ಬೆಳಗಾವಿ: ತನ್ನ 15 ವರ್ಷದ ಮಗನ ಜೀವ ಉಳಿಸಲು ತನ್ನ ಕಿಡ್ನಿಯನ್ನೇ ದಾನಮಾಡಿದ ತಾಯಿ ಈಗ ಆರ್ಥಿಕ ನೆರವು ನೀಡುವ ದಾನಿಗಳತ್ತ ಮುಖ ಮಾಡಿದ್ದಾರೆ. ದುಡಿದು ಮಗನನ್ನು ಸಲಹುವ ತಾಯಿಯ ಸಂಕಟಕ್ಕೀಗ ಮಾನವೀಯ ನೆಲೆಯಲ್ಲಿ ನೆರವಿನ ಹಸ್ತ ಚಾಚುವ ಉದಾರ ಹೃದಯಿಗಳ ಅಗತ್ಯ ಬಂದೊದಗಿದೆ.
ಅಥಣಿ ತಾಲೂಕಿನ ಮದಬಾವಿಯ ಪ್ರಜ್ವಲ್ ಮಹಾದೇವ ನಿವಾಲಗಿ 9ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾವಂತ ಬಾಲಕ. ಈತ ಶೋಭಾ- ಮಹಾದೇವ ದಂಪತಿಯ ಏಕಮಾತ್ರ ಪುತ್ರ. ಶೋಭಾ ಅವರು 2 ತಿಂಗಳ ಗರ್ಭಿಣಿಯಾಗಿದ್ದಾಗ ಪತಿ ಮಹಾದೇವ ನಿವಳಗಿ ಇಹಲೋಕ ತ್ಯಜಿಸಿದ್ದರು. ಮಗನನ್ನು ಸಲಹಲು ಶೋಭಾ ಅವರು ರೈತ ಕೂಲಿಕಾರ್ಮಿಕರಾಗಿ ದುಡಿಯುತ್ತ ಬಂದಿದ್ದಾರೆ.
ಆದರೆ ಕೆಲವೊಮ್ಮೆ ‘ದೇವೋ ದುರ್ಬಲ ಘಾತುಕಃ’ ಎಂಬ ಉಕ್ತಿಗೆ ಉದಾಹರಣೆಯಾಗಿದ್ದಾರೆ ಈ ತಾಯಿ- ಮಗ. ಶಾಲೆಯಲ್ಲೂ ಪ್ರತಿಭಾವಂತ ಎನಿಸಿಕೊಂಡ ಪ್ರಜ್ವಲ್ ಗೆ 2018ರ ಜುಲೈನಲ್ಲಿ ಮಿರಜ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದಾಗ ಎರಡೂ ಕಿಡ್ನಿಗಳು ವಿಫಲವಾಗಿರುವುದು ಪತ್ತೆಯಾಯಿತು.
ಈಚೆಗೆ ಬಾಲಕನನ್ನು ಡಾ.ಪ್ರಭಾಕರ ಕೋರೆ ಚಾರಿಟೇಬಲ್ ಆಸ್ಪತ್ರೆಯ ಪೀಡಿಯಾಟ್ರಿಕ್ ನೆಫ್ರಾಲಜಿ ವಿಭಾಗದಲ್ಲಿ ಬಾಲಕನನ್ನು ದಾಖಲಿಸಿ ತಪಾಸಣೆ ನಡೆಸಲಾಯಿತು. ತಾಯಿಯ ರಕ್ತದ ಗುಂಪು ಮಗನೊಂದಿಗೆ ಹೊಂದಾಣಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಪೀಡಿಯಾಟ್ರಿಕ್ ನೆಫ್ರಾಲಜಿಸ್ಟ್ ಡಾ. ಮಹಾಂತೇಶ ವಿ. ಪಾಟೀಲ್ ಅವರು ಮಾರ್ಚ್ 9 ರಂದು ತಾಯಿಯ ಮೂತ್ರಪಿಂಡ ಪಡೆದು ಬಾಲಕನಿಗೆ ಯಶಸ್ವಿಯಾಗಿ ಕಸಿ ಚಿಕಿತ್ಸೆ ನೆರವೇರಿಸಿದ್ದಾರೆ.
ಜೆಎನ್‌ಎಂಸಿ ವೈದ್ಯಕೀಯ ಕಾಲೇಜಿನ ಡಾ. ಎನ್.ಎಸ್.ಮಹಾಂತಶೆಟ್ಟಿ ಅವರ ನೆರವಿನೊಂದಿಗ ಪ್ರಭಾಕರ ಕೋರೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ಉಚಿತ ಹಿಮೋಡಯಾಲಿಸಿಸ್, ದುಬಾರಿ ಔಷಧಿಗಳನ್ನು ನೀಡಲಾಗಿದೆ. ಪೀಡಿಯಾಟ್ರಿಕ್ ನೆಫ್ರಾಲಜಿಸ್ಟ್ ಡಾ. ಮಹಾಂತೇಶ ವಿ. ಪಾಟೀಲ್, ಮೂತ್ರಶಾಸ್ತ್ರಜ್ಞ ಡಾ.ಆರ್.ಬಿ.ನೇರ್ಲಿ ಮತ್ತು ಡಾ.ವಿಕ್ರಮಪ್ರಭ, ಅರಿವಳಿಕೆ ತಜ್ಞ ಡಾ.ರಾಜೇಶ್ ಮಾನೆ, ನಾಳೀಯ ಶಸ್ತ್ರಚಿಕಿತ್ಸಕ ಡಾ.ರಿಚರ್ಡ್ ಸಾಲ್ಡಾನಾ ಅವರ ತಂಡ ಯಶಸ್ವಿ ಕಸಿ ನೆರವೇರಿಸಿದೆ. ಸಧ್ಯ ಬಾಲಕನ ಆರೋಗ್ಯವೇನೋ ಸ್ಥಿರವಾಗಿದೆ. ಮಗು ಪ್ರಸ್ತುತ ಉತ್ತಮವಾಗಿದೆ. ಆದರೆ ಚಿಕಿತ್ಸೆ, ಔಷಧ ಇತ್ಯಾದಿಗಳಿಗೆ ತಗುಲಿದ ಹೆಚ್ಚಿನ ಸುಮಾರು 5ರಿಂದ 7 ಲಕ್ಷ ರೂ. ಭರಿಸಲು ಶೋಭಾ ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ದಾನಿಗಳು ಈ ತಾಯಿ- ಮಗನಿಗೆ ನೆರವಾಗುವ ಅಗತ್ಯವಿದೆ.
ನೆರವು ನೀಡಲು ಬಯಸುವವರು – ಶೋಭಾ ಮಹಾದೇವ ನಿವಳಗಿ ಅವರನ್ನು (ಮೊ.9611467167) ಸಂಪರ್ಕಿಸಬಹುದು.
ಅವರ ಬ್ಯಾಂಕ್ ಡಿಟೇಲ್ಸ್:
Mrs SHOBHA MADEV NIVALAGI
KVG Bank
AC no: 17217089504
IFSC Code : KVGB0002007
 Laxmi News 24×7
Laxmi News 24×7
				 
		 
						
					 
						
					