Breaking News

ಮುಳ್ಳೂರು ಘಾಟ್‌ ಮಾರ್ಗದಲ್ಲೆ ಪ್ರಯಾಣ: ಆತಂಕ

Spread the love

ರಾಮದುರ್ಗ (ಬೆಳಗಾವಿ ಜಿಲ್ಲೆ): ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ವಾಹನಗಳು ಅಪಾಯಕಾರಿಯಾದ ರಸ್ತೆಯಲ್ಲೇ ಸಂಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

‘ಮೃತ್ಯುಕೂಪ’ ಎಂದೇ ಅಪಖ್ಯಾತಿ ಹೊಂದಿದ್ದ ಇಲ್ಲಿನ ಮುಳ್ಳೂರು ಘಾಟ್‌ನಲ್ಲಿ ವಾಹನಗಳಲ್ಲಿ ಹೋಗುವವರು ಕೈಯಲ್ಲಿ ಜೀವ ಹಿಡಿದುಕೊಂಡೆ ಪ್ರಯಾಣಿಸಬೇಕಿತ್ತು. ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಪಘಾತಗಳಾಗಿ ಸಾವು-ನೋವು ಸಂಭವಿಸಿರುವ ಘಾಟ್ ಸುಧಾರಣೆಗೆ ಸಾಕಷ್ಟು ಹೋರಾಟಗಳು ನಡೆದಿದ್ದವು. ಹೊಸ ಮಾರ್ಗ ನಿರ್ಮಿಸುವಂತೆ ಬೇಡಿಕೆ ಇತ್ತು.

ಹಿಂದಿನ ಶಾಸಕ ಅಶೋಕ ಪಟ್ಟಣ ಅವರ ಪ್ರಯತ್ನದಿಂದ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ದೊರೆತು ಹೊಸ ಮಾರ್ಗ ನಿರ್ಮಿಸಲಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೆ-ಶಿಪ್ ಯೋಜನೆಯಲ್ಲಿ ಸುಗಮ ಸಂಚಾರಕ್ಕೆ ನಿರ್ಮಿಸಿದ ಹೊಸ ಮಾರ್ಗ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗಿದೆ ಎಂದು ಆರೋಪಿಸಲಾಗುತ್ತಿದೆ.

ಕೆಎಸ್‌ಆರ್‌ಟಿಸಿ ಬಸ್, ಖಾಸಗಿ ವಾಹನಗಳು ಅನೇಕ ಸಾವು-ನೋವುಗಳಿಗೆ ಕಾರಣವಾಗಿರುವ ಅದೇ ಅಪಾಯಕಾರಿ ಮುಳ್ಳೂರು ಘಾಟ್‌ನ ಹಳೆಯ ಮಾರ್ಗದ ಮೂಲಕವೇ ಸಂಚರಿಸುತ್ತಿವೆ! ಹೀಗಾಗಿ ಹೊಸ ಹಾಗೂ ಸುಗಮ ಮಾರ್ಗ ಇದ್ದರೂ ಚಾಲಕರ ಬೇಜವಾಬ್ದಾರಿ ನಡೆಯಿಂದ ಪ್ರಯಾಣಿಕರು ಘಾಟ್ ದಾಟುವವರೆಗೂ ಜೀವ ಕೈಯಲ್ಲಿ ಹಿಡಿದು ಕೂರಬೇಕಾದ ಸ್ಥಿತಿ ಮುಂದುವರಿದಿದೆ.

ಸ್ಪಂದಿಸಿದ್ದ ಅಶೋಕ:

ಹೊಸ ಮಾರ್ಗ ನಿರ್ಮಿಸಬೇಕು ಎನ್ನುವುದು ಜನರ ಬಹು ದಿನಗಳ ಬೇಡಿಕೆ ಆಗಿತ್ತು. ಸ್ಪಂದಿಸಿದ ಪಟ್ಟಣ ಅವರ ಮುತುವರ್ಜಿ ಪರಿಣಾಮ ಸರ್ಕಾರದಿಂದ ₹ 27 ಕೋಟಿ ಅನುದಾನ ತಂದಿದ್ದರು. ಹೊಸ ರಸ್ತೆ ನಿರ್ಮಾಣವಾಗಿದೆ. ಅದರಲ್ಲಿ ಹೋದರೆ ಅಂತರವು ಒಂದೂವರೆ ಕಿ.ಮೀ. ಹೆಚ್ಚಾಗುತ್ತದೆ ಎನ್ನುವ ನೆಪ ಹೇಳಿಕೊಂಡು, ಕೆಎಸ್‌ಆರ್‌ಟಿಸಿ ಹಾಗೂ ಇತರ ವಾಹನಗಳ ಚಾಲಕರು ಅಪಾಯಕಾರಿಯಾದ ಹಳೆ ಮಾರ್ಗದಲ್ಲೇ ಸಂಚರಿಸುತ್ತಿದ್ದಾರೆ.

ಹಳೆಯ ರಸ್ತೆಯ ಘಾಟ್‌ನಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನ ಅಂಗವಿಕಲರಾಗಿದ್ದಾರೆ. ಬಹಳ ತಿರುವು ಇರುವುದರಿಂದ ಭಾರೀ ವಾಹನಗಳು ತಿರುವಿನಲ್ಲಿ ನಿಯಂತ್ರಣ ತಪ್ಪಿ ಬೆಟ್ಟದ ಮೇಲಿಂದ ಬಿದ್ದ ಉದಾಹರಣಗಳಿವೆ. ಹೀಗಿದ್ದರೂ ಅದೇ ರಸ್ತೆಯಲ್ಲಿ ಪ್ರಯಾಣಿಸಲು ಆದ್ಯತೆ ಕೊಡುತ್ತಿರುವುದು ಮತ್ತು ಭಾರಿ ಅಪಘಾತದ ಜೊತೆಗೆ ಸಾವು-ನೋವಿಗೆ ಆಹ್ವಾನ ನೀಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

‘ಹಳೆಯ ರಸ್ತೆಯ ಜಾಗವನ್ನು ಅರಣ್ಯ ಇಲಾಖೆಗೆ ಮರಳಿಸಬೇಕು ಎಂಬ ಒಪ್ಪಂದ ಹೊಸ ರಸ್ತೆ ನಿರ್ಮಾಣಕ್ಕೆ ಜಾಗ ನೀಡುವಾಗ ಆಗಿತ್ತು. ಆದರೂ ತಡೆಗೋಡೆ ನಿರ್ಮಿಸಿ ಹಳೆ ರಸ್ತೆಯ ಜಾಗವನ್ನು ಅರಣ್ಯ ಇಲಾಖೆಗೆ ನೀಡುವ ಕೆಲಸ ಆಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ಈ ಅಪಾಯಕಾರಿ ಮಾರ್ಗ ಸಂಪೂರ್ಣ ಬಂದ್ ಮಾಡಬೇಕು. ಸಾವು-ನೋವುಗಳಾಗುವುದನ್ನು ತಪ್ಪಿಸಲು ಶೀಘ್ರವೇ ಕ್ರಮ ಜರುಗಿಸಬೇಕು’ ಎನ್ನುವುದು ಜನರ ಆಗ್ರಹವಾಗಿದೆ.

ಕಳವಳ ಮೂಡಿಸಿದೆ

ಜನರ ಬೇಡಿಕೆಯಂತೆ ಮುಳ್ಳೂರು ಘಾಟ್‌ನ ಹೊಸ ಮಾರ್ಗ ನಿರ್ಮಿಸಲು ಶ್ರಮ ವಹಿಸಿದ್ದೆ. ಆದರೆ, ಒಂದೂವರೆ ಕಿ.ಮೀ. ಹೆಚ್ಚಾಗುತ್ತದೆ ಎನ್ನುವ ಸಣ್ಣ ಕಾರಣಕ್ಕೆ ಭಾರಿ ವಾಹನ ಚಾಲಕರು ಅಪಾಯಕಾರಿ ರಸ್ತೆಯಲ್ಲೇ ಸಂಚರಿಸುವುದು ಕಳವಳ ಮೂಡಿಸಿದೆ.

– ಅಶೋಕ ಪಟ್ಟಣ, ಕಾಂಗ್ರೆಸ್ ಮುಖಂಡ

ಸೂಚಿಸಲಾಗುವುದು

ಬಸ್‌ಗಳು ಮುಳ್ಳೂರು ಘಾಟ್‌ನ ಹಳೆಯ ಮಾರ್ಗದಲ್ಲಿ ಸಂಚರಿಸುವುದು ಗಮನಕ್ಕೆ ಬಂದಿದೆ. ಚಾಲಕರಿಗೆ ಎಚ್ಚರಿಕೆ ನೀಡಲಾಗುವುದು. ಹೊಸ ಮಾರ್ಗದಲ್ಲಿ ಸಾಗುವಂತೆ ಸೂಚಿಸಲಾಗುವುದು.

– ವಿಜಯಕುಮಾರ ಹೊಸಮನಿ, ಎನ್‌ಡಬ್ಲ್ಯುಕೆಆರ್‌ಟಿಸಿ ಘಟಕ ವ್ಯವಸ್ಥಾಪಕ, ರಾಮದುರ್ಗ

ಮುಖ್ಯಾಂಶಗಳು

ಒಂದೂವರೆ ಕಿ.ಮೀ. ಹೆಚ್ಚಾಗುತ್ತದೆಂದು ಹಿಂದೇಟು

ಬಹಳ ಸಾವು-ನೋವು ಸಂಭವಿಸಿದೆ

ಆದರೂ ಎಚ್ಚೆತ್ತುಕೊಂಡಿಲ್ಲ


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ