ಮೈಸೂರು: ಸುಮಾರು ಹತ್ತು ವರ್ಷಗಳಿಂದ ಪ್ರೀತಿಯಲ್ಲಿ ಒಂದಾಗಿದ್ದ ನಗರದ ನಿವಾಸಿ ಚಂದನ್ ಮತ್ತು ಲಾವಣ್ಯ ಅವರ ಸರಳ ಮದುವೆ ಮೂಲಕ ಹೊಸ ಬದುಕನ್ನು ಪ್ರಾರಂಭಿಸಿದ್ದಾರೆ. ಮನೆಯವರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆ ಎಂದರೆ ಕೇವಲ ಸಂಬಂಧಿಕರು-ಸ್ನೇಹಿತರಿಗೆ ಔತಣಕೂಟ, ಆನಂದ-ಆಡಂಬರವೆಂದುಕೊಳ್ಳುವ ಅನೇಕ ಯುವ ದಂಪತಿಗಳಿಗೆ ಈ ಜೋಡಿ ನಿಜಕ್ಕೂ ಮಾದರಿಯಾಗಿದೆ. ಮಾಂಗಲ್ಯ ಧಾರಣೆ ಬಳಿಕ ನವ ದಂಪತಿ ಇಬ್ಬರೂ ಸ್ವಇಚ್ಛೆಯಿಂದಲೇ ಮೈಸೂರಿನ ಅಗರವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯರ ಸಮ್ಮುಖದಲ್ಲಿ ದೇವಸ್ಥಾನದಲ್ಲೇ ನೇತ್ರದಾನ ಪ್ರಕ್ರಿಯೆಗೆ ಸಹಿ ಹಾಕಿದ್ದಾರೆ.
ಮುಂದಿನ ಪೀಳಿಗೆಯ ನಾಲ್ಕು ಮಂದಿಗೆ, ನಾಲ್ಕು ಕುಟುಂಬಗಳಿಗೆ ಬೆಳಕಾಗಿರುವ ಇವರು ಸಮಾಜದ ಮುಂದೆ ವಿಶಿಷ್ಟ ಮಾದರಿಯಾಗಿದ್ದಾರೆ.
ಈ ಕುರಿತು ಮಾತನಾಡಿದ ಮದುಮಗ ಚಂದನ್, “ಇಂದಿನ ಯುವಕರಿಗೆ ಮದುವೆ ಎಂದರೆ ಹಳದಿ, ಸಂಗೀತ, ಪ್ರೀ-ವೆಡ್ಡಿಂಗ್ ಫೋಟೋ ಶೂಟ್ ಅಷ್ಟೆ. ನಾವು ಸಹ ಹಾಗೆ ಅಂದುಕೊಂಡಿದ್ದೆವು. ಆದರೆ ಮದುವೆಯ ಕ್ಷಣ ಸಮಾಜಕ್ಕೆ ಕೊಡುಗೆಯಾಗಿ ನೆನಪಾಗಲಿ ಎಂದುಕೊಂಡಾಗ ಡಾ. ರಾಜ್ ಕುಮಾರ್ ಅವರ ದಾರಿಯನ್ನು ಅನುಸರಿಸಿ ನೇತ್ರದಾನ ಮಹಾದಾನ ಎಂಬ ಮಾತಿನಂತೆ ನಾವು ಈ ಕಾರ್ಯಕ್ಕೆ ಮುಂದಾದೆವು. ಇದರಿಂದ ಮನಸ್ಸಿಗೆ ನಿಜವಾದ ಆತ್ಮತೃಪ್ತಿ ದೊರಕಿದೆ” ಎಂದಿದ್ದಾರೆ.ವಧು ಲಾವಣ್ಯ ಅವರು ಮಾತನಾಡಿ, “ಕುಟುಂಬದವರ ಒಪ್ಪಿಗೆಯೊಂದಿಗೆ ಇಂದು ಮದುವೆಯಾಗಿ ಹತ್ತು ವರ್ಷಗಳ ಪ್ರೀತಿಯ ಸಾರ್ಥಕತೆ ಕಂಡಿದ್ದೇವೆ. ಈ ಕ್ಷಣವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ನೇತ್ರದಾನಕ್ಕೆ ಸಹಿ ಹಾಕಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಂದಿ ಇಂತಹ ಕಾರ್ಯಕ್ಕೆ ಮುಂದೆ ಬರಲಿ ಎಂದು ಹಾರೈಸುತ್ತೇನೆ” ಎಂದು ತಿಳಿಸಿದ್ದಾರೆ.