ಲಾಕ್‍ಡೌನ್ ವಿನಾಯಿತಿ ಪ್ರಕಟವಾದ ಬೆನ್ನಲ್ಲೇ ರಾಜ್ಯಗಳು ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಮದ್ಯ ಮಾರಾಟಕ್ಕೆ ಹಲವು ವಿರೋಧಗಳು ವ್ಯಕ್ತವಾಗುತ್ತಿದ್ದರೂ ಸರ್ಕಾರಗಳು ಮಾತ್ರ ಕಂಟೈನ್‍ಮೆಂಟ್ ವಲಯ ಬಿಟ್ಟು ಎಲ್ಲ ಕಡೆ ಮಾರಾಟಕ್ಕೆ ಅನುಮತಿ ನೀಡಿದೆ. ಹೀಗಾಗಿ ಯಾಕೆ ರಾಜ್ಯ ಸರ್ಕಾರಗಳು ಮದ್ಯ ಮಾರಾಟಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತದೆ. ಮದ್ಯವನ್ನು ಯಾಕೆ ನಿಷೇಧಿಸುವುದಿಲ್ಲ ಎಂಬ ಪ್ರಶ್ನೆಗಳು ಏಳುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.
ಮದ್ಯಕ್ಕೆ ಯಾಕೆ ಮಹತ್ವ?
ಜಿಎಸ್‍ಟಿ ಜಾರಿಯಾದ ಬಳಿಕ ರಾಜ್ಯಗಳಿಗೆ ತೆರಿಗೆ ಸಂಗ್ರಹಿಸುವ ಅವಕಾಶ ಕಡಿಮೆಯಾಗಿದೆ. ಪೆಟ್ರೋಲ್, ಡೀಸೆಲ್ ಬಿಟ್ಟರೆ ರಾಜ್ಯಗಳಿಗೆ ಅತಿ ಹೆಚ್ಚು ಆದಾಯ ಮದ್ಯದಿಂದಲೇ ಬರುತ್ತದೆ. ಈ ಕಾರಣಕ್ಕೆ ಮದ್ಯ ಮಾರಾಟ ನಿಷೇಧಿಸುವಂತೆ ಹಲವು ಪ್ರತಿಭಟನೆಗಳು ನಡೆದರೂ ಸರ್ಕಾರ ನಿಷೇಧಿಸುವ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುತ್ತಿಲ್ಲ. ಆದರೆ ಗುಜರಾತ್ ಮತ್ತು ಬಿಹಾರದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಜಿಎಸ್‍ಟಿಯಲ್ಲಿ ಇಲ್ಲ ಯಾಕೆ?
ಒಂದು ದೇಶ ಒಂದು ತೆರಿಗೆ ಜಾರಿಯಾದ ಹಿನ್ನೆಲೆಯಲ್ಲಿ ಮದ್ಯವೂ ಜಿಎಸ್‍ಟಿ ವ್ಯಾಪ್ತಿಯಲ್ಲಿ ಬರಬೇಕಿತ್ತು. ಹಲವು ನಾಯಕರು ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆದರೆ ಮದ್ಯ ಮತ್ತು ಪೆಟ್ರೋಲ್, ಡೀಸೆಲ್ ನಿಂದಾಗಿ ರಾಜ್ಯಗಳಿಗೆ ಹೆಚ್ಚಿನ ಆದಾಯ ಬರುತ್ತದೆ. ತೆರಿಗೆ ಪರಿಷ್ಕರಿಸುವ ಮುನ್ನ ಜಿಎಸ್‍ಟಿ ಕೌನ್ಸಿಲ್ ಸಭೆ ನಡೆಯುತ್ತದೆ. ಈ ಸಭೆಯಲ್ಲಿ ರಾಜ್ಯಗಳ ಹಣಕಾಸು ಮಂತ್ರಿಗಳು ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಅಧಿಕಾರಿಗಳು ಭಾಗವಹಿಸುತ್ತಾರೆ. ಇಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೆ ರಾಜ್ಯ ಸರ್ಕಾರಗಳ ಒಪ್ಪಿಗೆ ಅಗತ್ಯ. ಮದ್ಯ, ಪೆಟ್ರೋಲ್, ಡೀಸೆಲ್ ಸೇರಿಸಬೇಕೆಂದು ಪ್ರಸ್ತಾಪವಾದರೂ ರಾಜ್ಯಗಳು ಒಪ್ಪಿಗೆ ನೀಡದ ಕಾರಣ ಇನ್ನೂ ಜಿಎಸ್‍ಟಿ ವ್ಯಾಪ್ತಿಯ ಒಳಗಡೆ ಬಂದಿಲ್ಲ.
ಹಾಗಾದ್ರೆ ಅಷ್ಟೊಂದು ಆದಾಯ ಬರುತ್ತಾ?
ಮದ್ಯ ಉತ್ಪಾದನೆ ಮತ್ತು ಮಾರಾಟದಿಂದ ರಾಜ್ಯದ ಬೊಕ್ಕಸಕ್ಕೆ ಭಾರೀ ಆದಾಯ ಬರುತ್ತದೆ. ಇದರ ಜೊತೆ ರಾಜ್ಯ ಸರ್ಕಾರಗಳು ವಿದೇಶದಿಂದ ಆಮದಾಗಿರುವ ಮದ್ಯ, ಸಾಗಾಣಿಕಾ ವೆಚ್ಚ, ಲೇಬಲ್ ಇವುಗಳಿಗೆಲ್ಲ ಶುಲ್ಕ ವಿಧಿಸುತ್ತದೆ. ಉತ್ತರ ಪ್ರದೇಶದಲ್ಲಿ ಮದ್ಯದ ಮೇಲೆ ವಿಶೇಷ ತೆರಿಗೆ ಹಾಕಿದ್ದು ಇದರದಲ್ಲಿ ಸಂಗ್ರಹವಾದ ಹಣವನ್ನು ಬೀದಿಯಲ್ಲಿರುವ ಹಸುಗಳ ರಕ್ಷಣೆಗೆ ವಿನಿಯೋಗಿಸಲಾಗುತ್ತದೆ. ದೆಹಲಿ ಸರ್ಕಾರ ಕೊರೊನಾ ವಿಶೇಷ ಶುಲ್ಕದ ಅಡಿ ಶೇ.70 ರಷ್ಟು ತೆರಿಗೆಯನ್ನು ಏರಿಸಿದೆ.
ಎಷ್ಟು ಆದಾಯ ಬರುತ್ತದೆ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಸೆಪ್ಟೆಂಬರ್ ನಲ್ಲಿ ಪ್ರಕಟಿಸಿದ ಮಾಹಿತಿ(ಸ್ಟೇಟ್ ಫೈನಾನ್ಸ್ : ಎ ಸ್ಟಡಿ ಆಫ್ ಬಜೆಟ್ ಆಫ್ 2019-20) ರಾಜ್ಯಗಳ ಆದಾಯದ ಪೈಕಿ ಶೇ.10-15 ರಷ್ಟು ಹಣ ಮದ್ಯದಿಂದಲೇ ಬರುತ್ತದೆ. ರಾಜ್ಯಗಳಿಂದಲೇ ಬರುವ ಆದಾಯದ ಪೈಕಿ ಮದ್ಯವೇ ಯಾವಾಗಲೂ ಎರಡು ಅಥವಾ ಮೂರನೇ ಸ್ಥಾನದಲ್ಲಿರುತ್ತದೆ.
2019-20ರ ಹಣಕಾಸು ವರ್ಷದಲ್ಲಿ 29 ರಾಜ್ಯ ಮತ್ತು ಎಲ್ಲ ಕೇಂದ್ರಾಡಳಿತ ಪ್ರದೇಶಗಳ ಬಜೆಟ್ ಕ್ರೋಢಿಕರಿಸಿದರೆ ಒಟ್ಟು 1,75,501.422 ಕೋಟಿ ರೂ. ಆದಾಯ ಬಂದಿದೆ ಎಂದು ಆರ್‌ಬಿಐ ತಿಳಿಸಿದೆ. 2018-19ರ ಆರ್ಥಿಕ ವರ್ಷದಲ್ಲಿ 1,50,657.959 ಕೋಟಿ ರೂ. ಆದಾಯ ಬಂದಿತ್ತು. ಈ ಮೂಲಕ ಕಳೆದ ವರ್ಷ ಶೇ.16 ರಷ್ಟು ಆದಾಯ ಹೆಚ್ಚಾಗಿತ್ತು.
2018-19ರ ಅವಧಿಯಲ್ಲಿ ಒಂದು ರಾಜ್ಯ ತಿಂಗಳಿಗೆ ಸರಾಸರಿ 12,500 ಕೋಟಿ ರೂ. ಆದಾಯ ಗಳಿಸಿದರೆ 2019-20ರ ಅವಧಿಯಲ್ಲಿ ಒಂದು ತಿಂಗಳಿಗೆ 15,000 ಕೋಟಿ ರೂ. ಆದಾಯ ಸಂಗ್ರಹಿಸಿತ್ತು. ಈ ವರ್ಷ ಕೋವಿಡ್ ಲಾಕ್‍ಡೌನ್ ಅವಧಿ ಹೊರತು ಪಡಿಸಿ ಉಳಿದ ತಿಂಗಳಿನಲ್ಲಿ 15,000 ಕೋಟಿಗಿಂತಲೂ ಹೆಚ್ಚಿನ ವಹಿವಾಟು ನಡೆಯುವ ಸಾಧ್ಯತೆಯಿದೆ.
ಯಾವ ರಾಜ್ಯದ ಪಾಲು ಎಷ್ಟು?
*ಆವರಣದಲ್ಲಿ ನೀಡಿರುವುದು 2018-19ರ ಆದಾಯ
2019-20ರ ಅವಧಿಯಲ್ಲಿ ಉತ್ತರ ಪ್ರದಶದಲ್ಲಿ 31,517.41 ಕೋಟಿ ರೂ.(25,100 ಕೋಟಿ ರೂ.), ಕರ್ನಾಟಕ 20,950 ಕೋಟಿ ರೂ.(19,750 ಕೋಟಿ ರೂ.), ಮಹಾರಾಷ್ಟ್ರ 17,477.388 ಕೋಟಿ ರೂ.(15,343.085 ಕೋಟಿ ರೂ.), ಪಶ್ಚಿಮ ಬಂಗಾಳ 11,873.65 ಕೋಟಿ ರೂ.(10,554.36 ಕೋಟಿ ರೂ.), ತೆಲಂಗಾಣ 10,901 ಕೋಟಿ ರೂ.(10,313 ಕೋಟಿ ರೂ.) ಆದಾಯ ಬಂದಿದೆ.
ರಾಜ್ಯದ ಅಬಕಾರಿ ವ್ಯಾಪ್ತಿಯಲ್ಲಿ ಯಾವುದು ಬರುತ್ತೆ?
ವಿದೇಶಿ ಮದ್ಯ, ಸ್ವದೇಶಿ ಮದ್ಯ, ವೈನ್, ಸ್ವಚ್ಛತೆ ಮತ್ತು ಮೆಡಿಸಿನ್ ಗಳಲ್ಲಿ ಅಲ್ಕೋಹಾಲ್ ಬಳಕೆ ಮಾಡುವ ಎಲ್ಲ ವಸ್ತುಗಳು, ಲೈಸೆನ್ಸ್, ದಂಡಗಳು ಎಲ್ಲ ಅಬಕಾರಿ ವ್ಯಾಪ್ತಿಯಲ್ಲಿ ಬರುತ್ತದೆ. ಈ ಹಿಂದೆ ಸಾರಾಯಿ ಮಾರಾಟವಿತ್ತು. ಆದರೆ 2007 ಜುಲೈ 1 ರಿಂದ ಸಾರಾಯಿ ಮಾರಾಟವನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ.
ಬಜೆಟ್‍ನಲ್ಲಿ ಏರಿಕೆ:
ಮದ್ಯದ ಎಲ್ಲ 18 ಘೋಷಿತ ಬೆಲೆ ಸ್ಲ್ಯಾಬ್‍ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.6ರಷ್ಟು ಹೆಚ್ಚಿಸುವುದಾಗಿ ಸಿಎಂ ಯಡಿಯೂರಪ್ಪ ಈ ವರ್ಷದ ಬಜೆಟ್‍ನಲ್ಲಿ ಪ್ರಕಟಿಸಿದ್ದರು. ಅಬಕಾರಿ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಒಟ್ಟು 20,950 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿಯನ್ನು ಸರ್ಕಾರ ನಿಗದಿ ಪಡಿಸಿತ್ತು. ಆದರೆ ಫೆಬ್ರವರಿ ಅಂತ್ಯದವರೆಗೆ 19,701 ಕೋಟಿ ರೂ. ಸಂಗ್ರಹವಾಗಿತ್ತು. 2020-21ನೇ ಆರ್ಥಿಕ ವರ್ಷಕ್ಕೆ 22,700 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಕಳೆದ ವರ್ಷ ಕುಮಾರಸ್ವಾಮಿ ಅವರು ಮದ್ಯದ ಮೇಲಿನ ಎಲ್ಲಾ 18 ಘೋಷಿತ ಬೆಲೆ ಸ್ಲಾಬ್‍ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ದರಗಳನ್ನು ಶೇ.4ರಷ್ಟು ಹೆಚ್ಚಿಸಿದ್ದರು.