ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬದಲು ಮತಪತ್ರಗಳ ಬಳಸಲು ಅನುವು ಮಾಡುವ ನಿಯಮ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಗೊಂದಲ ಉಂಟಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಸಲು ಕಾಂಗ್ರೆಸ್ ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಆ ನಿಟ್ಟಿನಲ್ಲಿ ನಿಯಮ ತಿದ್ದುಪಡಿಗೆ ಮುಂದಾಗಿದೆ. ಈ ಸಂಬಂಧ ಈಗಾಗಲೇ ನಾಲ್ಕು ಪ್ರತ್ಯೇಕ ಕರಡು ವಿಧೇಯಕವನ್ನು ರೂಪಿಸಿದೆ. ನಾಲ್ಕು ಕಾಯ್ದೆಗಳಿಗೆ ತಿದ್ದುಪಡಿ ತಂದರೆ ಮಾತ್ರ ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರ ಆದೇಶ ನೀಡಲು ಸಾಧ್ಯವಾಗಲಿದೆ. ಈ ಮಧ್ಯೆ ಸುಗ್ರೀವಾಜ್ಞೆ ತರಲು ಸರ್ಕಾರ ಮುಂದಾಗಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಸುಗ್ರೀವಾಜ್ಞೆ ಅಗತ್ಯತೆಯ ಬಗ್ಗೆ ಜಿಜ್ಞಾಸೆ ಎದುರಾಗಿದೆ.
ಮತಪತ್ರ ಬಳಕೆ ಸಂಬಂಧ ಕುಲದೀಪ್ ನಯ್ಯರ್ ವರ್ಸಸ್ ಕೇಂದ್ರ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2006ರಲ್ಲಿ ನೀಡಿದ್ದ ತೀರ್ಪು ಹಿನ್ನೆಲೆ ಸುಗ್ರೀವಾಜ್ಞೆ ಹೊರಡಿಸುವ ಅಗತ್ಯವೇನಿದೆ? ಎಂಬ ಪ್ರಶ್ನೆ ಸಂಪುಟ ಸಭೆಯಲ್ಲಿ ಸುಳಿದಾಡಿದೆ. ಇವಿಎಂ ಅಥವಾ ಮತಪತ್ರ ಯಾವುದಾದರೂ ಬಳಕೆಯಾಗಲಿ. ಗೌಪ್ಯತೆಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಈಗಾಗಲೇ ನಾಲ್ಕು ಮಸೂದೆಗಳ ಕರಡು ಸಿದ್ಧವಾಗಿದ್ದು, ನಾಲ್ಕು ಕಾಯ್ದೆಗಳಿಗೆ ತಿದ್ದುಪಡಿ ಕರಡು ಪ್ರಸ್ತಾವನೆಯು ಸಿದ್ಧವಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನೇ ಊರುಗೋಲು ಮಾಡಿಕೊಂಡು ನಾಲ್ಕು ಕಾಯ್ದೆಗಳಿಗೆ ತಿದ್ದುಪಡಿ ತಂದು ಜಾರಿಗೊಳಿಸಬೇಕೆಂಬ ಅಭಿಪ್ರಾಯ ಸಂಪುಟ ಸಭೆಯಲ್ಲಿ ಬಿಂಬಿತವಾಯಿತು ಎಂದು ಮೂಲಗಳು ಮಾಹಿತಿ ನೀಡಿವೆ.