Breaking News
Home / Uncategorized / ಕೊರೋನಾ ವಾರಿಯರ್ಸ್‍ಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರದ ಚಿಂತನೆ …….

ಕೊರೋನಾ ವಾರಿಯರ್ಸ್‍ಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರದ ಚಿಂತನೆ …….

Spread the love

ಬೆಂಗಳೂರು –ಕೋವಿಡ್ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಯೋಧರಿಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಡಿ’ ಗ್ರೂಪ್ ನೌಕರರಿಗೆ ವೇತನ ದುಪ್ಪಟ್ಟು ಮಾಡುವುದು ಸೇರಿದಂತೆ ಎಲ್ಲಾ ಆರೋಗ್ಯ ಯೋಧರಿಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರ ಚಿಂತನೆ ನಡೆಸಿದ್ದು 2-3 ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂದು ಹೇಳಿದರು.

ಆರೋಗ್ಯ ಯೋಧರಾಗಿ ಕೆಲಸ ಮಾಡುತ್ತಿರುವ ಎಲ್ಲರೂ ಸುಮಾರು 120 ದಿನಗಳಿಂದ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿಹೋಗಿದ್ದಾರೆ.

ಅವರುಗಳಿಗೆ ಸೋಂಕು ತಗುಲುವ ಅಪಾಯ ಹೆಚ್ಚಾಗಿದ್ದು ಅವರ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಹೆಚ್ಚುವರಿ ಭತ್ಯೆ ಅಲ್ಪಮಟ್ಟಿನ ಪರಿಹಾರವಾಗಲಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ನಿಯಂತ್ರಿಸಲು ಸರ್ಕಾರ ಮತ್ತಷ್ಟು ಬಿಗಿಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರತಿದಿನ ಕೋವಿಡ್ ಟೆಸ್ಟಿಂಗ್ ಹೆಚ್ಚಿಸುವ ಗುರಿಹೊಂದಲಾಗಿದ್ದು ಕಳೆದ 24 ಗಂಟೆಗಳಲ್ಲಿ 15 ಸಾವಿರಕ್ಕೂ ಅಧಿಕ ಪರೀಕ್ಷೆ ನಡೆಸಲಾಗಿದೆ, ಟೆಸ್ಟಿಂಗ್ ನಿರ್ವಹಣೆಗೆ ಹಿರಿಯ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಸಚಿವರು ತಿಳಿಸಿದರು.

# ಕೋವಿಡ್ ಸೇವೆ ಸಲ್ಲಿಸುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶೇಷಾಂಕ :
ಬೆಂಗಳೂರಿನಲ್ಲಿ ಸ್ನಾತಕೋತ್ತರ ಪರೀಕ್ಷೆ ಬರೆಯುತ್ತಿರುವ ಸುಮಾರು 2000 ವೈದ್ಯ ವಿದ್ಯಾರ್ಥಿಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಲಾಗುವುದು ಎಂದು ಅವರು ಹೇಳಿದರು.

ಅಲ್ಲದೆ ಅಂತಿಮ ಹಂತದಲ್ಲಿರುವ 2000 ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ನೀಡಲು ಬಳಸುವುದಾಗಿ ಸುಧಾಕರ್ ತಿಳಿಸಿದ್ದಾರೆ.

ಈ ಸೇವೆಯಲ್ಲಿ ತೊಡಗುವ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಲ್ಲಿ 5 ವಿಶೇಷಾಂಕಗಳನ್ನು ನೀಡುವ ಕುರಿತಂತೆ ಚರ್ಚೆ ನಡೆಸಲಾಗಿದ್ದು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಹೇಳಿದ್ದಾರೆ.

ಕೊರೋನ ಯೋಧರನ್ನು ಬೆಂಬಲಿಸಬೇಕು. ಕೊರೋನ ನಿಯಂತ್ರಣಕ್ಕೆ ನಮ್ಮ ಸರ್ಕಾರ ಬದ್ಧತೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಮಾಧ್ಯಮದವರು ಜನರಲ್ಲಿ ಆತಂಕ ಹುಟ್ಟಿಸದೆ ಸರಿಯಾದ ಮಾಹಿತಿ ನೀಡಬೇಕು. ಸಂಘಟಿತರಾಗಿ ಅರಿವು ಮೂಡಿಸಬೇಕು.

ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಬೇಕು. ಸರ್ಕಾರದ ಜೊತೆ ನಾಗರಿಕರ ಸಹಭಾಗಿತ್ವದಿಂದ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ ಎಂದು ಸಚಿವ ಸುಧಾಕರ್ ಈ ಸಂದರ್ಭದಲ್ಲಿ ಹೇಳಿದರು. ಬೂತ್ ಮಟ್ಟದ ಟಾಸ್ಕ್ ಫೋರ್ಸ್ ರಚನೆಗೆ ಸಂಬಂಧಿಸಿದಂತೆ ಇಂದು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು ಶೀಘ್ರದಲ್ಲೇ ಟಾಸ್ಕ್ ಫೋರ್ಸ್ ರಚನೆಯಾಗಲಿದೆ.

ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಇದು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ಹೇಳಿದರು.


Spread the love

About Laxminews 24x7

Check Also

ಜನರ ಬದುಕಿನ ಭಾರ ಕಡಿಮೆ ಮಾಡಿದ್ದು ಕಾಂಗ್ರೆಸ್‌ ಎಂದ ಈ. ತುಕಾರಾಂ

Spread the love ಹೊಸಪೇಟೆ: ರೈತರ ಸಾಲ ಮನ್ನಾದಿಂದ ಹಿಡಿದು ಜನ ಸಾಮಾನ್ಯರ ಬದುಕಿನ ಭಾರವನ್ನು ಕಡಿಮೆ ಮಾಡಿದ್ದು ಕಾಂಗ್ರೆಸ್‌. ರಾಜ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ