ಹುಬ್ಬಳ್ಳಿ ವೀರಶೈವ ಸಮಾವೇಶಕ್ಕೆ ಪಂಚಮಸಾಲಿಗರು ಹೋಗಬಾರದು: ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ
ಬೆಳಗಾವಿ: “ಹುಬ್ಬಳ್ಳಿಯಲ್ಲಿ ಶುಕ್ರವಾರ (ಇಂದು) ನಡೆಯಲಿರುವ ಅಖಿಲ ಭಾರತ ವೀರಶೈವ ಮಹಾಸಭಾ ಸಮಾವೇಶಕ್ಕೆ ಪಂಚಮಸಾಲಿ ಸಮಾಜದವರು ಯಾರೂ ಹೋಗಬಾರದು” ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗುರುವಾರ ಕರೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ವಾಮೀಜಿ ಅವರು, “ನಮ್ಮ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ನಮಗೆ ಸಹಕಾರ ನೀಡಿಲ್ಲ. ನಮ್ಮ ಮೇಲೆ ಲಾಠಿ ಚಾರ್ಜ್ ಆದರೂ ಕೂಡ ಒಂದು ಸಮಾಧಾನದ ಮಾತು ಆಡಿಲ್ಲ. ಹಾಗಾಗಿ ನಾನು ಎಲ್ಲ ನನ್ನ ಸಮಾಜದ ಮುಖಂಡರಿಗೆ ಈ ಮೂಲಕ ಸಂದೇಶ ನೀಡುತ್ತಿದ್ದೇನೆ. ಯಾರು ನಮ್ಮ ಪಂಚಮಸಾಲಿ ಮುಖಂಡರು ಹಾಗೂ ಜನರು ಆ ಸಮಾವೇಶಕ್ಕೆ ಹೋಗಬೇಡಿ. ಸಮಾವೇಶಕ್ಕೆ ಹೋಗಿ ಗೊಂದಲ ಸೃಷ್ಟಿಸುವ ಕೆಲಸ ಯಾರೂ ಮಾಡಬಾರದು” ಎಂದರು.
“ಪಂಚಮಸಾಲಿಗರು ಲಿಂಗಾಯತ ಧರ್ಮದ ಭಾಗವೇ ಆಗಿದ್ದಾರೆ. ನಾವೇ ಮೂಲ ಲಿಂಗಾಯತರು. ಅದೇ ರೀತಿ ನಾವು ಮೂಲತಃ ವೀರಶೈವರೂ ಅಲ್ಲ. ಹಾಗಾಗಿ, ವೀರಶೈವ ಪದ ನಮಗೆ ಸಂಬಂಧಿಸಿದ್ದಲ್ಲ. ನಮ್ಮ ಹಿರಿಯರ ದಾಖಲಾತಿಗಳು ಮತ್ತು ಎಲ್ಲ ಸಮುದಾಯ ಭವನಗಳ ಮೇಲೆ ಲಿಂಗಾಯತ ಅಂತಾನೇ ಇದೆ” ಎಂದು ಪ್ರಶ್ನೆಯೊಂದಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದರು.
ನಮ್ಮದು ಒಂದೇ ಧ್ಯೇಯ: “ಈಗಾಗಲೇ ನಮ್ಮ ಪಂಚಮಸಾಲಿ ವಕೀಲರ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅದರಂತೆ ಲಿಂಗಾಯತ ಪಂಚಮಸಾಲಿ ಅಂತಾನೇ ಬರೆಯಿಸಬೇಕು ಅಂತ ಹೇಳಲಾಗಿದೆ. ಬೇರೆ ಯಾವುದೇ ಸಮಾಜದ, ಮಠಗಳ ಮುಖಂಡರ ಮಾತು ಕೇಳಬಾರದು. ಪಂಚಮಸಾಲಿ ಶ್ರೀಗಳು, ಪಂಚಮಸಾಲಿ ಮುಖಂಡರು ಏನು ಹೇಳುತ್ತಾರೆ ಆ ಆದೇಶವನ್ನು ಪಾಲಿಸಬೇಕು. ಈಗಾಗಲೇ ಲಿಂಗಾಯತ ಪಂಚಮಸಾಲಿ ಕೋಡ್ ನಂ- A-0868 ಇದನ್ನು ಬರೆಯಿಸಬೇಕು. ಯಾವುದೇ ಶ್ರೀಗಳು ಗೊಂದಲ ಮಾಡಿಕೊಳ್ಳಲಿ ಬಿಡಲಿ ನಮ್ಮದು ಒಂದೇ ಧ್ಯೇಯವಿದೆ” ಎಂದು ಸ್ವಾಮೀಜಿ ತಿಳಿಸಿದರು
Laxmi News 24×7