ಬೆಳಗಾವಿ : ಜುಲೈ 19 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆರೋಗ್ಯದ ದೃಷ್ಟಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೂಚನೆ ಮೇರೆಗೆ ಶಿಕ್ಷಣ ಇಲಾಖೆಗೆ ಇಲ್ಲಿನ ಜಾಧವ ನಗರದ ನಿವಾಸದಲ್ಲಿ ಮಾಸ್ಕ್, ಸ್ಯಾನಿಟೈಸರ್, ಕೋವಿಡ್ ಜಾಗೃತಿ ಕರಪತ್ರ ವಿತರಿಸಿದರು.
ತಾಲ್ಲೂಕಿನ ಯಮಕನಮರಡಿ ಕ್ಷೇತ್ರದ ಕಾಕತಿ, ಕಡೋಲಿ, ಹುದಲಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಒಟ್ಟು 20 ಕೇಂದ್ರಗಳಲ್ಲಿ 1269 ವಿದ್ಯಾರ್ಥಿಗಳು, 250 ಶಿಕ್ಷಕರಿಗೆ ಮಾಸ್ಕ್ , ಸ್ಯಾನಿಟೈಸರ್ ನೀಡಿದರು. ಜತೆಗೆ ಕೋವಿಡ್ ಜಾಗೃತಿ ಮೂಡಿಸುವ ಉದ್ದೇಶದಿಂದ 1519 ಕೋವಿಡ್ ಜಾಗೃತಿ ಕರಪತ್ರ ವಿತರಿಸಿದರು.
ಬೆಳಗಾವಿ ಶಿಕ್ಷಕ ಕ್ಷೇತ್ರದ ಅಧಿಕಾರಿ ಆರ್.ಪಿ.ಜುಟ್ಟಣ್ಣನವರ ಮಾತನಾಡಿ , ಶಿಕ್ಷಣ ಕ್ಷೇತ್ರಕ್ಕೆ ಹಲವಾರು ವರ್ಷಗಳಿಂದ ಜನಪ್ರಿಯ ಶಾಸಕರಾದ ಸತೀಶ್ ಜಾರಕಿಹೊಳಿ ಅವರು ತಮ್ಮದೇಯಾದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಕೋವಿಡ್ ಕಾಲದಲ್ಲಿ ಅವರ ಕೈಗೊಂಡ ಕಾರ್ಯಗಳು ಶ್ಲಾಘನೀಯ ಎಂದರು.
ಕಳೆದ ವರ್ಷವೂ ಸಹ ವಿದ್ಯಾರ್ಥಿಗಳು, ಶಿಕ್ಷಕರಿಗೆ, ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಿದ್ದರು. ಅದೇ ರೀತಿ ಈ ಬಾರಿಯೂ ಸಹ ವಿದ್ಯಾರ್ಥಿಗಳು, ಶಿಕ್ಷಕರ, ಸಿಬ್ಬಂದಿಗಳ ಸುರಕ್ಷತೆಗೆ ಮಾಸ್ಕ್ , ಸ್ಯಾನಿಟೈಸರ್ ನೀಡಿದ್ದರು. ಬರೀ ಶಿಕ್ಷಣ ಕ್ಷೇತ್ರಕ್ಕೆ ಮಾತ್ರವಲ್ಲ, ಸಮಾಜದ ಎಲ್ಲ ವರ್ಗದ ಜನರಿಗೆ ಕೋವಿಡ್ ಸಂದರ್ಭದಲ್ಲಿ ಜನರ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡಿದ್ದಾರೆ ಎಂದು ಅವರ ಕಾರ್ಯವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಜಿಪಂ.ಮಾಜಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಮಾಜಿ ಸದಸ್ಯ ಯಲ್ಲಪ್ಪ ಬುಡ್ರಿ, ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಆಡಳಿತ ಪ್ರದೀಪ ಎಂ.ಜೆ., ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಎಸ್ಟಿ ಘಟಕದ ಅಧ್ಯಕ್ಷ ರಾಮಣ್ಣ ಗುಳ್ಳಿ, ಮಲ್ಲಗೌಡ ಪಾಟೀಲ, ಸಿದ್ದಪ್ಪಾ ನಾಯಿಕ, ಮಾರುತಿ ಚೌಗಲೇ, ಬಿ.ಆರ್.ಹಿರೇಮಠ, ಸುರೇಶ್ ನಾಯಿಕ ಸೇರಿದಂತೆ ಇತರರು ಇದ್ದರು.