ಇನ್ಮುಂದೆ ತಾಲೂಕು ಕಚೇರಿಗಳ ‘ಭೂಮಿ’ ಕೇಂದ್ರಗಳಲ್ಲಿ ಪಹಣಿ(ಆರ್ಟಿಸಿ) ಎಂಟ್ರಿಯಲ್ಲಿ ತಪುಪಗಳಾದಲ್ಲಿ ಅದಕ್ಕೆ ಅಧಿಕಾರಿಗಳೇ ಹೊಣೆಯಾಗುತ್ತಾರೆ! ಜ.14ರಂದು ರಾಜ್ಯ ಭೂಮಾಪನ ಇಲಾಖೆ ಮತ್ತು ಭೂಮಿ ಉಸ್ತುವಾರಿ ಕೋಶದಿಂದ ಜಿಲ್ಲಾಧಿಕಾರಿಗಳಿಗೆ ಹೊರಡಿಸಲಾಗಿರುವ ಮಹತ್ವದ ಸುತ್ತೋಲೆಯಲ್ಲಿ ಇಂಥದ್ದೊಂದು ಆದೇಶ ಪ್ರಕಟವಾಗಿದೆ.
ಅಧಿಕಾರಿಗಳ ಕಣ್ತಪ್ಪು ಹಾಗೂ ಬೇಜವಾಬ್ದಾರಿಯಿಂದ ಪಹಣಿಯಲ್ಲಿ ಸಾಗುವಳಿದಾರರ ಹೆಸರು ಇನ್ನಿತರ ಅಂಶಗಳ ತಪ್ಪು ದಾಖಲಾತಿ ಅಥವಾ ರದ್ದು ಸಾಮಾನ್ಯ. ಈ ತಪ್ಪನ್ನು ಸರಿಪಡಿಸಲು ಸಾರ್ವಜನಿಕರು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಕಾಲಹರಣ ಮಾಡುತ್ತಿರುವ ಪ್ರಕರಣಗಳೇ ಅಧಿಕವಾಗಿದೆ.
ಆದೇಶದಲ್ಲೇನಿದೆ?: ಪಹಣಿ ಕಾಲಂ ನಂ.12(2)ರಲ್ಲಿ ಸಾಗುವಳಿದಾರರು, ಕಲ್ಟಿವೇಟರ್ ಹೆಸರು ದಾಖಲಿಸಲು, ತಪ್ಪಾಗಿ ದಾಖಲಾಗಿರುವ ಬಗ್ಗೆ ದೂರು ಹೆಚ್ಚುತ್ತಿದೆ. ಭೂಮಿ ತಂತ್ರಾಂಶದ ದಾಖಲೆ ಮಹತ್ವದ್ದಾಗಿರುವುದರಿಂದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ದಾಖಲೆ ಪರಿಶೀಲಿಸಿ ಜಾಗರೂಕತೆಯಿಂದ ಪಹಣಿ ದಾಖಲಿಸುವಂತೆ ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರರಿಗೆ ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಆದ್ದರಿಂದ ದಾಖಲೆ ಪರಿಶೀಲಿಸಿ ಜಾಗರೂಕತೆಯಿಂದ ಪಹಣಿ ದಾಖಲಿಸುವಂತೆ ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರರಿಗೆ ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಕ್ರಮದ ಪ್ರಸ್ತಾಪವಿಲ್ಲ: ಲೋಪ ಎಸಗುವಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಹೇಳಲಾಗಿದ್ದರೂ ಯಾವ ಕ್ರಮಕೈಗೊಳ್ಳಲಾಗುವುದೆಂಬ ಬಗ್ಗೆ ಉಲ್ಲೇಖವಿಲ್ಲ.
17 ಸಾವಿರ ತಿದ್ದುಪಡಿ ಕೇಸ್: ಅಧಿಕೃತ ಮಾಹಿತಿಯಂತೆ ರಾಜ್ಯದಲ್ಲಿ 17,382 ಆರ್ಟಿಸಿ ತಿದ್ದುಪಡಿ ಪ್ರಕರಣಗಳು ಕಂದಾಯ ಇಲಾಖೆಯ ವಿವಿಧ ಉಪವಿಭಾಗೀಯ ಅಧಿಕಾರಿಗಳ ಕೋರ್ಟ್ಗಳಲ್ಲಿ ವಿಚಾರಣಾ ಹಂತದಲ್ಲಿವೆ. ಇದರಲ್ಲಿ ಶೇ.99 ಪ್ರಕರಣ ತಾಲೂಕು ‘ಭೂಮಿ’ ಕೇಂದ್ರದ ಅಧಿಕಾರಿಗಳ ಕಣ್ತಪ್ಪು ಹಾಗೂ ಬೇಜವಾಬ್ದಾರಿಯಿಂದ ನಡೆದಿದೆ.
ಸರಿಪಡಿಸಲು ಕನಿಷ್ಠ 3 ತಿಂಗಳು: ಜಾಗ ಖರೀದಿ, ಮಾರಾಟ, ಖಾತೆ ಮಾಡಿಸುವ ಸಂದರ್ಭ ನೋಂದಣಿ ಪತ್ರದ ಆಧಾರದಂತೆ ತಹಸೀಲ್ದಾರ್ ಮೂಲಕ ಗ್ರಾಮಕರಣಿಕರ ಹೇಳಿಕೆ ದಾಖಲಿಸಿ ಪಹಣಿ ದಾಖಲೆ ನಮೂದಿಸಲು ದಾಖಲೆ ‘ಭೂಮಿ’ ಕೇಂದ್ರಕ್ಕೆ ತಲುಪುತ್ತವೆೆ. ಈ ಅಧಿಕಾರಿಗಳು ಪಹಣಿಗೆ ದಾಖಲೆ ನಮೂದಿಸುವ ಸಂದರ್ಭ ಕೆಲವೊಮ್ಮೆ ಹೆಸರು, ತಂದೆ ಹೆಸರು, ವಿಸ್ತೀರ್ಣ, ಹಿಸ್ಸಾ ಸಂಖ್ಯೆ ಸಹಿತ ಹಲವು ದಾಖಲೆಗಳನ್ನು ತಪ್ಪುತಪ್ಪಾಗಿ ನಮೂದಿಸುತ್ತಾರೆ. ಇದನ್ನು ಸರಿಪಡಿಸಲು ಉಪವಿಭಾಗೀಯ ಅಧಿಕಾರಿಯಿಂದ ‘ದುರಸ್ತಿ’ ಆದೇಶ ಪಡೆಯಬೇಕಾಗುತ್ತದೆ. ಇದಕ್ಕೆ 3 ತಿಂಗಳ ಸಮಯ ಬೇಕಾಗುತ್ತದೆ.
ಪಹಣಿಯಲ್ಲಿ ದಾಖಲೆಗಳನ್ನು ತಪ್ಪಾಗಿ ನಮೂದಿಸುವ ಪ್ರಕರಣ ಹೆಚ್ಚಾಗುತ್ತಿದ್ದು, ಇದರಿಂದ ಜನರಿಗೆ ತೊಂದರೆ ಯಾಗುತ್ತಿರುವ ಬಗ್ಗೆ ದೂರು ಬರುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
| ಆರ್. ಅಶೋಕ್ ಕಂದಾಯ ಸಚಿವ
ಆರ್ಟಿಸಿಯಲ್ಲಿ ಜಾಗದ ವಿಸ್ತೀರ್ಣ ಡಬಲ್ ಎಂಟ್ರಿಯಾಗಿದ್ದರಿಂದ ತಿದ್ದುಪಡಿಗಾಗಿ ಎಸಿ ಕೋರ್ಟ್ಗೆ ಅಪೀಲು ಸಲ್ಲಿಸಿದ್ದೆ. 3 ಬಾರಿ ವಿಚಾರಣೆ ನಡೆಸಿದ ಬಳಿಕ ತಿದ್ದುಪಡಿಗೆ ಆದೇಶವಾಗಿದೆ.