ಬೆಂಗಳೂರುದೇಶದ ಗಡಿ ಭಾಗಗಳಲ್ಲಿ ಬಂದೂಕು ಹಿಡಿದು ಕಾವಲು ಕಾಯುವ ಸೈನಿಕರನ್ನು ಅವರ ಸೇವಾ ನಿವೃತ್ತಿ ನಂತರ ಕೃಷಿಯತ್ತ ಸೆಳೆಯಲು ಕೇಂದ್ರ ಸರ್ಕಾರ ‘ಜವಾನ್ ಕಿಸಾನ್’ ಯೋಜನೆ ಜಾರಿಗೆ ನಿರ್ಧರಿಸಿದೆ. ಈಗ ಕೃಷಿಯಿಂದ ವಿಮುಖವಾಗುವವರ ಸಂಖ್ಯೆ ಹೆಚ್ಚುತ್ತಿದೆ.
ಕೃಷಿ ಲಾಭದಾಯಕ ಅಲ್ಲ ಎಂಬ ಕಾರಣಕ್ಕೆ ಹಳ್ಳಿಯ ರೈತರು ಪಟ್ಟಣ ಸೇರಿ ಬೇರೆ ಉದ್ಯೋಗ ನಡೆಸುತ್ತಿದ್ದಾರೆ. ಇಂತಹ ಬೆಳವಣಿಗೆ ಮಧ್ಯೆಯೇ ನಿವೃತ್ತ ಸೈನಿಕರನ್ನು ಕೃಷಿ ಉದ್ಯಮದಾರರನ್ನಾಗಿಸಲು ವಿನೂತನ ಪ್ರಯತ್ನಕ್ಕೆ ರಕ್ಷಣಾ ಇಲಾಖೆ ಮುಂದಾಗಿದೆ. ಈಗಾಗಲೇ ರಕ್ಷಣಾ ಸಚಿವಾಲಯ ಹಾಗೂ ‘ಮ್ಯಾನೇಜ್’ ಸಂಸ್ಥೆ ಹಲವು ಸುತ್ತಿನ ಸಭೆ ನಡೆಸಿ ಯೋಜನೆ ಜಾರಿಗೆ ನಿರ್ಧರಿಸಿವೆ. ರಕ್ಷಣಾ ಸಚಿವರಿಗೂ ಯೋಜನೆಯ ರೂಪುರೇಷೆ ವಿವರಿಸಿ ಒಪ್ಪಿಗೆ ಪಡೆಯಲಾಗಿದೆ.
ನಿವೃತ್ತ ಸೈನಿಕರಿಗೆ ಉದ್ಯೋಗದ ಬಾಗಿಲು ತೆರೆಯುವ ಕಾರಣದಿಂದಾಗಿ ರಕ್ಷಣಾ ಸಚಿವಾಲಯ ಯೋಜನಾ ವೆಚ್ಚವನ್ನು ಭರಿಸಲಿದೆ. ಜತೆಗೆ ಸೈನಿಕರು ನಿವೃತ್ತಿಯಾಗುತ್ತಿದ್ದಂತೆ ಕೃಷಿ ಉದ್ಯಮದಾರರಾಗುವ ಆಸಕ್ತರ ಪಟ್ಟಿಯನ್ನು ರಕ್ಷಣಾ ಸಚಿವಾಲಯವೇ ಸಿದ್ಧಪಡಿಸಲಿದೆ. ಈ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ಇಳಿಸುವ ಹೊಣೆಯನ್ನು ರಾಷ್ಟ್ರೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್)ನ ಅಂಗಸಂಸ್ಥೆಯಾದ ಹೈದರಾಬಾದ್ನಲ್ಲಿರುವ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣೆ ಸಂಸ್ಥೆ (ಮ್ಯಾನೇಜ್) ವಹಿಸಿದೆ.
ನಿವೃತ್ತ ಸೈನಿಕರಿಗೆ ಕೃಷಿಯ ವಿವಿಧ ಹಂತಗಳನ್ನು 4 ತಿಂಗಳ ಅವಧಿಯಲ್ಲಿ ತರಬೇತಿ ನೀಡಲಾಗುತ್ತದೆ. ಬಿತ್ತನೆ, ಬೆಳೆ ವೈವಿಧ್ಯ, ಕೊಯ್ಲೋತ್ತರ ಚಟುವಟಿಕೆ, ಮಾರುಕಟ್ಟೆ ಜ್ಞಾನ, ಕೃಷಿ ಯಾಂತ್ರೀಕರಣ, ಸಂಸ್ಕರಣೆ, ಮೌಲ್ಯವರ್ಧನೆ ಇತ್ಯಾದಿ ಅಂಶಗಳ ಕುರಿತು ತಜ್ಞರು, ಪರಿಣಿತರಿಂದ ಮಾರ್ಗದರ್ಶನ ನೀಡಲಾಗುತ್ತದೆ. ಆ ಬಳಿಕ ಕೃಷಿ ಉದ್ಯಮದಾರರಾಗಿ ಕಾರ್ಯನಿರ್ವಹಿಸಲು ಯೋಜನೆ ಸಿದ್ಧಪಡಿಸಿ ಅದನ್ನು ಎಲ್ಲಿ, ಹೇಗೆ ಅನುಷ್ಠಾನಕ್ಕೆ ತರಬೇಕೆಂಬುದನ್ನು ಆಖೈರು ಮಾಡಿದ್ದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ಉದ್ಯಮ ಆರಂಭಿಸಿದ ಬಳಿಕವೂ ಸಲಹೆ-ಸೂಚನೆ ನೀಡುವ ವ್ಯವಸ್ಥೆ ಇರಲಿದೆ.
ಕೃಷಿಯಲ್ಲಿ ತೊಡಗುವವರಿಗೆ ಶಿಸ್ತು, ಶ್ರದ್ಧೆ, ಪ್ರಾಮಾಣಿಕವಾಗಿ ದುಡಿಯುವ ಗುಣಗಳು ಇರಬೇಕು. ಇವು ಸೈನಿಕರಲ್ಲಿ ಕಂಡುಬರುವ ಕಾರಣ ನಿವೃತ್ತಿ ನಂತರ ಅವರನ್ನು ಕೃಷಿ ಉದ್ಯಮದಾರರನ್ನಾಗಿಸುವುದು ಸುಲಭ. ಕೃಷಿ ಕಾಳಜಿ ಉಳ್ಳ ಆಯ್ದ ನಿವೃತ್ತ ಸೈನಿಕರಿಗೆ ಶೀಘ್ರ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ.