ಧಾರವಾಡ : ಹಿರಿಯ ಐಎಎಸ್ ಅಧಿಕಾರಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾದ ಘಟನೆ ತಾಲೂಕಿನ ಯರಿಕೊಪ್ಪ ಬಳಿ ಹು-ಧಾ ಬೈಪಾಸ್‌ನಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.
ಅಧಿಕಾರಿ ಜೊತೆ ಅವರ ಕುಟುಂಬದವರು ಪ್ರಯಾಣಿಸುತ್ತಿದ್ದರು. ಆದರೆ, ಅಚ್ಚರಿಯ ರೀತಿಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಐಎಎಸ್ ಅಧಿಕಾರಿ ವಿಜಯ ಮಹಾಂತೇಶ ದಾನಮ್ಮನರ ಅವರ ಕಾರು ಪಲ್ಟಿಯಾಗಿದ್ದು, ಅವರ ಜೊತೆ ಪತ್ನಿ ಶ್ವೇತಾ, ಮಕ್ಕಳಾದ ತನ್ವಿ, ವಿಹಾನ್, ಮಾವ ಗಂಗಾಧರ, ಸಂಬಂಧಿ ಪ್ರವೀಣಕುಮಾರ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಕಾರು ಚಾಲಕ ಬಸವರಾಜ ಕೂಡ ಗಾಯಗೊಂಡಿದ್ದು, ಗಾಯಗೊಂಡ ಎಲ್ಲರನ್ನೂ ಸಮೀಪದ ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುದ್ದಿ ತಿಳಿದ ಕೂಡಲೇ ಗ್ರಾಮೀಣ ಸಿಪಿಐ ಮಂಜುನಾಥ ಕುಸುಗಲ್ಲ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎದುರಿನಿಂದ ಬಂದ ವಾಹನ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಎಂದು ಗೊತ್ತಾಗಿದೆ.
ಈ ಹಿಂದೆ ದಾವಣಗೆರೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ವಿಜಯಮಹಾಂತೇಶ ಬಿ.ದಾನಮ್ಮನವರ ಅವರ ವರ್ಗಾವಣೆ ಆದೇಶ ನಿನ್ನೆಯಷ್ಟೇ ಬಂದಿತ್ತು. ಈ ಹಿನ್ನೆಲೆಯಲ್ಲಿ ಡಾವಣಗೆರೆಯಿಂದ ವಿಜಯಪುರಕ್ಕೆ ಅಧಿಕಾರ ವಹಿಸಿಕೊಳ್ಳಲು ಅವರು ತೆರಳುತ್ತಿದ್ದ ಸಮಯದಲ್ಲಿಯೇ ಈ ದುರ್ಘಟನೆ ನಡೆದಿದೆ.
