ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಶಾಸಕ ರೋಷನ್ ಬೇಗ್ ಅವರನ್ನು ಸಿಬಿಐ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ.ಸಂಜಯ್‌ನಗರದ ಸಿಬಿಐ ಕಚೇರಿಯಲ್ಲಿ ರೋಷನ್ ಬೇಗ್ ಅವರನ್ನು ಬೆಳಗ್ಗೆಯಿಂದ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಐಎಂಎ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ಮೊದಲು ಕೇಳಿ ಬಂದಿತ್ತು. ಆರೋಪಿ ಮನ್ಸೂರ್ ಖಾನ್ ನಿಂದ ಸುಮಾರು 200 ಕೋಟಿಗೂ ಹೆಚ್ಚು ಹಣವನ್ನು ರೋಷನ್ ಬೇಗ್ ಪಡೆದಿದ್ದಾರೆ. ಐಷಾರಾಮಿ ಕಾರು ಸೇರಿದಂತೆ ಬಹುತೇಕ ಬೆಲೆ ಬಾಳುವ ವಸ್ತುಗಳನ್ನು ಮನ್ಸೂರ್ ಖಾನ್ ಉಡುಗೊರೆ ನೀಡಿದ್ದ ಎಂಬ ಆರೋಪ ಕೇಳಿ ಬಂದಿತ್ತು.
ಶಿವಾಜಿನಗರದ ಕಾಂಗ್ರೆಸ್ ಶಾಸಕರಾಗಿದ್ದ ರೋಷನ್ ಬೇಗ್ ದಿಢೀರ್ ಬೆಳವಣಿಗೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಸಿಬಿಐ ತನಿಖೆಯಿಂದ ಪಾರಾಗಲು ರೋಷನ್ ಬೇಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.
ಐಎಂಎ ಕಂಪನಿಯ ಸಂಸ್ಥಾಪಕ ಮನ್ಸೂರ್ ಖಾನ್ ಒತ್ತಡದಿಂದಾಗಿ ಸಿಬಿಐ ಇಂದು ಮಾಜಿ ಮಂತ್ರಿ, ಶಿವಾಜಿ ನಗರದ ಮಾಜಿ ಶಾಸಕ ರೋಷನ್ ಬೇಗ್ ಅವರನ್ನು ಬಂಧಿಸಿದೆ.ರೋಷನ್ ಬೇಗ್ ಅವರನ್ನು ಬಂಧಿಸಿದ ಸಿಬಿಐ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈಗ ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ
Laxmi News 24×7