ಈ ಬಾರಿ ಕೋವಿಡ್ ಸೋಂಕು ಹರಡುವಿಕೆ ಭೀತಿ ಹಾಗೂ ಚುನಾವಣಾ ಪ್ರಕ್ರಿಯೆಗಳ ಮಧ್ಯೆಯೂ ವಿಧಾನಮಂಡಲದ ಚಳಿಗಾಲ ಅಧಿವೇಶನ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಸಮರ್ಪಕ ವಸತಿ, ಸಾರಿಗೆ ಹಾಗೂ ಊಟೋಪಾಹಾರ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ಜರುಗಿದ ಗಣ್ಯರು, ಉನ್ನತ ಅಧಿಕಾರಿಗಳು ಮತ್ತು ಹೋಟೆಲ್ ಗಳ ಸಂಪರ್ಕಾಧಿಕಾರಿಗಳ (ಲೈಸನ್ ಅಧಿಕಾರಿಗಳ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಯಾ ಸಂದರ್ಭಕ್ಕೆ ಅನುಗುಣವಾಗಿ ಸರಕಾರ ಪ್ರಕಟಿಸುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆಯಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
ಅಧಿವೇಶನದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿರಬೇಕು. ಆರ್.ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕೂಡ ಹೊಂದಿರಬೇಕಾಗುತ್ತದೆ.
ಅದೇ ರೀತಿ ಅಧಿವೇಶನದ ಕೆಲಸಕಾರ್ಯಗಳಿಗೆ ನಿಯೋಜಿತ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಒಂದು ವೇಳೆ ಪಡೆದಿರದಿದ್ದರೆ ಅಂತಹವರಿಗೆ ಕೂಡಲೇ ಲಸಿಕೆ ನೀಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಿಷ್ಟಾಚಾರ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ:
ಸಚಿವರುಗಳು, ಇಲಾಖೆಯ ಉನ್ನತ ಅಧಿಕಾರಿಗಳು ಬಂದಾಗ ಶಿಷ್ಟಾಚಾರ ಪಾಲಿಸುವುದು ಆಯಾ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಹೊಣೆಗಾರಿಕೆಯಾಗಿದೆ. ಆದ್ದರಿಂದ ಯಾವುದೇ ರೀತಿಯ ಲೋಪ ಅಥವಾ ನಿರ್ಲಕ್ಷ್ಯ ಉಂಟಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಸೂಚನೆ ನೀಡಿದರು.
ವಸತಿ ಹಾಗೂ ಊಟೋಪಹಾರಕ್ಕೆ ಸಂಬಂಧಿಸಿದಂತೆ ಅಧಿವೇಶನದ ಮೊದಲ ಎರಡು ದಿನಗಳ ಕಾಲ ಸ್ವಲ್ಪಮಟ್ಟಿಗೆ ಅನಾನುಕೂಲ ಎನಿಸಬಹುದು. ಆದರೆ ಅದಕ್ಕೆ ಆಸ್ಪದ ನೀಡದಂತೆ ಸಮಿತಿಯ ಉಸ್ತುವಾರಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದರು.
ಊಟೋಪಾಹಾರದ ಗುಣಮಟ್ಟ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು.
ಸಮರ್ಪಕ ಸಾರಿಗೆ ವ್ಯವಸ್ಥೆಗೆ ಕ್ರಮ:
ಅಧಿವೇಶನಕ್ಕೆ ಆಗಮಿಸುವ ಸಚಿವರುಗಳು, ಪ್ರಧಾನಕಾರ್ಯದರ್ಶಿಗಳು, ಉನ್ನತ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಶಿಷ್ಟಾಚಾರದ ಪ್ರಕಾರ ಸಮರ್ಪಕ ಸಾರಿಗೆ ವ್ಯವಸ್ಥೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶಕುಮಾರ್ ವಿವರಿಸಿದರು.
ಪ್ರವಾಸ ಕಾರ್ಯಕ್ರಮ ಪಟ್ಟಿಯನ್ನು ಆಧರಿಸಿ ವಸತಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಆದ್ದರಿಂದ ಕಡ್ಡಾಯವಾಗಿ ಪ್ರವಾಸ ಕಾರ್ಯಕ್ರಮ ಪಟ್ಟಿ ಲಭಿಸಿದ ತಕ್ಷಣವೇ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಆಯಾ ಸಂಪರ್ಕಾಧಿಕಾರಿಗಳ ಹೊಣೆಗಾರಿಕೆಯಾಗಿದೆ. ಆದ್ದರಿಂದ ಅವರೇ ಸಮನ್ವಯ ಸಾಧಿಸಿಕೊಂಡು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.
ಕೋವಿಡ್ ಸೋಂಕು, ಪರಿಷತ್ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವುದರಿಂದ ಇವೆಲ್ಲವೂಗಳ ಮಧ್ಯೆಯೂ ಅಧಿವೇಶನ ಕೆಲಸಕಾರ್ಯಗಳಿಗೆ ಧಕ್ಕೆಯಾಗದಂತೆ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಬೇಕಿದೆ. ಆದಾಗ್ಯೂ ಇದನ್ನು ಗಮನದಲ್ಲಿಟ್ಟುಕೊಂಡು ನಾವು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶಕುಮಾರ್ ತಿಳಿಸಿದರು.
ಸಚಿವರು ಹಾಗೂ ಉನ್ನತ ಅಧಿಕಾರಿಗಳೂ ಸೇರಿದಂತೆ ಎಲ್ಲ ಸಂಪರ್ಕಾಧಿಕಾರಿಗಳ ಪ್ರತ್ಯೇಕ ವಾಟ್ಸಾಪ್ ಗ್ರುಪ್ ಮಾಡುವ ಮೂಲಕ ತುರ್ತು ಮಾಹಿತಿ ವಿನಿಮಯಕ್ಕೆ ಅನುಕೂಲವಾಗಲಿದೆ. ಊಟ, ವಸತಿ ಹಾಗೂ ಸಾರಿಗೆ ಸೇರಿದಂತೆ ಏನಾದರೂ ಸಮಸ್ಯೆಗಳು ಎದುರಾದರೆ ತಕ್ಷಣವೇ ಅದನ್ನು ಪರಿಹರಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶಕುಮಾರ್ ತಿಳಿಸಿದರು.
ವಸತಿ ವ್ಯವಸ್ಥೆ: ಪ್ರತಿದಿನ ಪರಿಶೀಲನೆಗೆ ಸೂಚನೆ:
ಅಧಿವೇಶ ಸಂದರ್ಭದಲ್ಲಿ ಸಚಿವರು, ಶಾಸಕರು ಮತ್ತಿತರ ಗಣ್ಯರಿಗೆ ಹಾಗೂ ಉನ್ನತಮಟ್ಟದ ಅಧಿಕಾರಿಗಳಿಗೆ ಮೀಸಲಿರಿಸಿದ ಕೊಠಡಿಗಳನ್ನು ಕಡ್ಡಾಯವಾಗಿ ಅವರಿಗೆ ಮಾತ್ರ ಒದಗಿಸಬೇಕು. ಒಂದು ವೇಳೆ ಅವರು ಬಾರದಿದ್ದರೆ ಅಥವಾ ಒಂದೆರಡು ದಿನಗಳ ಬಳಿಕ ಹಿಂದಿರುಗಿದರೆ ಆ ಬಗ್ಗೆ ವಸತಿ ಸಮಿತಿಗೆ ಸಂಪರ್ಕಾಧಿಕಾರಿಗಳು ಮಾಹಿತಿಯನ್ನು ನೀಡಬೇಕು.
ಹೋಟೆಲ್ ಗಳಿಗೆ ನಿಯೋಜಿಸಿದ ಸಂಪರ್ಕಾಧಿಕಾರಿಗಳು ಪ್ರತಿದಿನ ಎರಡು ಬಾರಿ ಕಡ್ಡಾಯವಾಗಿ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಅಧಿವೇಶನದ ವಿಶೇಷ ಅಧಿಕಾರಿ ಡಾ.ಸುರೇಶ್ ಇಟ್ನಾಳ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಸಚಿವರು ಹಾಗೂ ಉನ್ನತಾಧಿಕಾರಿಗಳ ಜತೆ ಆಗಮಿಸುವ ಸಿಬ್ಬಂದಿಯ ಊಟೋಪಾಹಾರದ ವ್ಯವಸ್ಥೆಯನ್ನು ಆಯಾ ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂದು ತಿಳಿಸಿದರು.
ವಸತಿ ಹಂಚಿಕೆಗೆ ಸಂಬಂಧಿಸಿದ ಏನೇ ಸಮಸ್ಯೆ ಎದುರಾದರೆ ಆಯಾ ಸಮಿತಿಯ ಉಸ್ತುವಾರಿ ಅಧಿಕಾರಿಗಳ ಗಮನಕ್ಕೆ ತರಬೇಕು.
ವಸತಿ ಕೊಠಡಿಗಳ ಸ್ವಚ್ಛತೆಯ ಕುರಿತು ಸಂಬಂಧಿಸಿದ ಅಧಿಕಾರಿಗಳು ಮುಂಚಿತವಾಗಿ ಪರಿಶೀಲಿಸಬೇಕು ಎಂದು ಹೇಳಿದರು.
ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಈಗಾಗಲೇ ತಂಡಗಳನ್ನು ನಿಯೋಜಿಸಲಾಗಿರುತ್ತದೆ.
ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ, ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಸೇರಿದಂತೆ ಎಲ್ಲ ಸಮಿತಿಗಳ ಉಸ್ತುವಾರಿ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.