ನವದೆಹಲಿ (ಸೆ.01): ಬಹುನಿರೀಕ್ಷಿತ ಕರ್ನಾಟಕದ ಮೇಕೆದಾಟು ಯೋಜನೆಗೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಯೋಜನೆಗೆ ತಮಿಳುನಾಡು, ಕೇರಳ ಸೇರಿ ಎಲ್ಲಾ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಮುಂದಿನ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವ ಸಾಧ್ಯತೆ ಇದೆ.
ಹಾಗೆಯೇ ತಮಿಳುನಾಡು ಕೈಗೊಂಡಿರುವ ಗುಂಡಾರ್ ನದಿ ನೀರು ಜೋಡಣೆಗೆ ಕರ್ನಾಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಇನ್ನು ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಾಧಿಕಾರದ ಅಧ್ಯಕ್ಷ ಹಲ್ದಾರ್, ಯೋಜನೆ ಜಾರಿಗೆ ನದಿ ಪಾತ್ರದ ಇತರೆ ರಾಜ್ಯಗಳ ಸಹಮತವೂ ಪಡೆಯಬೇಕಿದೆ ಎಂದರು. ಅಲ್ಲದೆ ಈ ಬಾರಿ ಈ ವಿಷಯ ಚರ್ಚೆಗೆ ಇತರೆ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದರಿಂದ ಮುಂದೂಡಲಾಗಿದೆ ಎಂದರು.
ಗುಂಡಾರ್ ಯೋಜನೆಗೆ ಕರ್ನಾಟಕ ಆಕ್ಷೇಪ: ಈ ಯೋಜನೆಗೆ ತಮಿಳುನಾಡು ಕರ್ನಾಟಕ ರಾಜ್ಯದ ಸಹಮತ ಪಡೆದಿಲ್ಲ. ಈ ಕೂಡಲೇ ಗುಂಡಾರ್ ನದಿ ಯೋಜನೆಯನ್ನು ತಮಿಳುನಾಡು ನಿಲ್ಲಿಸಬೇಕು ಅಂಥ ಕರ್ನಾಟಕ ಆಗ್ರಹಿಸಿತು.
ಕರ್ನಾಟಕದಿಂದ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಸೇರಿ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸೂಚನೆ
ತಮಿಳುನಾಡಿಗೆ ಆಗಸ್ಟ್ ತಿಂಗಳಲ್ಲಿ ಬಿಡುವ ನೀರಿಗೆ ಆದ್ಯತೆ ನೀಡಿ ಸದ್ಯ 6ರಿಂದ 7 ಟಿಎಂಸಿ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ. ಮಂಗಳವಾರ ನವದೆಹಲಿಯಲ್ಲಿ ನಡೆದ 13ನೇ ಪ್ರಾಧಿಕಾರದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದಾರ್ ತಿಳಿಸಿದ್ದಾರೆ.
ಇಂದಿನ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗು ಪುದುಚೇರಿಗಳ ಅಧಿಕಾರಿಗಳು ಭಾಗವಹಿಸಿದ್ದರು. ಪ್ರಸ್ತುತ ನದಿಯ ನಾಲ್ಕು ಅಣೆಕಟ್ಟುಗಳಲ್ಲಿ 156 ಟಿಎಂಸಿ ನೀರು ಇದೆ. ಜೂನ್, ಜುಲೈ ಹಾಗು ಆಗಸ್ಟ್ ತಿಂಗಳಲ್ಲಿ ಒಟ್ಟು 86 ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕಿದ್ದು, ಈಗಾಗಲೇ 56 ಟಿಎಂಸಿ ಬಿಡುಗಡೆ ಮಾಡಲಾಗಿದೆ. ಆದರೆ ಉಳಿಕೆ 30.06 ಟಿಎಂಸಿ ನೀರು ಬಿಡಬೇಕಿದೆ ಎಂದು ಸೂಚಿಸಲಾಗಿದೆ. ಆದರೆ ಈ ಬಾರಿ ವಾಡಿಕೆಗಿಂತ ಶೇ.25 ರಷ್ಟುಮಳೆ ಕೊರತೆಯಾಗಿದ್ದು, ಅದನ್ನು ಸಮದೂಗಿಸಿಕೊಂಡು ಆಗಸ್ಟ್‌ನಲ್ಲಿ ಬಿಡುವ ನೀರಿಗೆ ಆದ್ಯತೆ ನೀಡಿದೆ ಎಂದಾಗಿ ಪ್ರಾಧಿಕಾರ ಸೂಚಿಸಿದೆ. ಅದರಂತೆ ಸೆಪ್ಟೆಂಬರ್ ತಿಂಗಳಲ್ಲಿ 6 ರಿಂದ 7 ಟಿಎಂಸಿ ನೀರು ಕರ್ನಾಟಕ ಬಿಡಬೇಕಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.