Breaking News

ಕೆಲ ದಿನಗಳಲ್ಲಿ ಆರಂಭವಾಗಲಿದೆ ಜನಗಣತಿಯ ಕಾರ್ಯಕಲಾಪ

Spread the love

ದೆಹಲಿ: 2021ನೇ ಸಾಲಿನ ಜನಗಣತಿಯ ಕಾರ್ಯ ಕಲಾಪಗಳು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಎಂದು ಗೃಹ ಸಚಿವಾಲಯ ಸಂಸತ್​ ಸಮಿತಿಗೆ ತಿಳಿಸಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ 2011ರಲ್ಲಿ ನಡೆದಿತ್ತು. ಅದೇ ಪ್ರಕಾರ ಈ ವರ್ಷ ಮತ್ತೊಮ್ಮೆ ಜನಗಣತಿ ನಡೆಯಬೇಕಿತ್ತು. 2021ರ ಜನಗಣತಿಗೆ 2020ರ ಸೆಪ್ಟೆಂಬರ್​ ತಿಂಗಳಿನಿಂದಲೇ ತಯಾರಿ ಪ್ರಕ್ರಿಯೆ ಆರಂಭವಾಗಬೇಕಿತ್ತಾದರೂ, ಕೊರೊನಾ ಸೋಂಕು ಪಿಡುಗಿನಿಂದ ಜನಗಣತಿ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳು ಸ್ಥಗಿತಗೊಂಡಿದ್ದವು. ಇದೀಗ ಜನಗಣತಿಗೆ ಸಂಬಂಧಿಸಿ ಹಾಕಿಕೊಂಡ 2021-22ರಿಂದ 2024-25ರವರೆಗಿನ 5 ವರ್ಷಗಳ ಯೋಜನೆಗೆ ಕೆಲ ದಿನಗಳಲ್ಲಿ ಚಾಲನೆ ದೊರೆಯುವುದು ಖಚಿತವಾದಂತಾಗಿದೆ.

ಜನಗಣತಿಗೆ ಸಂಬಂಧಿಸಿದ ಕ್ಷೇತ್ರಕಾರ್ಯದ ರಚನೆ, ಸ್ವರೂಪ ಹೇಗೆಲ್ಲ ನಡೆಯಬೇಕು ಎಂಬ ಯೋಜನೆ ಇನ್ನೂ ಅಂತಿಮಗೊಂಡಿಲ್ಲ. ಇನ್ನೇನು ಕೆಲ ದಿನಗಳಲ್ಲಿ ಜನಗಣತಿ ನಡೆಸುವ ಸ್ವರೂಪ ಅಂತಿಮಗೊಳ್ಳಬೇಕಿದ್ದು, ಕೊರೊನಾ ಸೋಂಕಿನ ನಡುವೆಯೇ ಜನಗಣತಿ ನಡೆಸುವುದು ಸವಾಲಾಗಿದೆ.

ದೇಶದಲ್ಲಿ ಕೊರೊನಾ ಸ್ಥಿತಿಗತಿ
ದೇಶಾದ್ಯಂತ ಕೊರೊನಾ ಸೋಂಕಿನ ಎರಡನೇ ಅಲೆಯ ಭೀತಿ ಹೆಚ್ಚುತ್ತಿದ್ದು, ಸೋಂಕಿತರ ಪ್ರಮಾಣ ನಿಧಾನವಾಗಿ ಏರುಗತಿಯಲ್ಲಿ ಸಾಗಲಾರಂಭಿಸಿದೆ. ಕಳೆದ 24 ಗಂಟೆಯಲ್ಲಿ ದೇಶದ 24,492 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,14,09,831ಕ್ಕೆ ಏರಿಕೆ ಆಗಿದೆ. ಕಳೆದೊಂದು ದಿನದಲ್ಲಿ ಒಟ್ಟು 131 ಜನ ಸೋಂಕಿತರು ಸಾವಿಗೀಡಾಗುವ ಮೂಲಕ ಕೊರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 1,58,856ಕ್ಕೆ ತಲುಪಿದೆ.

ಸದ್ಯ ದೇಶದಲ್ಲಿ 2,23,432 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಆರೋಗ್ಯ ಇಲಾಖೆ ಸೋಂಕಿತರ ಮೇಲೆ ತೀವ್ರ ನಿಗಾವಹಿಸಿದೆ. ಕೊರೊನಾ ಸೋಂಕಿನಿಂದ ಈವರೆಗೆ 1,10,27,543 ಜನರು ಗುಣಮುಖರಾಗಿರುವುದು ಆಶಾದಾಯಕ ಬೆಳವಣಿಗೆ ಎಂದೆನಿಸಿದರೂ ಎರಡನೇ ಅಲೆ ಆರಂಭವಾದರೆ ಪರಿಣಾಮ ತೀವ್ರವಾಗಿರಬಹುದು ಎಂಬ ಆತಂಕವೂ ವ್ಯಕ್ತವಾಗುತ್ತಿದೆ. ಕೊರೊನಾ ಲಸಿಕೆ ವಿತರಣೆ ಆರಂಭವಾಗಿ ಎರಡು ತಿಂಗಳು ಪೂರೈಸುತ್ತಿದ್ದು, ಈವರೆಗೆ 3,29,47,432 ಡೋಸ್ ಕೊರೊನಾ ಲಸಿಕೆಯನ್ನು ನೀಡಲಾಗಿದೆ.

ಅಂತೆಯೇ ನಿನ್ನೆ ಒಂದೇ ದಿನ 8,73,350 ಕೊವಿಡ್​ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆ ಮೂಲಕ ಇದುವರೆಗೆ ಒಟ್ಟು 22,82,80,763 ಮಾದರಿಗಳನ್ನು ಪರಿಶೀಲಿಸಿದಂತಾಗಿದೆ. ಕೊವಿಡ್​ 19 ಪರೀಕ್ಷೆಯ ಬಗ್ಗೆ ಐಸಿಎಂಆರ್​ ಈ ಎಲ್ಲಾ ಮಾಹಿತಿಗಳನ್ನು ಹಂಚಿಕೊಂಡಿದ್ದು, ದೇಶದಲ್ಲಿ ಕೊರೊನಾ ಸೋಂಕು ಮತ್ತೆ ಏರುತ್ತಿರುವುದು ಸ್ಪಷ್ಟವಾಗಿದೆ. ಕೊರೊನಾ ಎರಡನೇ ಅಲೆ ಭೀತಿಯ ಬಗ್ಗೆ ಎಲ್ಲಾ ರಾಜ್ಯಗಳು ಈಗಾಗಲೇ ಕಟ್ಟೆಚ್ಚರ ವಹಿಸುತ್ತಿದ್ದು, ಮಾರ್ಚ್​ 17ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.


Spread the love

About Laxminews 24x7

Check Also

ಯತೀಂದ್ರ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ; ಲೀಡರ್ ಯಾರಾಗಬೇಕು ಅಂತಾ ಹೈಕಮಾಂಡ್ ತೀರ್ಮಾನಿಸುತ್ತೆ: ಸಿಎಂ ಸಿದ್ದರಾಮಯ್ಯ

Spread the loveಬೆಳಗಾವಿ: ಮುಂದಿನ ಉತ್ತರಾಧಿಕಾರಿ ಸತೀಶ್​ ಜಾರಕಿಹೊಳಿ ಎಂದು ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ. ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ