ಅವೈಜ್ಞಾನಿಕ ಚಕ್ ಡ್ಯಾಮ್; ಬೆಳೆಗೆ ನುಗ್ಗಿದ ನೀರು…ಅಧಿಕಾರಿಯಿಂದ ರೈತನಿಗೆ ಹುಚ್ಚು ಮಂಗ್ಯಾ ಎಂದು ಬೈದ ಆರೋಪ
ಅವೈಜ್ಞಾನಿಕ ಚಕ್ ಡ್ಯಾಮ್20 ಎಕರೆ ಬೆಳೆ ಜಲಾವೃತ, ರೈತರ ಆಕ್ರೋಶಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಣ್ಣೀರಿಟ್ಟ ಕೃಷಿಕರು
ಹುಚ್ಚು ಮಂಗ್ಯಾ ಹೋಗು ಎಂದ ಅಧಿಕಾರಿಗಳ ವಿರುದ್ಧ ಅಸಮಾಧಾನ
ಅವೈಜ್ಞಾನಿಕ ಚೆಕ್ ಡ್ಯಾಂ ನಿರ್ಮಿಸಿ ಬೆಳೆಹಾನಿಯಾದ ರೈತರ ಸಮಸ್ಯೆಗಳನ್ನು ಕೇಳುವ ಬದಲೂ ರೈತರನ್ನೇ ನಿಂದಿಸಿ ಕಳುಹಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ, ಹುನಗುಂದ ತಾಲ್ಲೂಕು, ಉಪ್ಪಾನಾಳ ಗ್ರಾಮ ರೈತರಿಗೆ ಚಕ್ ಡ್ಯಾಮ್ ಎಂಬುದು ಅಭಿವೃದ್ಧಿಯ ಗುರಿಯಾಗಿರಬೇಕಿತ್ತು, ಆದರೆ ಈಗ ಅದು ಸಂಕಟದ ಮೂಲವಾಗಿದೆ. ಬೇಜವಾಬ್ದಾರಿಯಿಂದ ನಿರ್ಮಿಸಲಾದ ಅವೈಜ್ಞಾನಿಕ ಚಕ್ ಡ್ಯಾಮ್‌ನಿಂದ ಸುಮಾರು 20 ಎಕರೆ ಜಮೀನು ಜಲಾವೃತಗೊಂಡಿದ್ದು, ರೈತರ ಕೈಗೆ ಬಂದ ಬೆಳೆಗಳು ನೀರಿನಲ್ಲಿ ನಾಶವಾಗಿವೆ.

ಗ್ರಾಮದ ರಂಗಸಮುದ್ರ ಕೆರೆಗೆ ಸುಮಾರು ₹50 ಲಕ್ಷ ವೆಚ್ಚದಲ್ಲಿ ಚಕ್ ಡ್ಯಾಮ್ ಮತ್ತು ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿಯನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕೈಗೊಂಡಿದೆ. ಈ ನಿರ್ಮಾಣಕ್ಕೆ ಪೂರ್ವದಲ್ಲಿಯೇ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅಧಿಕಾರಿಗಳು ಕ್ಯಾರೆ ಎನ್ನಲಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ನೀರು ಹೊಲಗಳಿಗೆ ನುಗ್ಗಿ ಈರುಳ್ಳಿ, ಹತ್ತಿ, ಜೋಳ ಸೇರಿದಂತೆ ಹಲವಾರು ಬೆಳೆಗಳನ್ನು ನಾಶಮಾಡಿದೆ.

ರೈತ ಪರಸಪ್ಪ ಗೊಡಿ ಅವರು ಕಣ್ಣೀರು ಹಾಕುತ್ತಾ, ಕೈಯಲ್ಲಿ ವಿಷದ ಬಾಟಲಿ ಹಿಡಿದು ನಿಂತ ದೃಶ್ಯ ಹೃದಯವಿದ್ರಾವಕವಾಗಿತ್ತು. “ನಮ್ಮ ಹೊಲಗಳಿಗೆ ಭೇಟಿ ಕೊಡಿ ಇಲ್ಲದಿದ್ದರೆ ವಿಷ ಕುಡಿದು ಸಾವಿನ ದಾರಿ ಕಂಡುಕೊಳ್ಳಬೇಕಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿ 12 ತಿಂಗಳು ನೀರು ಹರಿಯುತ್ತೆ, ಇಲ್ಲೆಂತು ಡ್ಯಾಮ್ ಅವಶ್ಯಕ ಎಂದು ಪ್ರಶ್ನಿಸಿದ ರೈತನಿಗೆ “ಅಧಿಕಾರಿಯೊಬ್ಬರು ರೈತನಿಗೆ ಹುಚ್ಚು ಮಂಗ್ಯಾ ಹೋಗು ಎಂದು ಬೈದಿದ್ದಾರೆ” ಎಂಬ ಆರೋಪವೂ ಕೇಳಿಬಂದಿದೆ.