ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಪರೀಕ್ಷಿಸುವ ಬ್ರೀತ್ ಅನಲೈಸರ್ಗಳು(ಆಲ್ಕೋ ಮೀಟರ್) ದೋಷರಹಿತವಾಗಿವೆ ಎಂಬುದಾಗಿ ಖಚಿತ ಪಡಿಸುವಿರಾ? ಎಂದು ನಗರ ಸಂಚಾರಿ ಪೊಲೀಸರನ್ನು ಹೈಕೋರ್ಟ್ ಮೌಖಿಕವಾಗಿ ಪ್ರಶ್ನಿಸಿದೆ.
ಮದ್ಯಸೇವನೆ ಮಾಡದಿದ್ದರೂ ಮದ್ಯಪಾನ ಮಾಡಿರುವುದಾಗಿ ಬ್ರೀತ್ ಅನಲೈಸರ್ ತೋರಿಸಿದ ಪರಿಣಾಮ 10 ಸಾವಿರ ರೂ. ದಂಡ ವಿಧಿಸಿದ್ದ ಪೊಲೀಸರ ಕ್ರಮ ಪ್ರಶ್ನಿಸಿ ನಗರದ ಸಿ. ಅಜಯ್ ಕುಮಾರ್ ಕಶ್ಯಪ್ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ನ್ಯಾಯಪೀಠ, ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಮತ್ತು ಸಂಚಾರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟೆಂಬರ್ 3ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ನ್ಯಾಯಾಲಯ, ವಾಹನ ಚಾಲಕರು ಕುಡಿದು ವಾಹನ ಚಲಾಯಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಸಂಚಾರ ಪೊಲೀಸರು ಬಳಸುವ ಬ್ರೀತ್ ಅನಲೈಸರ್ಗಳನ್ನು ಯಾವುದೇ ರೀತಿಯಲ್ಲಿ ತಿರುಚಬಾರದು ಎಂದು ಹೇಳಿತು. ಅಲ್ಲದೇ, ಅರ್ಜಿದಾರರ ವಿರುದ್ದ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಮಧ್ಯಂತರ ಆದೇಶ ನೀಡಿದೆ.
ಈ ಉಸಿರಾಟದ ವಿಶ್ಲೇಷಕಗಳನ್ನು ಸರಿಯಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಅವು ದೋಷ ರಹಿತವಾಗಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಯಾವ ಕಾರ್ಯ ವಿಧಾನ ಅನುಸರಿಸಲಾಗುತ್ತಿದೆ ಎಂಬುದರ ಕುರಿತು ವಿವರ ನೀಡಬೇಕು ಎಂದು ನ್ಯಾಯಾಲಯ ಕೇಳಿದೆ.
ಮದ್ಯಪಾನ ಮಾಡಿ ವಾಹನ ಚಲಾಯಿಸುವವರಿಗೆ ಮೊದಲ ಬಾರಿ ಸಿಕ್ಕಿಬಿದ್ದರೆ, 10 ಸಾವಿರ ರೂ. ದಂಡ ಅಥವಾ ಆರು ತಿಂಗಳ ಜೈಲು ಶಿಕ್ಷೆ ಮತ್ತು ಎರಡನೇ ಬಾರಿಗೆ ಅಪರಾಧ ಎಸಗಿದರೆ 15 ಸಾವಿರ ರೂ. ದಂಡದಂತಹ ಗಂಭೀರ ಪರಿಣಾಮಗಳಿವೆ. ಬ್ರೀತ್ ಅನಲೈಸರ್ಗಳು ದೋಷದಿಂದ ಕೂಡಿವೆ ಎಂದು ಅರ್ಜಿದಾರರು ಸಮರ್ಥನೆ ನೀಡುತ್ತಿದ್ದಾರೆ. ಆ ಬ್ರೀತ್ ಅನಲೈಸರ್ ಯಂತ್ರ ದೋಷ ರಹಿತವಾಗಿವೆ ಎಂದು ಖಚಿತಪಡಿಸಿಕೊಳ್ಳಲು ಪೊಲೀಸ್ ಇಲಾಖೆಯು ಜಾರಿಯಲ್ಲಿರುವ ಕಾರ್ಯವಿಧಾನದ ಬಗ್ಗೆ ಲಿಖಿತ ವಿವರಣೆ ಬಯಸುತ್ತೇವೆ ಎಂದು ಪೀಠ ತಿಳಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಮ್ಮ ಬಳಿ ವೈದ್ಯಕೀಯ ಪ್ರಮಾಣ ಪತ್ರ ಇದೆ ಎಂದು ಅರ್ಜಿದಾರರು ಹೇಳಿದರೂ ಸಹ ಪೊಲೀಸರು ವಿಚಾರಣೆಗಾಗಿ ಠಾಣೆಗೆ ಪದೇ ಪದೆ ಕರೆಸಿಕೊಳ್ಳುತ್ತಿದ್ದರು ಎಂದು ಪೀಠಕ್ಕೆ ತಿಳಿಸಿದ್ದಾರೆ.