಆಯಾ ಪ್ರದೇಶಗಳಲ್ಲಿ ಗಡಿ ನಿಗದಿ ಮಾಡುವುದು, ಸೋಂಕು ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಹೊಣೆ ಕಮಾಂಡರ್ ಅವರದ್ದೇ ಆಗಿರುತ್ತದೆ. ನಿಯಂತ್ರಿತ ವಲಯದ ಕಣ್ಣಳತೆ ದೂರದಲ್ಲೇ ಕಮಾಂಡರ್ ಕೇಂದ್ರ ಸ್ಥಾಪನೆ ಮಾಡಬೇಕು. ಅಲ್ಲಿನ ಸಿಬ್ಬಂದಿಗಳು 24 ಗಂಟೆ ಕರ್ತವ್ಯ ನಿರ್ವಹಿಸಿ ಸೋಂಕು ನಿವಾರಣೆಗೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಬೇಕು.

ನಿಯಂತ್ರಣ ವಲಯದಲ್ಲಿ ವಿಶೇಷ ತಂಡಗಳನ್ನು ರಚಿಸಬೇಕು. ಲಾಕ್‍ಡೌನ್ ಜಾರಿಗೆ ಸಂಚಾರಿ ತಂಡ ನಿಯೋಜಿಸಬೇಕು. ಆ ಪ್ರದೇಶಗಳಲ್ಲಿರುವ ಗರ್ಭಿಣಿಯರು, ಹೃದಯ ಸಂಬಂಧಿ ರೋಗಿಗಳ ಅಂದಾಜು ಪಟ್ಟಿ ನೀಡಿ ತುರ್ತು ಸಂದರ್ಭದಲ್ಲಿ ಅವರಿಗೆ ಅಗತ್ಯ ಸಹಾಯ ಮಾಡುವ ಹೊಣೆಯೂ ಕಮಾಂಡರ್‍ಗೆ ಸಂಬಂಧಿಸಿದ್ದಾಗಿರುತ್ತದೆ.

# ಪೊಲೀಸರ ಪಾತ್ರ:
ನಿಯಂತ್ರಿತ ವಲಯದ ಎಲ್ಲಾ ಪ್ರವೇಶ ದ್ವಾರಗಳಲ್ಲೂ ತಡೆ ಗೋಡೆ ಹಾಕುವುದು, ನಾಕಾಬಂಧಿ ವಿಧಿಸುವುದು, ಅಲ್ಲಿನ ನಿವಾಸಿ ಯಾವುದೇ ಕಾರಣಕ್ಕೂ ಮನೆಗಳಿಂದ ಹೊರ ಬಾರದಂತೆ ಎಚ್ಚರಿಕೆ ವಹಿಸುವುದು ಹಾಗೂ ವಾಹನ ಸಂಚಾರಕ್ಕೆ ಅವಕಾಶ ನೀಡದಿರುವುದೂ ಸೇರಿದಂತೆ ಆ ಪ್ರದೇಶವನ್ನು ಸೀಲ್‍ಡೌನ್ ಮಾಡುವ ಜವಾಬ್ದಾರಿ ಪೊಲೀಸ್ ಇಲಾಖೆಯದ್ದಾಗಿರುತ್ತದೆ.

ಅಗತ್ಯ ಹಾಗೂ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಸ್ಥಳೀಯರಿಗೆ ಎಮರ್ಜೆನ್ಸಿ ಪಾಸ್ ವಿತರಿಸಲು ಪೊಲೀಸರಿಗೆ ಅವಕಾಶವಿದೆ. ಸೀಲ್‍ಡೌನ್ ಜಾರಿಗೆ ಡ್ರೋಣ್ ಮತ್ತಿತರ ತಂತ್ರಜ್ಞಾನ ಬಳಸಿಕೊಳ್ಳಲು ಪೊಲೀಸರಿಗೆ ಸಂಪೂರ್ಣ ಅಧಿಕಾರವಿರುತ್ತದೆ.

# ಆರೋಗ್ಯ ಇಲಾಖೆ ಜವಾಬ್ದಾರಿ:
ನಿಯಂತ್ರಣ ವಲಯದಲ್ಲಿ ಆರೋಗ್ಯ ಔಟ್‍ ಪೋಸ್ಟ್ ಆರಂಭಿಸಿ ತಪಾಸಣೆಗೆ ಒಬ್ಬ ವೈದ್ಯರ ನೇತೃತ್ವದಲ್ಲಿ ಅಲ್ಲಿನ ಜನರ ಆರೋಗ್ಯ ತಪಾಸಣೆ ನಡೆಸುವುದು ಆರೋಗ್ಯ ಇಖೆಯ ವಿವೇಚನೆಗೆ ಬಿಡಲಾಗಿದೆ.

ಸೋಂಕು ಪತ್ತೆಯಾದರೆ ಅಥವಾ ಆತನದೊಂದಿಗೆ ಸಂಪರ್ಕ ವಿರಿಸಿಕೊಂಡಿರುವ ವ್ಯಕ್ತಿಗಳಿಗೆ ಕೂಡಲೇ ಸ್ಟಾಂಪಿಂಗ್ ಮಾಡಬೇಕು ಹಾಗೂ ಮನೆಯ ಮುಂದೆ ನೋಟಿಸ್ ಅಂಟಿಸಿ ಅವರನ್ನು ಗೃಹ ಬಂಧನದಲ್ಲಿರಿಸಿ ಅಲ್ಲಿನವರು ಹೊರ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಕಮಾಂಡರ್‍ಗಳಿಗೆ ವಹಿಸಬೇಕಾಗುತ್ತದೆ.

ಕೊಳಗೇರಿಗಳಲ್ಲಿ ಸೋಂಕು ಕಾಣಿಸಿಕೊಂಡರೆ ಅಂತಹವರನ್ನು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಸಮುದಾಯದ ಆರೋಗ್ಯ ಸಮೀಕ್ಷೆ ಕೈಗೊಳ್ಳುವುದು, ಜ್ವರ, ಶ್ವಾಸಕೋಶದ ಸೋಂಕಿನ ಲಕ್ಷಣಗಳು ಕಂಡು ಬಂದವರನ್ನು ಪತ್ತೆಹಚ್ಚಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸಲಹೆ ನೀಡಿ ಮಾಸ್ಕ್ ಬಳಕೆ ಮಾಡುವಂತೆ ಸೂಚಿಸಿ ಗೃಹ ಬಂಧನದಲ್ಲಿರಿಸುವುದು ಆರೋಗ್ಯ ಇಲಾಖೆಯ ಜವಾಬ್ದಾರಿಯಾಗಿರುತ್ತದೆ.

ಆರೋಗ್ಯ ಇಲಾಖೆ ಸರ್ವೇಕ್ಷಣ ತಂಡ ಪ್ರತಿ ದಿನ 50 ಮನೆಗಳ ತಪಾಸಣೆ ಮಾಡಬೇಕು ಮತ್ತು ದಿನದಲ್ಲಿ ಎಲ್ಲಾ ಮನೆಗಳ ಆರೋಗ್ಯ ಸ್ಥಿತಿಗತಿಯ ಮಾಹಿತಿ ಪಡೆದುಕೊಳ್ಳಬೇಕು. ಸಾರ್ವಜನಿಕ ಸ್ಥಳದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಬಳಕೆ ಕಡ್ಡಾಯಗೊಳಿಸುವುದು ಅವಶ್ಯಕ.

# ನಗರಸಭೆ ಅಧಿಕಾರಿಗಳ ಜವಾಬ್ದಾರಿ ಏನು ?:
ನಿಯಂತ್ರಿತ ವಲಯದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಆಯಾ ನಗರಸಭೆ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಪ್ರತಿನಿತ್ಯ ಘನತ್ಯಾಜ್ಯ ನಿರ್ವಹಣೆ ಮಾಡುವುದು, ಸೋಂಕು ನಿವಾರಕ ರಾಸಾಯನಿಕ ಸಿಂಪಡಿಸುವುದು, ಕುಡಿಯುವ ನೀರಿನ ಕೊರತೆ ನೀಗಿಸುವುದು, ಸೀಲ್‍ಡೌನ್ ಆದ ಪ್ರದೇಶಗಳ ಜನರಿಗೆ ಅಗತ್ಯ ಮೂಲಭೂತ ಸೌಕರ್ಯ ಪೂರೈಸುವುದು, ಪಡಿತರ ಚೀಟಿ ಹೊಂದಿರುವವರ ಮನೆ ಬಾಗಿಲಿಗೆ ದಿನಸಿ ಸರಬರಾಜು ಮಾಡುವುದು ಸ್ಥಳೀಯ ಆಡಳಿತವೇ ನಿರ್ವಹಿಸಬೇಕಾಗಿದೆ.

ಸೋಂಕು ಕಾಣಿಸಿಕೊಳ್ಳದ ಪ್ರದೇಶವನ್ನು ಕ್ಲಸ್ಟರ್ ಎಂದು ಗುರುತಿಸುವುದು. ಆ ಪ್ರದೇಶದಲ್ಲಿ ರೋಗ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸಂಬಂಧಿಸಿದ್ದಾಗಿರುತ್ತದೆ.


Spread the love

About Laxminews 24x7

Check Also

ಹಿರೇ ಬಾಗೇವಾಡಿ ಗ್ರಾಮದಲ್ಲಿ‌ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ (ರಿ) ವತಿಯಿಂದ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಹಾಗೂ ಸಾಮಾನ್ಯ ಸಹಾಯ ಕೇಂದ್ರವನ್ನು ಉದ್ಘಾಟಿಸಿದೆ.

Spread the loveಹಿರೇ ಬಾಗೇವಾಡಿ ಗ್ರಾಮದಲ್ಲಿ‌ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ (ರಿ) ವತಿಯಿಂದ ನಡೆದ ತಾಲೂಕು ಮಟ್ಟದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ