ಬಾಗಲಕೋಟೆ: ಪತ್ನಿ ಮತ್ತು ಮಗು ನೋಡಿಕೊಂಡು ವಾಪಸ್ ಬರುವಾಗ ಕೊರೊನಾ ಲಾಕ್‍ಡೌನ್ ಅಡ್ಡಿಯಾದ ಪರಿಣಾಮ, ಕೆಎಸ್ಆರ್‌ಟಿಸಿ ಕಂಡಕ್ಟರ್ ಓರ್ವ ಹುಚ್ಚು ಸಾಹಸಕ್ಕೆ ಕೈ ಹಾಕಿ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಹುನಗುಂದದ ನಿವಾಸಿ ಮಲ್ಲಪ್ಪ ಬೊಮ್ಮಣಗಿ (45) ಮೃತ ಕೆಎಸ್ಆರ್‌ಟಿಸಿ ಕಂಡಕ್ಟರ್. ಈ ಘಟನೆ ಸೋಮವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲ್ಲಪ್ಪ ತನ್ನ ಪತ್ನಿ ಮತ್ತು ಮಗುವನ್ನು ನೋಡಲು ಗ್ರಾಮಕ್ಕೆ ತೆರಳಿದ್ದನು. ಬಳಿಕ ಇಬ್ಬರನ್ನು ನೋಡಿಕೊಂಡು ವಾಪಸ್ ಬರುತ್ತಿದ್ದನು. ಈ ವೇಳೆ ಚೆಕ್‍ಪೋಸ್ಟ್ ಬಳಿ ಹೋದರೆ ಪೊಲೀಸರು ಹೋಗಲು ಬಿಡುವುದಿಲ್ಲ ಎಂದುಕೊಂಡು ತಂಗಡಗಿ ಬಳಿಯ ನದಿಯಲ್ಲಿ ಈಜಿ ದಡ ಸೇರಲು ಯತ್ನಿಸಿದ್ದಾನೆ.

ಅದರಂತೆಯೇ ಮಲ್ಲಪ್ಪ ಕೃಷ್ಣಾ ನದಿಯಲ್ಲಿ ಈಜಲು ಮುಂದಾಗಿದ್ದಾನೆ. ಆದರೆ ನದಿಯಲ್ಲಿ ಈಜಲಾಗದೇ ಕಂಡಕ್ಟರ್ ಮಲ್ಲಪ್ಪ ಮೃತಪಟ್ಟಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿ, ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ.

ಮೃತ ಮಲ್ಲಪ್ಪ ಚೆಕ್‍ಪೋಸ್ಟ್ ಬಳಿ ಹೋಗಿ ಪೊಲೀಸರು ಹತ್ತಿರ ಮನವಿ ಮಾಡಿಕೊಂಡಿಲ್ಲ. ಆದರೆ ಪೊಲೀಸರಿಗೆ ಹೆದರಿ ನದಿಯಿಂದ ಈಜಿ ತಡ ಸೇರುವ ಯತ್ನ ಮಾಡಿ ಮೃತಪಟ್ಟಿದ್ದಾನೆ.
Laxmi News 24×7