ಬೆಂಗಳೂರು: ಪ್ರತಿ ಟನ್ ಕಬ್ಬಿಗೆ 100 ರೂ. ಹೆಚ್ಚಿಸಿರುವ ಸರ್ಕಾರದ ತೀರ್ಮಾನವನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಕಬ್ಬು ಬೆಳೆಗಾರರು ನಡೆಸಿದ ಸಂಘಟಿತ ಹೋರಾಟಕ್ಕೆ ಮಣಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಪಡಿಸಿ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಎಂದಿದ್ದಾರೆ.
ಆದರೆ ನೆರೆ-ಬರ ಪರಿಹಾರ ಇರಲಿ, ಗೊಬ್ಬರ ವಿತರಣೆ ಇರಲಿ, ಖರೀದಿ ಕೇಂದ್ರಗಳ ತೆರೆಯುವಿಕೆ ಇರಲಿ, ಈ ಸರ್ಕಾರ ಬಂದಾಗಿನಿಂದ ಕಳೆದ ಎರಡೂವರೆ ವರ್ಷಗಳಲ್ಲಿ ರೈತರಿಗೆ ಸಂಬಂಧಪಟ್ಟ ಬಹುತೇಕ ನಿರ್ಧಾರಗಳು ಘೋಷಣೆ, ಭರವಸೆಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಕಾಂಗ್ರೆಸ್ ಸರ್ಕಾರ ಈ ನಿರ್ಧಾರವನ್ನೂ ಪ್ರಾಮಾಣಿಕವಾಗಿ ಜಾರಿ ಮಾಡುವ ಬಗ್ಗೆ ನಮಗೆ ಅನುಮಾನಗಳಿವೆ. ಕಬ್ಬು ಕಟಾವು, ಲೋಡಿಂಗ್, ಸಾಗಣೆ ಮತ್ತು ಅನ್‌ಲೋಡಿಂಗ್ ಸಂದರ್ಭದಲ್ಲಿ ರೈತರಿಗೆ ಆಗುವ ಸುಲಿಗೆ ಮತ್ತು ವಂಚನೆ, ಸಕ್ಕರೆ ಕಾರ್ಖಾನೆಗಳಲ್ಲಿ ತೂಕ ಹಾಕುವ ಸಂದರ್ಭದಲ್ಲಿ ಆಗುವ ಮೋಸ, ಕಬ್ಬು ಪೂರೈಸಿದ 14 ದಿನಗಳೊಳಗೆ ರೈತರಿಗೆ ಸಂಪೂರ್ಣ ಹಣ ಪಾವತಿ ಮಾಡಬೇಕು ಎಂಬ ನಿಯಮವಿದ್ದರೂ ಬಿಲ್ ಪಾವತಿ ವಿಳಂಬ ಆಗುವುದು, ಈ ರೀತಿ ಅನೇಕ ಸಮಸ್ಯೆಗಳನ್ನು ನಮ್ಮ ರೈತರು ಎದುರಿಸುತ್ತಲೇ ಇದ್ದಾರೆ. ಈ ಬಾರಿ ಯಾವ ಸಮಸ್ಯೆಯೂ ಬರದಂತೆ ರೈತರಿಗೆ ಸಕಾಲಕ್ಕೆ ಸಿಗಬೇಕಾದ ನ್ಯಾಯಯುತ ಹಣ ಸಿಗುವಂತೆ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕೆಂದು ಸಿಎಂ ಅವರನ್ನು ಒತ್ತಾಯಿಸುತ್ತೇನೆ ಎಂದರು.
Laxmi News 24×7