ನವದೆಹಲಿ : ಮಹಾಮಾರಿಯ ಅಟ್ಟಹಾಸ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗುತ್ತಿದೆ. ಹೀಗಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿಗೆ ಕೈ ಮುಗಿದು ಮನವಿ ಮಾಡಿದ್ದಾರೆ.
ಕೇಜ್ರಿವಾಲ್ ಅವರು ಕೊರೊನಾ ಹೆಚ್ಚಾಗಿರುವ ಹತ್ತು ರಾಜ್ಯಗಳ ಸಭೆಯಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಪ್ರಧಾನಿಯಲ್ಲಿ ಮನವಿ ಮಾಡಿದ್ದಾರೆ. ದೆಹಲಿ ಪರಿಸ್ಥಿತಿ ನೋಡಿ, ನನಗೆ ನಿದ್ದೆ ಬರುತ್ತಿಲ್ಲ. ಒಂದೊಂದು ಸಾವು ನನ್ನನ್ನು ಕಾಡುತ್ತಿದೆ ಎಂದು ಗದ್ಗದಿತರಾಗಿ ಹೇಳಿದ್ದಾರೆ.
ದೆಹಲಿಯಲ್ಲಿ ಆಕ್ಸಿಜನ್ ತಯಾರಿಸುವ ಘಟಕ ಇಲ್ಲ ಎಂದ ಮಾತ್ರಕ್ಕೆ ಇದು ನಮಗೆ ತಡವಾಗಿ ಸಿಗಬೇಕು ಎಂದೇನಿಲ್ಲ. ದೆಹಲಿ ನಿವಾಸಿಗರು ನಿಮ್ಮ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಇದು ನಾನು ಸಿಎಂ ಆಗಿ ನಿಮಗೆ ಮಾಡುತ್ತಿರುವ ಮನವಿ ಎಂದು ಹೇಳಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ದೆಹಲಿಯಲ್ಲಿ ಏಳು ನೂರು ಟನ್ ಆಕ್ಸಿಜನ್ ಅವಶ್ಯಕತೆಯಿದೆ. ಆದರೆ, ಕೇಂದ್ರವು ದೆಹಲಿಗೆ 480 ಟನ್ ಮಾತ್ರ ನಿಗದಿ ಮಾಡಿದೆ. ಕಳೆದ 24 ಗಂಟೆಯಲ್ಲಿ 350 ಟನ್ ಮಾತ್ರ ದೆಹಲಿಗೆ ಬಂದಿದೆ. ಇನ್ನುಳಿದ ಆಕ್ಸಿಜನ್ ತರುತ್ತಿರುವ ಟ್ರಕ್ ಗಳನ್ನು ಹೆದ್ದಾರಿಯಲ್ಲಿಯೇ ತಡೆ ಹಿಡಿಯಲಾಗಿದೆ ಎನ್ನುವ ಮಾಹಿತಿಯಿದೆ. ನೀವು, ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.
ಒಬ್ಬೊಬ್ಬರ ಜೀವವೂ ನಮಗೆ ಬಹಳ ಮುಖ್ಯ ಎನ್ನುವ ವಿಶ್ವಾಸವನ್ನು ನಾವು ಜನರಿಗೆ ನೀಡಬೇಕಿದೆ. ತುರ್ತಾಗಿ ನಾವು ಕಾರ್ಯ ನಿರ್ವಹಿಸಬೇಕಿದೆ. ನಮಗೆ ನಿಮ್ಮ ಮಾರ್ಗದರ್ಶನ ಬೇಕಿದೆ. ನನ್ನ ರಾಜ್ಯದ ಜನರ ಸಿಎಂ ಆಗಿ ನನಗೆ ಏನೂ ಮಾಡಲು ಆಗುತ್ತಿಲ್ಲ. ದೆಹಲಿಗೆ ಆಕ್ಸಿಜನ್ ಹೊತ್ತು ತರುತ್ತಿದ್ದ ಟ್ರಕ್ ಅನ್ನು ನಿಲ್ಲಿಸಿದ ರಾಜ್ಯಗಳ ಸಿಎಂಗಳಿಗೆ ನೀವು ದೂರವಾಣಿ ಮೂಲಕ ಹೇಳಿ ಎಂದು ಮನವಿ ಮಾಡಿದ್ದಾರೆ.