ಬೆಳಗಾವಿ: “ಜಾಂಬೋರೇಟ್‌ನಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಭವಿಷ್ಯದ ಭಾರತ ನಿರ್ಮಾಣದ ಕಣ್ಣುಗಳು ನನಗೆ ಕಾಣಿಸಿದವು. ನೀವು ನಿಮ್ಮ ತಂದೆ-ತಾಯಿಯ ಆಸ್ತಿ ಅಷ್ಟೇ ಅಲ್ಲ. ಇಡೀ ದೇಶದ ಆಸ್ತಿಯನ್ನಾಗಿ ನಿಮ್ಮನ್ನು ರೂಪಿಸುವ ಕೆಲಸವನ್ನು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮಾಡುತ್ತದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಉತ್ತಮ ಭವಿಷ್ಯ ಮತ್ತು ಅತ್ಯುತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ” ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಕರೆ ಕೊಟ್ಟರು.
ಬೆಳಗಾವಿ ತಾಲ್ಲೂಕಿನ ಹೊನಗಾ ಗ್ರಾಮದ ಬಳಿಯ ಫಿನಿಕ್ಸ್ ಶಾಲೆಯ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ 29ನೇ ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಇಂದು ನಾನು ಯಶಸ್ವಿ ವ್ಯಕ್ತಿಯಾಗಿ, ಸರ್ವಧರ್ಮೀಯರು ಗೌರವಿಸಲು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೊಟ್ಟ ತರಬೇತಿ ಕಾರಣ ಎಂಬುದನ್ನು ಮರೆಯುವುದಿಲ್ಲ. ಭಾರತ ವಿಶ್ವದಲ್ಲಿ ನಂ.1 ಆಗುವುದು ಪ್ರತಿಯೊಬ್ಬರ ಕನಸು. ಇದು ಸಾಕಾರಗೊಳ್ಳಲು ಮಂತ್ರಿ, ಶಾಸಕರು, ವಿಧಾನಸಭೆ, ಸಂಸತ್ತಿನಲ್ಲಿ ಕುಳಿತು ಸಂಸದರು ಮಂತ್ರಿಗಳು ಬಲಿಷ್ಠರಾದರೆ ಸಾಧ್ಯವಿಲ್ಲ. ಎಸಿ ರೂಮಿನಲ್ಲಿ ಕುಳಿತು ಐಎಎಸ್ ಅಧಿಕಾರಿಗಳೂ ಬಲಿಷ್ಠರಾದರೂ ಸಾಧ್ಯವಾಗುವುದಿಲ್ಲ. ತರಗತಿಗಳಲ್ಲಿ ಕುಳಿತ, ಮೈದಾನದಲ್ಲಿ ಆಟವಾಡುತ್ತಿರುವ ವಿದ್ಯಾರ್ಥಿಗಳು ಬಲಿಷ್ಠರಾದಾಗ ಮಾತ್ರ ಭಾರತ ದೇಶ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮುತ್ತದೆ” ಎಂದರು.![]()
“ಸ್ಕೌಂಟ್ಸ್ ಆ್ಯಂಡ್ ಗೈಡ್ಸ್ ಮಕ್ಕಳನ್ನು ದೇಶದ ಸತ್ಪ್ರಜೆ ಮಾಡುತ್ತದೆ. 1985ರಲ್ಲಿ ಸ್ಕೌಟ್ ಪ್ರತಿನಿಧಿಯಾಗಿ ಭಾಗವಹಿಸಿದ್ದೆ. ಅದಾದ 25 ವರ್ಷದ ಬಳಿಕ ಮೈಸೂರಿನಲ್ಲಿ ನಡೆದ ಜಾಂಬೋರೇಟ್‌ನಲ್ಲಿ ಮಂತ್ರಿಯಾಗಿ ನಾನು ಅತಿಥಿಯಾಗಿ ಪಾಲ್ಗೊಂಡಿದ್ದೆ. ನೀವು ನಮಗಿಂತ ದೊಡ್ಡ ವ್ಯಕ್ತಿಯಾಗಿ ಬೆಳೆಯಿರಿ. ಅದಕ್ಕೆ ಪ್ರೇರಣೆ ಸಿಗಲೆಂದು ನಮ್ಮನ್ನು ಕರೆಸಿದ್ದಾರೆ. ಐದು ದಿನಗಳ ಶಿಬಿರ ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ. ಈಗ ಸಾಮಾನ್ಯ ವಿದ್ಯಾರ್ಥಿಗಳಾಗಿ ಬಂದಿದ್ದೀರಿ, ಅಸಾಮಾನ್ಯ ವ್ಯಕ್ತಿಗಳಾಗಿ ಇಲ್ಲಿಂದ ನಿಮ್ಮ ಶಾಲೆಗಳಿಗೆ ಹೊರಡಿ” ಎಂದು ಯು.ಟಿ.ಖಾದರ್ ವಿಶ್ವಾಸ ಮೂಡಿಸಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, “ಈ ಜಾಂಬೋರೇಟ್ ನನ್ನ ಕಣ್ಣು ತೆರೆಸಿದೆ. ನನಗೆ ಪುಣ್ಯದ ದಿನ. ಬೆಳಿಗ್ಗೆ ಮುಂಡಗೋಡದಲ್ಲಿ ದಲೈಲಾಮಾ ಅವರ ಜೊತೆಗೆ ಕಾಲ ಕಳೆದು ಇಲ್ಲಿಗೆ ಬಂದಿದ್ದೇನೆ. ಮಾನವೀಯತೆ ಕಲಿಯುವ ಅವಕಾಶ ಅಲ್ಲಿ ಸಿಕ್ಕಿತು. ನಮ್ಮ ಸಿದ್ದರಾಮಯ್ಯ ಸರ್ಕಾರದ ಆಶಯದಂತೆ ಮಾನವೀಯತೆ ಮೌಲ್ಯ ತುಂಬಿರುವ ಮಕ್ಕಳನ್ನು ಬೆಳೆಸಬೇಕಿದೆ. ರಾಜ್ಯದ ಎಲ್ಲ ಶಾಲೆಗಳಲ್ಲಿ ಆಗದಿದ್ದರೆ, ಈಗ ಶುರು ಮಾಡಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಆರಂಭಿಸುತ್ತೇವೆ. ದೇಶ, ರಾಜ್ಯಗಳಿಗೆ ಗಡಿ ಇರುತ್ತದೆ. ಆದರೆ, ಮಕ್ಕಳ ಭವಿಷ್ಯಕ್ಕೆ ಯಾವುದೇ ಗಡಿ ಇಲ್ಲ. ಮಕ್ಕಳ ಭವಿಷ್ಯ ಉಜ್ವಲವಾದರೆ ಒಳ್ಳೆಯ ದೆಸೆಯಲ್ಲಿ ದೇಶವನ್ನು ಕೊಂಡೊಯ್ಯಬಹುದು” ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, “ರಕ್ಷಣೆ, ತಂತ್ರಜ್ಞಾನ, ಶಿಕ್ಷಣ ವಲಯದಲ್ಲಿ ಈ ಮಕ್ಕಳನ್ನು ಉತ್ತಮವಾಗಿ ಬೆಳೆಸಿದರೆ ಒಳ್ಳೆಯ ಭಾರತ ಮತ್ತು ಕರ್ನಾಟಕ ಕಟ್ಟಲು ಸಾಧ್ಯವಾಗುತ್ತದೆ. ಸ್ಕೌಟ್ಸ್ ಆಂಡ್ ಗೈಡ್ಸ್ ಗುರುತಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಹೆಚ್ಚು ಹಣಕಾಸು ಕೊಡುವ ಮೂಲಕ ಮತ್ತಷ್ಟು ಪರಿಣಾಮಕಾರಿ ಆಗಿ ಬೆಳೆಸಲಾಗುವುದು. ಇದು ಕೌಶಲ್ಯಗಳ ತಯಾರಿಕೆ ಕಾರ್ಖಾನೆ ಆಗಲಿದೆ. ಬದುಕಿನ ಎಲ್ಲ ಮೌಲ್ಯಗಳನ್ನು ಇಲ್ಲಿ ಕಲಿಯಬಹುದಾಗಿದೆ. ಆರು ದಿನ ಎಲ್ಲ ರೀತಿಯ ತರಬೇತಿ ಸಿಗಲಿದೆ. ಭವಿಷ್ಯದಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿಶೇಷ ಸವಲತ್ತುಗಳನ್ನು ನಮ್ಮ ಸರ್ಕಾರ ನೀಡಲಿದೆ” ಎಂದರು.
ಮಾಜಿ ಸಚಿವ ಹಾಗೂ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಘಟಕದ ಅಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, “ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಯಾವುದೇ ಧರ್ಮಕ್ಕೆ ಸೇರಿಲ್ಲ. ಪ್ರಪಂಚದ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದು ಇದರ ಉದ್ದೇಶ. ಸಮಾಜದ ಕೆಲಸಗಳಲ್ಲಿ ಸಾಮೂಹಿಕವಾಗಿ ತೊಡಗಿಸಿಕೊಳ್ಳುತ್ತಿದೆ. 300ಕ್ಕೂ ಅಧಿಕ ದೇಶಗಳ ಶಾಲೆಗಳಲ್ಲಿದೆ. ಮಕ್ಕಳು ಗುಂಪಿನ ಚಟುವಟಿಕೆಯಲ್ಲಿ ತೊಡಗಬೇಕು. ಧರ್ಮ, ಜಾತಿ, ಪ್ರಾದೇಶಿಕತೆಗಳ ಸಂಕುಚಿತ ಭಾವನೆಗಳನ್ನು ತೊಡೆದು ಹಾಕಿ ಒಗ್ಗಟ್ಟಿನ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣ ನಮ್ಮ ಗುರಿ. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನಿರಂತರ. ಇದು ಮಾನವ ಧರ್ಮದ ಪ್ರಕ್ರಿಯೆಯಾಗಿದೆ. ಈ ಯಾಗದಲ್ಲಿ ತಾವೆಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು” ಎಂದು ಕರೆ ನೀಡಿದರು.
Laxmi News 24×7